-------------ಕನ್ನಡಪ್ರಭ ವಾರ್ತೆ ಸಾಲಿಗ್ರಾಮತಾಲೂಕಿನ ಕುಪ್ಪಳ್ಳಿ ಗ್ರಾಮಕ್ಕೆ ಮಂಜೂರಾಗಿದ್ದ ಇಂದಿರಾಗಾಂಧಿ ವಸತಿ ಶಾಲೆಯನ್ನು ಬೇರೆಡೆಗೆ ಸ್ಥಳಾಂತರ ಮಾಡುತ್ತಿರುವುದನ್ನು ಖಂಡಿಸಿ ಮಾಜಿ ಸಚಿವ ಸಾ.ರಾ. ಮಹೇಶ್ ಅವರ ನೇತೃತ್ವದಲ್ಲಿ ಕುಪ್ಪಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಟ್ಟಣದ ನಾಡಕಚೇರಿ ಮುಂಭಾಗ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.ಕುಪ್ಪಳ್ಳಿಯ ಅರಣ್ಯಕ್ಕೆ ಹೊಂದಿಕೊಂಡಿರುವ ಸ್ಥಳದಲ್ಲಿ ಸುಮಾರು 15 ಕೋಟಿ ವೆಚ್ಚದಲ್ಲಿ ಉದ್ದೇಶಿತ ಇಂದಿರಾ ಗಾಂಧಿ ವಸತಿ ಶಾಲೆಯನ್ನು ಅರಕೆರೆ ಗ್ರಾಮದಲ್ಲಿ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿರುವುದನ್ನು ಖಂಡಿಸಲಾಯಿತು.ಸ್ಥಳದಲ್ಲಿದ್ದ ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳನ್ನು ಉದ್ದೇಶಿಸಿ ವ ಸಾ.ರಾ. ಮಹೇಶ್ ಮಾತನಾಡಿ, ಕಾನೂನಿನಲ್ಲಿ ಅವಕಾಶವಿದ್ದರೂ ಅರಣ್ಯ ಜಾಗ ಎಂಬ ನೆಪ ನೀಡಿ ಬೇರೊಂದು ಜಾಗಕ್ಕೆ ಈ ವಸತಿ ಶಾಲೆಯನ್ನು ಸ್ಥಳಾಂತರ ಮಾಡುತ್ತಿರುವುದು ಸರಿಯಲ್ಲ. ನಾನು ಅಧಿಕಾರದಲ್ಲಿದ್ದಾಗ ಎಲ್ಲಾ ಹೋಬಳಿಗೆ ಒಂದರಂತೆ ವಸತಿ ಶಾಲೆಗಳನ್ನು ಮಂಜೂರು ಮಾಡಿಸಿದ್ದೆ. ಅಭಿವೃದ್ಧಿಯಲ್ಲಿ ಹಿಂದುಳಿದ ಕುಪ್ಪಳ್ಳಿ ಗ್ರಾಮಕ್ಕೆ ವಸತಿ ಶಾಲೆ ಮಂಜೂರಾಗಿದ್ದರಿಂದ ತಾತ್ಕಾಲಿಕವಾಗಿ ಕುಪ್ಪಳ್ಳಿಯಲ್ಲಿ ಶಾಲೆ ಆರಂಭಿಸಲಾಯಿತು.ತಾತ್ಕಾಲಿಕ ಶಾಲಾ ಕಟ್ಟಡದ ಪಕ್ಕದಲ್ಲಿದ್ದ 10 ಎಕರೆ ಸರ್ಕಾರಿ ಜಾಗವನ್ನು ಖಾಯಂ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಮಂಜೂರು ಮಾಡಿಸಿದ್ದೆ. ಈಗ ಏಕಾಏಕಿ ಅರಣ್ಯ ಇಲಾಖೆಯು ಜಾಗ ತನ್ನದೆಂದು ತಗಾದೆ ತೆಗೆದಿದೆ. ಹಾಲಿ ಶಾಸಕರು ಈ ಸಮಸ್ಯೆಯನ್ನು ಬಗೆಹರಿಸಬಹುದು. ಅವರಿಗೆ ಕಾನೂನಿನ ಪರಿಜ್ಞಾನ ಇಲ್ಲ ಎಂದು ಕಿಡಿಕಾರಿದರು.ಅದೇ ಜಾಗದಲ್ಲಿ ವಸತಿ ಶಾಲೆ ನಿರ್ಮಾಣಕ್ಕೆ ಕಾನೂನಿನಲ್ಲಿ ಅವಕಾಶ ಇದೆ . ಉದ್ದೇಶಿತ ಜಾಗದಲ್ಲೇ ವಸತಿ ಶಾಲೆ ನಿರ್ಮಾಣ ಮಾಡದಿದ್ದರೆ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು. ಸ್ಥಳೀಯ ಶಾಸಕರು ಕುಪ್ಪಳ್ಳಿಯಲ್ಲಿ ವಸತಿ ಶಾಲೆ ನಿರ್ಮಾಣಕ್ಕಾಗಿ ಇಚ್ಛಾಸಕ್ತಿಯಿಂದ ಕೆಲಸ ಮಾಡಬೇಕು. ನಿಯಮಾವಳಿಗಳಲ್ಲಿ ಅದೇ ಜಾಗದಲ್ಲಿ ವಸತಿ ಶಾಲೆ ಕಟ್ಟಡ ಕಟ್ಟಲು ಅವಕಾಶ ಇರುವುದರಿಂದ ಕಂದಾಯ,ಅರಣ್ಯ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಂಟಿಯಾಗಿ ಪರಿಶೀಲನೆ ಮಾಡಬೇಕು. ಕುಪ್ಪಳ್ಳಿಯಲ್ಲೇ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.ವಸತಿ ಶಾಲೆ ನಿರ್ಮಾಣ ಉದ್ದೇಶಿತ ಜಾಗ ಡೀಮ್ಡ್ ಅರಣ್ಯವಾಗಿದ್ದು, ಆ ಜಾಗದಲ್ಲಿ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಅಡ್ಡಿಯಾಗಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿ ಸಮಜಾಯಿಸಿ ನೀಡಿದರು. ಇದರಿಂದ ಆಕ್ರೋಶಗೊಂಡ ಸಾ.ರಾ. ಮಹೇಶ್ ಅವರು, ಅರಣ್ಯ ಇಲಾಖೆ ರೈತರು ಸೇರಿದಂತೆ ಎಲ್ಲರಿಗೂ ಕಿರಿಕಿರಿ ಮಾಡುತ್ತಿದೆ. ರಾಜ್ಯದ ಅನೇಕ ಕಡೆ ಮೀಸಲು ಅರಣ್ಯ ಒತ್ತುವರಿಯಾಗಿದ್ದರೂ ತೆರವು ಮಾಡುತ್ತಿಲ್ಲ.ಇಲ್ಲಿ ಸಾರ್ವಜನಿಕ ಉದ್ದೇಶಕ್ಕೆ ವಸತಿ ಶಾಲೆ ನಿರ್ಮಾಣ ಮಾಡಲು ಜಾಗ ಮಂಜೂರಾಗಿದ್ದರು ಅರಣ್ಯ ಇಲಾಖೆ ತಡೆ ಒಡ್ಡುತ್ತಿದೆ. ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಬಳಕೆಯಾಗುವಷ್ಟು ಜಾಗವನ್ನು ಪರ್ಯಾಯವಾಗಿ ಅರಣ್ಯ ಇಲಾಖೆಗೆ ನೀಡಲು ಸರ್ಕಾರಿ ಜಾಗವಿದೆ. ಕಟ್ಟಡದ ಉದ್ದೇಶಿತ ಜಾಗದಲ್ಲಿ ಯಾವುದೇ ಬೆಲೆ ಬಾಳುವ ಮರಗಳಿಲ್ಲ. ನೀಲಗಿರಿ ಮರಗಳಿದ್ದು, ಈ ಮರಗಳನ್ನು ತೆರವು ಮಾಡಲು ನಿಯಮಗಳಲ್ಲಿ ಅವಕಾಶವಿದೆ. ಇದೇ ಜಾಗದಲ್ಲಿ ಶಾಲೆ ನಿರ್ಮಾಣವಾದರೆ ತಾಲೂಕಿನ ಗಡಿ ಗ್ರಾಮವಾಗಿರುವ ಕುಪ್ಪಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ಅಭಿವೃದ್ಧಿಗೆ ಅನುಕೂಲವಾಗಲಿದೆ. ಈ ಕಾರಣಕ್ಕಾಗಿ ನಾನು ಶಾಸಕನಾಗಿದ್ದಾಗ ಕುಪ್ಪಳ್ಳಿ ಗ್ರಾಮಕ್ಕೆ ವಸತಿ ಶಾಲೆ ಮಂಜೂರು ಮಾಡಿಸಿದ್ದೆ ಎಂದರು.ಬಳಿಕ ಸ್ಥಳದಲ್ಲಿದ್ದ ತಹಸೀಲ್ದಾರ್ ರುಕಿಯಾ ಬೇಗಂ, ವಲಯ ಅರಣ್ಯಾಧಿಕಾರಿ ಮಂಜು ಹಾಗೂ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಮೇಘನ ಅವರು ಈ ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.ಕುಪ್ಪಳ್ಳಿ, ದೇವಿತಂದ್ರೆ, ಬಸವರಾಜಪುರ, ಮುದುಗುಪ್ಪೆ, ಮೇಲೂರು, ಸಾಲಿಗ್ರಾಮ, ಮಿರ್ಲೆಯ ಸಾರ್ವಜನಿಕರು ಹಾಗೂ ಜೆಡಿಎಸ್ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇಂದಿರಾಗಾಂಧಿ ವಸತಿ ಶಾಲೆ ಸ್ಥಳಾಂತರಕ್ಕೆ ವಿರೋಧ
ಕಾನೂನಿನಲ್ಲಿ ಅವಕಾಶವಿದ್ದರೂ ಅರಣ್ಯ ಜಾಗ ಎಂಬ ನೆಪ ನೀಡಿ ಬೇರೊಂದು ಜಾಗಕ್ಕೆ ಈ ವಸತಿ ಶಾಲೆಯನ್ನು ಸ್ಥಳಾಂತರ ಮಾಡುತ್ತಿರುವುದು ಸರಿಯಲ್ಲ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.