ಸಾರಾಂಶ
ಕನಕಪುರ: ಬ್ಯಾಂಕ್‌ನಿಂದ ತೆಗೆದುಕೊಂಡಿರುವ ಸಾಲ ಸರ್ಕಾರ ಮನ್ನಾ ಮಾಡದ ಕಾರಣ ರೈತರು, ಮಹಿಳೆಯರು ಹಾಗು ಗ್ರಾಹಕರು ತಪ್ಪದೇ ಸಾಲ ಮರುಪಾವತಿ ಮಾಡುವಂತೆ ಹಾಲಿ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಕನಕಪುರ ಶಾಖೆ ಕೆಸಿಸಿ ಬೆಳೆ ಸಾಲ, ಮಧ್ಯಮಾವಧಿ ಸಾಲ ಮತ್ತು ಮಹಿಳಾ ಸ್ವ-ಸಹಾಯ ಸಂಘಗಳ ಸಾಲ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ರೈತರ, ಮಹಿಳೆಯರ ಅಭ್ಯುದಯಕ್ಕಾಗಿ ಬ್ಯಾಂಕ್‌ಗಳು ಹಲವು ರೀತಿಯ ಸಾಲಗಳನ್ನು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ನೀಡುತ್ತಿದ್ದು, ಸದ್ಬಳಸಿಕೊಂಡು ಆದಾಯಗಳಿಸಿ ನೆಮ್ಮದಿಯ ಜೀವನ ನಡೆಸುವಂತೆ ಸಲಹೆ ನೀಡಿದರು.ಬ್ಯಾಂಕ್ ಗಳು ನೀಡುವ ಸಾಲಗಳನ್ನು ಯಾವುದೇ ಸರ್ಕಾರ ಇದ್ದರೂ ಮನ್ನಾ ಮಾಡುವುದಿಲ್ಲ ಎಂಬುದನ್ನು ನಮ್ಮ ಜನತೆ ಅರ್ಥ ಮಾಡಿಕೊಂಡು ಸಕಾಲದಲ್ಲಿ ಸಾಲ ಮರುಪಾವತಿಸಿದರೆ ಇನ್ನೂ ಹೆಚ್ಚಿನ ಸೌಲಭ್ಯಗಳು ದೊರೆಯುವುದರ ಜೊತೆಗೆ ಬ್ಯಾಂಕ್ ಸಹ ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಹೈನುಗಾರಿಕೆ ಅಡಿಯಲ್ಲಿ ನೀಡುವ ಹಸು ಸಾಲ ಹೊರ ರಾಜ್ಯದಿಂದ ತರುವ ಹಸುಗಳಿಗೆ ಅನ್ವಯಿಸಲಿದ್ದು ತಾಲೂಕಿನ, ಜಿಲ್ಲೆಯ ಹಸುಗಳ ಖರೀದಿಗೆ ಸಾಲ ನೀಡುವುದಿಲ್ಲ ಎಂಬುದನ್ನು ರೈತರು ಗಮನದಲ್ಲಿಟ್ಟುಕೊಂಡು ಉತ್ತಮ ರಾಸುಗಳನ್ನು ಸಾಕಿ ಹೆಚ್ಚಿನ ಲಾಭ ಗಳಿಸುವುದರ ಜೊತೆಗೆ ಯುವಕರಿಗೆ ಉದ್ಯೋಗ ಅವಕಾಶ ನೀಡುವಂತೆ ಸಲಹೆ ನೀಡಿದರು.
ತಾಲೂಕಿನ ಬ್ಯಾಂಕಿನ ನಾಲ್ಕು ಶಾಖೆಗಳಿಂದ ನೂರಾರು ರೈತರು ಹಾಗೂ ಸ್ವಸಹಾಯ ಸಂಘಗಳಿಗೆ ಸಾಂಕೇತಿಕವಾಗಿ ಸಾಲದ ಚೆಕ್ ವಿತರಿಸಿ ಎಲ್ಲರಿಗೂ ಶುಭ ಕೋರಿದರು.ಈ ವೇಳೆ ವಿಧಾನ ಪರಿಷತ್ ಸದಸ್ಯ ಎಸ್.ರವಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯ್ ದೇವ್, ಬ್ಯಾಂಕ್ ನಿರ್ದೇಶಕ ಧನಂಜಯ್, ಡಿಜಿಎಂ ಸುರೇಶ್, ಕನಕಪುರ ಶಾಖೆಯ ಕಿರಣ್ ಕುಮಾರ್, ಆನಂದ್, ದೊಡ್ಡಆಲಹಳ್ಳಿ
ಶಾಖೆಯ ವಿಜಯ್, ಸಾತನೂರು ಶಾಖೆಯ ರವಿ ಪ್ರಸಾದ್, ಕೋಡಿಹಳ್ಳಿ ಶಾಖೆಯ ಕುಮಾರ್ ಇತರರು ಪಾಲ್ಗೊಂಡಿದ್ದರು.ಕೆ ಕೆ ಪಿ ಸುದ್ದಿ 01:
ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಕನಕಪುರ ತಾಲೂಕು ಶಾಖೆಗಳ ವತಿಯಿಂದ ರೈತರು ಹಾಗೂ ಸ್ವ ಸಹಾಯ ಸಂಘಗಳಿಗೆ ವಿವಿಧ ಸಾಲಗಳ ಚೆಕ್ ವಿತರಣೆ ಮಾಡಲಾಯಿತು.