ಕನಕಗಿರಿ: ಮಂತ್ರಾಲಯ ರಾಯರ ಮಠದ ಸುಶಮೀಂದ್ರಸ್ವಾಮಿಗಳು ಪೀಠಾಧಿಪತಿಗಳಾಗಿದ್ದ ಸಮಯದಲ್ಲಿ ಅನೇಕ ಸತ್ಕಾರ್ಯ ಮಾಡುವ ಮೂಲಕ ಜನಮುಖಿಯಾಗಿದ್ದಾರೆ ಎಂದು ಸಾಹಿತಿ ಪವನಕುಮಾರ ಗುಂಡೂರು ಹೇಳಿದರು.
ಅವರು ತಾಲೂಕಿನ ನವಲಿ ಗ್ರಾಮದ ಐತಿಹಾಸಿಕ ಪ್ರಸಿದ್ಧ ಶ್ರೀಭೋಗಾಪುರೇಶ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸುಶಮೀಂದ್ರ ತೀರ್ಥರ ಆರಾಧನಾ ಮಹೋತ್ಸವದಲ್ಲಿ ಶನಿವಾರ ಮಾತನಾಡಿದರು.ಸುಶಮೀಂದ್ರರು ಭಕ್ತರ ಆಶೋತ್ತರಗಳಿಗೆ ಸ್ಪಂಧಿಸುವ ಮೂಲಕ ಶ್ರೀಮಠವನ್ನು ಉತ್ತುಂಗಕ್ಕೆ ಬೆಳೆಸಿದ್ದಾರೆ. ಈಗಲೂ ಮಂತ್ರಾಲಯಕ್ಕೂ ನವಲಿಗೂ ಅವಿನಾಭಾವ ಸಂಬಂಧ ಇದೆ. ಶ್ರೀಮಠದ 30ನೇ ಪೀಠಾಧಿಪತಿಗಳಾಗಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ನವಲಿ ಭೋಗಾಪುರೇಶನ ಸನ್ನಿಧಾನಕ್ಕೆ ಎರಡು ಭಾರಿ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದಿದ್ದು, ಭಿನ್ನ ಮೂರ್ತಿಗೆ ಪೂಜೆ ಸಲ್ಲಿಸುವ ಸಂಪ್ರದಾಯಕ್ಕೆ ಬೆರಗಾಗಿದ್ದರು. ವಿಭಿನ್ನ ಪದ್ಧತಿಯಿಂದ ಶ್ರೀಗಳಿಗೆ ನವಲಿಯ ಭೋಗಾಪುರೇಶ ಮಂದಿರ ಪ್ರೀತಿಗೆ ಪಾತ್ರವಾಗಿರುವ ಪರಿ ವಿವರಿಸಿದರು.
ಇದಕ್ಕೂ ಮೊದಲು ದೇವಸ್ಥಾನದ ಪ್ರಾಂಗಣದಲ್ಲಿ ಸುಶಮೀಂದ್ರರ ಭಾವಚಿತ್ರ ಹಾಗೂ ಪಾದುಕೆಗಳ ಮೆರವಣಿಗೆ ನಡೆಯಿತು.ಕನಕಗಿರಿಯ ಶ್ರೀರಾಘವೇಂದ್ರಸ್ವಾಮಿ ಭಜನಾ ಮಂಡಳಿಯವರಿಂದ ಭಜನೆ ಜರುಗಿತು.ಸಾಮೂಹಿಕ ಭಜನೆಯಲ್ಲಿ ಬ್ರಾಹ್ಮಣ ಸಮಾಜದ ಮಹಿಳೆಯರು ಭಾಗಿಯಾಗಿ ನೃತ್ಯ ಮಾಡಿ ಗಮನ ಸೆಳೆದರು.ಈ ವೇಳೆ ಶ್ರೀನಾಥ ಪೂಜಾರ ನವಲಿ, ಪುರುಷೋತ್ತಮ ನವಲಿ, ಗೋವಿಂದಾಚಾರ್, ನಾರಾಯಣರಾವ್ ಕುಲಕರ್ಣಿ, ಭೀಮಬಟ್ ಕರಮುಡಿ, ಪ್ರಮೋದ ತುರರ್ವಿಹಾಳ, ಮಧ್ವರಾಜ ಲಾಯದುಣಸಿ, ಬ್ರಾಹ್ಮಣ ಸಮಾಜದ ಮಹಿಳೆಯರು ಹಾಗೂ ಕಲಾವಿದ ಸುರೇಶರೆಡ್ಡಿ, ತೊಂಡೆಪ್ಪ, ಪರಂಧಾಮರೆಡ್ಡಿ, ಭೀಮರೆಡ್ಡಿ, ಕರುಣಾಕರರೆಡ್ಡಿ, ಭೀಮರಾವ್, ವಿರೇಶ ವಸ್ತ್ರದ್, ಶಿವಪ್ಪ ಅಂಕಸದೊಡ್ಡಿ ಸೇರಿದಂತೆ ಇತರರಿದ್ದರು.