ಸಾರಾಂಶ
ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಗ್ರಾಮದ ಸಮೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ದೊಡ್ಡಮಳ್ತೆ ಗ್ರಾಮದ ಐತಿಹಾಸಿಕ ಪ್ರಸಿದ್ಧ ಹೊನ್ನಮ್ಮನ ಕ್ಷೇತ್ರದಲ್ಲಿ ಸ್ವರ್ಣಗೌರಿ ಉತ್ಸವ ಅಂಗವಾಗಿ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಗ್ರಾಮದ ಹಿರಿಯ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿತು.ಬೆಳಗ್ಗೆ ಸಂಪ್ರದಾಯದಂತೆ, ಶ್ರೀ ಸಿದ್ದೇಶ್ವರ, ಬಸವೇಶ್ವರ, ಸ್ವರ್ಣಗೌರಿ ಹೊನ್ನಮ್ಮ ದೇವಾಲಯ ಸಮಿತಿ ಮತ್ತು ಹೊನ್ನಮ್ಮದೇವಿ ಕುಟುಂಬಸ್ಥರು ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬಾಗಿನವನ್ನು ಬಂಗಾರದ ಕಲ್ಲಿನ ಮೇಲಿಟ್ಟು ಪೂಜಿಸಿ, ನಂತರ ಕೆರೆಯ ನೀರಿನಲ್ಲಿ ವಿಸರ್ಜಿಸಿದರು. ಗ್ರಾಮದ ಸಮೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ನಂತರ ಶಾಸಕ ಡಾ. ಮಂತರ್ ಗೌಡ, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ, ಗೌಡಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಆರ್. ಸುರೇಶ್, ಒಳಚರಂಡಿ ನಿಗಮ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ ಹಾಗೂ ನವ ದಂಪತಿ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.ದೇವಾಲಯ ಸಮಿತಿ ಅಧ್ಯಕ್ಷ ಡಿ.ಎ. ಉದಯ, ಉಪಾಧ್ಯಕ್ಷ ಡಿ.ಬಿ. ಲೋಕೇಶ್ ಬೆಳ್ಳಿಯಪ್ಪ, ಕಾರ್ಯದರ್ಶಿ ಡಿ.ಎನ್. ಕವನ್ ಮತ್ತಿತರರು ಇದ್ದರು.