ಆದಿಚುಂಚನಗಿರಿಗೆ ಸಚಿವ ವಿ.ಸೋಮಣ್ಣ ಭೇಟಿ

| Published : Sep 09 2024, 01:32 AM IST

ಸಾರಾಂಶ

ಆದಿಚುಂಚನಗಿರಿ ಮಹಾಸಂಸ್ಥಾನಮಠಕ್ಕೆ ಭೇಟಿ ನೀಡಿದ ಕೇಂದ್ರದ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಮಠದ ಸಂಪ್ರದಾಯದಂತೆ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳು ಗೌರವಿಸಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಕೇಂದ್ರದ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭಾನುವಾರ ಬೆಳಗ್ಗೆ ಭೇಟಿಕೊಟ್ಟು ಕ್ಷೇತ್ರಾಧಿದೇವತೆಗಳಿಗೆ ಹಾಗೂ ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳ ಮಹಾ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದ ಪಡೆದುಕೊಂಡರು.ಕ್ಷೇತ್ರಪಾಲಕ ಶ್ರೀ ಕಾಲಭೈರವೇಶ್ವರಸ್ವಾಮಿ ದೇಗುಲದಲ್ಲಿ ನಡೆದ ಭಾನುವಾರದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡ ಸಚಿವರು ಕ್ಷೇತ್ರಾಧಿದೇವತೆಗಳ ದರ್ಶನಾಶೀರ್ವಾದ ಪಡೆದುಕೊಂಡ ನಂತರ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳ ಮಹಾ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು. ಕ್ಷೇತ್ರಕ್ಕೆ ಭೇಟಿಕೊಟ್ಟ ಸಚಿವರಿಗೆ ಶ್ರೀಮಠದ ಸಂಪ್ರದಾಯದಂತೆ ಶಾಲು ಹೊದಿಸಿ ಏಲಕ್ಕಿ ಹಾರ ಹಾಕಿ ನೆನಪಿನ ಕಾಣಿಕೆ ಕೊಟ್ಟು ಶ್ರೀಗಳು ಆಶೀರ್ವದಿಸಿದರು.ಈ ವೇಳೆ ಮಾತನಾಡಿದ ಸಚಿವ ಸೋಮಣ್ಣ, ಕಳೆದ 1999ರಲ್ಲಿ ಶ್ರೀ ಕ್ಷೇತ್ರದ ಕಾಲಭೈರವೇಶ್ವರಸ್ವಾಮಿ, ಭೈರವೈಕ್ಯ ಬಾಲಗಂಗಾಧರ ಶ್ರೀಗಳು ಮತ್ತು ತುಮಕೂರಿನ ಸಿದ್ದಗಂಗಾ ಶ್ರೀಗಳ ಆಶೀರ್ವಾದಿಂದ ನಾನು ಒಬ್ಬ ಮನುಷ್ಯನಾಗಿ ಮತ್ತೆ ಸ್ವತಂತ್ರ್ಯವಾಗಿ ಶಾಸಕನಾಗಿದ್ದೆ ಎಂದರು.ಆದಿಚುಂಚನಗಿರಿ ಕ್ಷೇತ್ರದಲ್ಲಿ ಶ್ರೀ ಕಾಲಭೈರವೇಶ್ವರ ಇರುವುದರಿಂದ ಎಲ್ಲರೂ ಬರುತ್ತಾರೆ. ಆದರೆ, ಶ್ರೀಮಠಕ್ಕೆ ಯಾರು ನಿಷ್ಕಲ್ಮಷವಾಗಿ ಬಂದು ನಿಲ್ಲುವರೋ ಅವರಿಗೆಲ್ಲಾ ದೇವರ ಮತ್ತು ಶ್ರೀಗಳ ಆಶೀರ್ವಾದವಿರುತ್ತದೆ. ಹಾಗಾಗಿ ಶ್ರೀ ಆದಿಚುಂಚನಗಿರಿ ಮಠ ಒಂದು ಜಾತಿ ವರ್ಗಕ್ಕೆ ಸೀಮಿತವಾಗಿಲ್ಲ ಎಂದು ಹೇಳಿದರು. ರೈಲುಗಳಿಗೆ ಶ್ರೀಗಳ ಹೆಸರು:ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳ ಆಶಯ ಮತ್ತು ಕ್ಷೇತ್ರದ ಸಮಸ್ತ ಭಕ್ತರ ಕೋರಿಕೆ ಮೇರೆಗೆ ರಾಜ್ಯ ಮತ್ತು ಅಂತಾರಾಜ್ಯಗಳಲ್ಲಿ ಸಂಚರಿಸುವ ಹಲವು ರೈಲುಗಳಿಗೆ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳ ಹೆಸರಿಡಲಾಗುವುದು ಎಂದರು.ಈ ವೇಳೆ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್‌ಗೌಡ, ಮುಖಂಡ ಜವರನಹಳ್ಳಿ ಗೌರೀಶ್, ಶ್ರೀಮಠದ ರಾಮಚಂದ್ರು ಸೇರಿದಂತೆ ಅಪಾರ ಭಕ್ತರು ಇದ್ದರು.