ನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಲಿದೆ. ಹೊರ ವಲಯದಲ್ಲಿ ಬಡಾವಣೆಗಳು ಹೆಚ್ಚಿವೆ. ಎಲ್ಲ ಪ್ರದೇಶಗಳಿಗೆ ಕುಡಿವ ನೀರು ಸಮರ್ಪಕವಾಗಿ ಪೂರೈಕೆಯಾಗಬೇಕು.
ಕಾರಟಗಿ: ಮುಂಬರುವ ಬೇಸಿಗೆ ದಿನಗಳಲ್ಲಿ ಪಟ್ಟಣದಲ್ಲಿ ಕುಡಿವ ನೀರಿನ ಸಮಸ್ಯೆ ಉದ್ಭವಿಸದಂತೆ ಅಗತ್ಯ ಕ್ರಮ ಕೈಗೊಳ್ಳಲು ಈಗಿನಿಂದಲೇ ಮುಂಜಾಗ್ರತ ಕ್ರಮ ಕೈಗೊಂಡು ಸಕಾಲಕ್ಕೆ ಜಾಗೃತರಾಗಬೇಕೆಂದು ನೀರು ಪೂರೈಕೆ ಸಹಾಯಕರಿಗೆ ಸ್ಪಷ್ಟವಾಗಿ ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸೂರು ಸೂಚನೆ ನೀಡಿದರು.
ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ಸಂಜೆ ಕುಡಿವ ನೀರು ಕುರಿತು ನಡೆದ ತುರ್ತು ಸಭೆಯ ಅಧ್ಯಕ್ಷ ವಹಿಸಿ ನೀರು ಸರಬರಾಜು ಸಹಾಯಕರ ಸಭೆಯಲ್ಲಿ ಮಾತನಾಡಿದರು.ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ದುರಸ್ಥಿ ಕಾರ್ಯ ಆರಂಭವಾಗಿದ್ದು, ಇನ್ನು ಕೆಲವೆ ದಿನಗಳಲ್ಲಿ ಕಾಲುವೆಗೆ ನೀರು ಸ್ಥಗಿತಗೊಳಸಲಾಗುತ್ತದೆ. ಅದಕ್ಕೂ ಮುನ್ನ ರಾಜೀವ ಗಾಂಧಿ ಕುಡಿವ ನೀರಿನ ಯೋಜನೆಯ ಕೆರೆ ಭರ್ತಿ ಮಾಡಿಟ್ಟುಕೊಳ್ಳಬೇಕು. ಪಟ್ಟಣದ ೨೩ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆಯಾಗದಂತೆ ಸದಾ ಎಚ್ಚರಿಕೆ ವಹಿಸಬೇಕು. ಬೇಸಿಗೆ ದಿನಗಳಲ್ಲಿ ನೀರಿನ ಭವಣೆ ಉದ್ಭವಿಸಿದ ವಾರ್ಡಗಳಲ್ಲಿ ಅಗತ್ಯ ಬಿದ್ದರೆ ಕೊಳವೆ ಬಾವಿ ಕೂಡ ಕೊರೆಸಲಾಗುವುದು ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಈಶಪ್ಪ ಮಾತನಾಡಿ, ಪಟ್ಟಣ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಲಿದೆ. ಹೊರ ವಲಯದಲ್ಲಿ ಬಡಾವಣೆಗಳು ಹೆಚ್ಚಿವೆ. ಎಲ್ಲ ಪ್ರದೇಶಗಳಿಗೆ ಕುಡಿವ ನೀರು ಸಮರ್ಪಕವಾಗಿ ಪೂರೈಕೆಯಾಗಬೇಕು. ಕೆಲ ವಾರ್ಡ್‌ಗಳಲ್ಲಿನ ನೀರು ಪೂರೈಕೆ ಪೈಪ್‌ಲೈನ್ ಸಮಸ್ಯೆ,ಅಗತ್ಯ ಪಂಪ್‌ಸೆಟ್,ಕೆಲ ತಾಂತ್ರಿಕ ಯಂತ್ರ ಕೂಡಿಸಿ ಕೊಟ್ಟುಕೊಳ್ಳಬೇಕು. ಕೆಲ ಪ್ರದೇಶಗಳಿಗೆ ಇನ್ನೂ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ ಎನ್ನುವ ದೂರು ಇದ್ದು ಸಂಬಂಧಿಸಿದ ಎಂಜಿನಿಯರ್ ಸಿಬ್ಬಂದಿಗಳು ಅಂಥ ಸ್ಥಳಗಳಿಗೆ ತೆರಳಿ ಈಗಿನಿಂದಲೇ ಸಮಸ್ಯೆ ನಿವಾರಿಸಿಕೊಳ್ಳಿ. ಯಾವುದೇ ವಾರ್ಡಗಳ ಜನತೆಗೆ ನೀರಿನ ಭವಣೆ ಉಂಟಾಗದಂತೆ ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕಾ ಕ್ರಮ ಈಗಿನಿಂದಲೇ ಕೈಗೊಳ್ಳಬೇಕು ಎಂದು ಸೂಚಿಸಿದರು.ಪುರಸಭೆ ಮುಖ್ಯಾಧಿಕಾರಿ ಡಾ. ಸಾಬಣ್ಣ ಕಟ್ಟೇಕಾರ ಮಾತನಾಡಿ, ತಾಲೂಕಿನಾದ್ಯಂತ ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ನೀರಿನ ಕೊರತೆಯಾಗುವ ಸಾಧ್ಯತೆಗಳಿಲ್ಲದಿದ್ದರೂ ಸಹ ಅಂತರ್ಜಲ ಕುಸಿದು ಪುರಸಭೆ ವ್ಯಾಪ್ತಿಯ ವಾರ್ಡ್‌ಗಳ ನೀರಿನ ಸಮಸ್ಯೆ ಉಂಟಾಗಬಹುದು. ಈ ಬಗ್ಗೆ ಗಮನಹರಿಸುವದರೊಂದಿಗೆ ಹತ್ತರದಲ್ಲಿ ಲಭ್ಯವಿರುವ ನೀರಿನ ಮೂಲ ಸಮರ್ಪಕವಾಗಿ ಬಳಸಿಕೊಳ್ಳಲು ಅಗತ್ಯ ಮುಂಜಾಗ್ರತೆ ವಹಿಸಲಾಗುವುದು. ಅಗತ್ಯವಿದ್ದಲ್ಲಿ ಪೈಪ್‌ಲೈನ್ ಬದಲಾವಣೆ ಸೇರಿದಂತೆ ನೀರು ಪೂರೈಕೆಗೆ ಸಂಬಂಧಿಸಿದಂತೆ ಯಾವುದೇ ಕೆಲಸ ಕಾರ್ಯಗಳಿದ್ದರೂ ಕೂಡ ತಕ್ಷಣ ಗಮನಕ್ಕೆ ತರಬೇಕು. ಜನತೆ ನೀರಿಗಾಗಿ ಕೊಡ ಹಿಡಿದುಕೊಂಡು ಪುರಸಭೆ ಕಚೇರಿಗೆ ಬರುವಂತಾಗಬಾರದು ಎಂದು ಸಿಬ್ಬಂದಿಗೆ ಸೂಚಿಸಿದರಲ್ಲದೆ ಮುಂಬರುವ ಬೇಸಿಗೆ ದಿನಗಳಲ್ಲಿ ನೀರಿನ ಭವಣೆ ಉದ್ಭವಾಗದಂತೆ ಪಟ್ಟಣದ ಜನತೆ ನೀರನ್ನು ಪೋಲು ಮಾಡದೆ ಮಿತವಾಗಿ ಬಳಕೆ ಮಾಡಬೇಕು. ಬೇಸಿಗೆ ದಿನಗಳಲ್ಲಿ ಪಟ್ಟಣದ ಯಾವೊಂದು ವಾರ್ಡ್‌ಗಳಲ್ಲೂ ನೀರಿನ ಭವಣೆ ಉದ್ಭವಿಸದಂತೆ ಪುರಸಭೆಯಿಂದ ಅಗತ್ಯ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿ ಸೀಮಾರಾಣಿ, ನೀರು ಸರಬುರಾಜು ಅಧಿಕಾರಿ ನಾಗೇಶ, ನೀರು ಪೂರೈಕೆ ಸಹಾಯಕ ಜಯಪ್ಪ, ಹನುಮಂತ ಭಜಂತ್ರಿ, ದೊಡ್ಡ ಹನುಮಂತಪ್ಪ, ಹನಮೇಶ ಭಜಂತ್ರಿ, ಚಿದಾನಂದಪ್ಪ, ಪ್ರಕಾಶ ರೆಡ್ಡಿ, ಮಲ್ಲಪ್ಪ ಸೇರಿದಂತೆ ಇನ್ನಿತರರರು ಇದ್ದರು.