ಸಮಾಜದ ಅಭಿವೃದ್ಧಿ ಮತ್ತು ಸಂಘಟನೆಗೆ ಜಾತ್ರಾ ಮಹೋತ್ಸವಗಳು ಸಹಕಾರಿ ಆಗಲಿವೆ
ಹೊಸಪೇಟೆ: ಸಮಾಜದ ಅಭಿವೃದ್ಧಿ ಮತ್ತು ಸಂಘಟನೆಗೆ ಜಾತ್ರಾ ಮಹೋತ್ಸವಗಳು ಸಹಕಾರಿ ಆಗಲಿವೆ ಎಂದು ಹರಿಹರದ ರಾಜನಹಳ್ಳಿಯ ವಾಲ್ಮೀಕಿ ಗುರು ಪೀಠದ ಜ.ಡಾ. ವಾಲ್ಮೀಕಿ ಪ್ರಸನ್ನಾನಂದ ಶ್ರೀ ಹೇಳಿದರು.ಸ್ಥಳೀಯ ಶ್ರೀಪುಣ್ಯಾನಂದಪುರಿ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯಲ್ಲಿ 2026ರ ಫೆ.8 ಮತ್ತು9ರಂದು ಜರುಗಲಿರುವ ಮಹರ್ಷಿ ವಾಲ್ಮೀಕಿ ಜಾತ್ರೆ ಕಾರ್ಯಕ್ರಮದ ಜಿಲ್ಲಾ ಮಟ್ಟದ ಪೂರ್ವಭಾವಿ ಸಿದ್ಧತಾ ಸಭೆಯ ಸಾನ್ನಿಧ್ಯವಹಿಸಿ ಆಶೀರ್ವಚನ ಅವರು ನೀಡಿದರು.ಧಾರ್ಮಿಕ ಹಾಗೂ ಧರ್ಮದ ತಳಹದಿಯ ಮೇಲೆ ಸಮಾಜ ಸಂಘಟನೆ ಮಾಡುವ ದೃಷ್ಟಿಯಿಂದ ವಾಲ್ಮೀಕಿಗುರು ಪೀಠ ಸ್ಥಾಪನೆ ಆಗಿದೆ. ಆ ದೃಷ್ಟಿಯಿಂದ ಪ್ರತಿ ವರ್ಷ ವಾಲ್ಮೀಕಿ ಜಾತ್ರೆ ನಡೆಸಲಾಗುತ್ತಿದೆ. ಫೆಬ್ರವರಿಯಲ್ಲಿ ಜರುಗಲಿರುವ ವಾಲ್ಮೀಕಿ ಜಾತ್ರೆ ಪ್ರಯುಕ್ತ ಈ ವರೆಗೆ ರಾಜ್ಯದ 13 ಜಿಲ್ಲೆಗಳ ಪ್ರವಾಸ ಕೈಗೊಳ್ಳಲಾಗಿದೆ ಎಂದರು.
ವಿಜಯನಗರ ಜಿಲ್ಲೆಯಲ್ಲಿ ವಾಲ್ಮೀಕಿ ಸಮಾಜದ ಜಿಲ್ಲಾ ಘಟಕ ರಚನೆ ಬಾಕಿ ಇದ್ದು. ಸ್ಥಳೀಯ ಮುಖಂಡರು ಪ್ರತಿ ತಾಲೂಕಿನಿಂದ ನಿರ್ದೇಶಕರುಗಳನ್ನು ಆಯ್ಕೆ ಮಾಡಿ, ನಂತರ ಸಭೆ ಸೇರಿ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡೋಣ ಎಂದರು.ಅಲ್ಲದೆ, ಫೆ.8 ಮತ್ತು 9ರಂದು ಜರುಗಲಿರುವ ವಾಲ್ಮೀಕಿ ಜಾತ್ರೆಯಲ್ಲಿ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಜೊತೆಗೆ ತನು, ಮನ, ಧನದಿಂದ ಸಹಕರಿಸಿ, ಜಾತ್ರೆಯ ಯಶಸ್ವಿಗೆ ಕಾರಣೀಕರ್ತರಾಗಬೇಕು ಎಂದರು.
ಸಭೆಯಲ್ಲಿ ವಿಶೇಷ ಉಪನ್ಯಾಸ ನೀಡಿದ ಡಾ.ಕೆ.ಫನ್ನಂಗಧರ್, ವಾಲ್ನೀಕಿಗುರು ಪೀಠ ಬೆಳೆದು ಬಂದ ದಾರಿ ಕುರಿತು ವಿವರಿಸಿದರು. ಅಲ್ಲದೆ, ಎಸ್.ಟಿ.ಸಮಾಜಕ್ಕೆ ಮೀಸಲಾಗಿರುವ ಶೇ.7 ಮೀಸಲಾತಿ ಜಾರಿಗೆ ಸಂವಿಧಾನದ ಷೆಡ್ಯೂಲ್ 9ಕ್ಕೆ ಸೇರಿಸಲು ಸರ್ಕಾರದ ಮೇಲೆ ಒತ್ತಡತರಲು ಶ್ರೀಮಠದ ನೇತೃತ್ವದಲ್ಲಿ ಹೋರಾಟ ರೂಪಿಸಬೇಕಾಗಿದೆ ಎಂದರು.ವಾಲ್ಮೀಕಿಗುರು ಪೀಠದ ಧರ್ಮದರ್ಶಿ ಬಿ.ಎಸ್.ಜಂಬಯ್ಯ ನಾಯಕ, ಹೊಸಪೇಟೆ ತಾಲೂಕು ನಾಯಕ ಸಮಾಜದ ಅಧ್ಯಕ್ಷ ಗೋಸಲ ಭರಮಪ್ಪ, ಹಡಗಲಿ ತಾಲೂಕು ಅಧ್ಯಕ್ಷ ಹೊನ್ನಪ್ಪ, ಕೂಡ್ಲಿಗಿ ತಾಲೂಕು ಘಟಕದ ಅಧ್ಯಕ್ಷ ಸುರೇಶ್, ಹಗರಿಬೊಮ್ಮನಹಳ್ಳಿ ಘಟಕದ ಗೌರವಾಧ್ಯಕ್ಷ ಹುಚ್ಚಪ್ಪ, ಕೊಟ್ಟೂರು ಘಟಕದ ಅಧ್ಯಕ್ಷ ಮಂಜುನಾಥ, ಹರಹನಹಳ್ಳಿ ಘಟಕದ ಅಧ್ಯಕ್ಷ ಅಣ್ಣಪ್ಪ ಮತ್ತಿತರರಿದ್ದರು.
ತಾಲೂಕು ವಾಲ್ಮೀಕಿ ನಾಯಕ ಸಮಾಜದ ಕಾರ್ಯದರ್ಶಿ ದೇವರಮನೆ ಶ್ರೀನಿವಾಸ, ತಾಲೂಕು ನಾಯಕ ಸಮಾಜದ ಉಪಾಧ್ಯಕ್ಷ ಕಿನ್ನಾಳ ಹನುಮಂತ ನಿರ್ವಹಿಸಿದರು.ಸಭೆಯಲ್ಲಿ ಹೊಸಪೇಟೆ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಪದಾಧಿಕಾರಿಗಳು, ಸಮಾಜದ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಹರಿಹರದ ರಾಜನಹಳ್ಳಿಯ ವಾಲ್ಮೀಕಿ ಗುರು ಪೀಠದ ಡಾ.ವಾಲ್ಮೀಕಿ ಪ್ರಸನ್ನಾನಂದ ಶ್ರೀ ಆಶೀರ್ವಚನ ನೀಡಿದರು.