ಸರ್ಕಾರಿ ನೌಕರರು ಕಚೇರಿ ಕೆಲಸದ ಒತ್ತಡದ ನಡುವೆಯೂ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು.

ಜಿಲ್ಲಾಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಉದ್ಘಾಟಿಸಿದ ಶಾಸಕಕನ್ನಡಪ್ರಭ ವಾರ್ತೆ ಶಿರಸಿ

ಸರ್ಕಾರಿ ನೌಕರರು ಕಚೇರಿ ಕೆಲಸದ ಒತ್ತಡದ ನಡುವೆಯೂ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ನೌಕರರಿಗೆ ಸದೃಢ ಆರೋಗ್ಯವಿದ್ದಾಗ ಮಾತ್ರ ಸರಕಾರದ ಯೋಜನೆಗಳು ಪರಿಪೂರ್ಣವಾಗಿ ಅನುಷ್ಠಾನಗೊಳ್ಳಲು ಸಾಧ್ಯ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ಶನಿವಾರ ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಶಿರಸಿ ಶೈಕ್ಷಣಿಕ ಜಿಲ್ಲೆ ಹಾಗೂ ಕಾರವಾರ ಶಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಅತ್ಯಂತ ದೊಡ್ಡದು. ಉತ್ತಮ ಆರೋಗ್ಯವಿದ್ದರೆ ಎಷ್ಟೇ ಒತ್ತಡವಿದ್ದರೂ ಅದನ್ನು ನಿಭಾಯಿಸಿಕೊಂಡು ನೆಮ್ಮದಿಯಿಂದ ಇರಲು ಸಾಧ್ಯ. ಇದಕ್ಕೆ ಇಂತಹ ಕ್ರೀಡಾಕೂಟ ಸಹಕಾರಿ ಎಂದರು.

ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಮಾತನಾಡಿ, ಸರ್ಕಾರಿ ನೌಕರರಿಗೆ ಮಾಡುವಾಗ ಎಲ್ಲ ಹಂತದಲ್ಲಿ ಒತ್ತಡಗಳು ಇರುತ್ತವೆ. ಸರಿಯಾಗಿ ಕೆಲಸ ಮಾಡಿದಾಗ ಸಮಾಜಕ್ಕೆ ಒಳ್ಳೆದಾಗುತ್ತದೆ ಎಂಬುದು ಇದರ ಹಿಂದೆ ಉದ್ದೇಶವಾಗಿರುತ್ತದೆ. ಆದರೆ ನೌಕರರು ಒತ್ತಡ ಮಾಡಿಕೊಳ್ಳದೇ ಕುಟುಂಬ, ತಮ್ಮ ಆರೋಗ್ಯದ ಬಗ್ಗೆ ಲಕ್ಷ್ಯ ವಹಿಸಬೇಕು. ಆದರೆ ಆರೋಗ್ಯದ ಬಗ್ಗೆ ನೌಕರರು ಕಾಳಜಿ ವಹಿಸುತ್ತಿಲ್ಲ. ಕುಟುಂಬದ ಜತೆ ಒಂದಿಷ್ಟು ಸಮಯ ಕಳೆಯುತ್ತಿಲ್ಲ ಎಂದ ಅವರು. ನಿತ್ಯ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಒಂದಿಷ್ಟು ಸಮಯ ಮೀಸಲಿಟ್ಟುಕೊಳ್ಳಬೇಕು. ಸರ್ಕಾರಿ ಕೆಲಸ ದೊರೆತಿದೆ ಎಂದರೆ ಸಮಾಜ ಸೇವೆ ಮಾಡುವ ಅವಕಾಶ ದೊರೆತಿದೆ ಎಂದರ್ಥ. ಇದರ ಸದುಪಯೋಗ ಮಾಡಿಕೊಳ್ಳಬೇಕು. ನಮ್ಮ ಸೇವಾವಧಿಯಲ್ಲಿ ಸಮಾಜಕ್ಕೆ ಒಂದಿಷ್ಟು ಕೊಡುಗೆ ನೀಡಬೇಕು ಎಂದರು.

ಇದೇ ವೇಳೆ ಕಳೆದ ಸಾಲಿನಲ್ಲಿ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಸಾಧನೆ ಮಾಡಿದ ಆರು ಸರ್ಕಾರಿ ನೌಕರರನ್ನು ಸನ್ಮಾನಿಸಲಾಯಿತು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ, ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಸಂಜೀವಕುಮಾರ ಎಸ್‌.ನಾಯ್ಕ, ರಾಜ್ಯ ಸರ್ಕಾರಿ ನೌಕರರ ಸಂಘದ ಶಿರಸಿ ಶೈಕ್ಷಣಿಕ ಜಿಲ್ಲಾ ಘಟಕದ ಅಧ್ಯಕ್ಷ ಕಿರಣಕುಮಾರ ಎಚ್‌.ನಾಯ್ಕ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರವಿ ನಾಯಕ, ಡಿಡಿಪಿಐ ಡಿ.ಆರ್‌. ನಾಯ್ಕ, ಬಿಇಓ ನಾಗರಾಜ ನಾಯ್ಕ, ಪೌರಾಯುಕ್ತ ಪ್ರಕಾಶ ಚನ್ನಪ್ಪನವರ್‌ ಹಾಗೂ ಸಂಘಟನೆಯ ಪದಾಧಿಕಾರಿಗಳು ಇದ್ದರು. ಕ್ರೀಡಾಕೂಟದಲ್ಲಿ ಜಿಲ್ಲೆಯ ವಿವಿಧ ತಾಲೂಕಿನ ನೂರಾರು ಸರ್ಕಾರಿ ನೌಕರರು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಪೈಪೋಟಿ ತೋರಿದರು.