ಸರ್ಕಾರಿ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮ‌ ವಹಿಸಿ: ಸಚ್ಚಿದಾನಂದ ಆಗ್ರಹ

| Published : Oct 13 2025, 02:00 AM IST

ಸರ್ಕಾರಿ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮ‌ ವಹಿಸಿ: ಸಚ್ಚಿದಾನಂದ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರು ಹಾಗೂ ಉಪನ್ಯಾಸಕರ ಹುದ್ದೆಗಳು‌ ಖಾಲಿ ಇರುವುದರಿಂದ ವಿದ್ಯಾರ್ಥಿಗಳಿಗೆ ಸಮರ್ಪಕ ಶಿಕ್ಷಣ ಸಿಗುತ್ತಿಲ್ಲ. ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರನ್ನು ಸಕಾಲಕ್ಕೆ ನೇಮಕ ಮಾಡುತ್ತಿಲ್ಲ. ಆರೋಗ್ಯ ಇಲಾಖೆಯಲ್ಲಿ‌ ಕೂಡ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಹುದ್ದೆಗಳು ಖಾಲಿ ಉಳಿದಿವೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಶಿಕ್ಷಣ, ಕೃಷಿ, ಆರೋಗ್ಯ, ಕಂದಾಯ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಶೇ.15ರಷ್ಟು ಹುದ್ದೆಗಳು ಖಾಲಿ ಇದ್ದು, ರಾಜ್ಯ ಸರ್ಕಾರ ಖಾಲಿ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮ‌ ವಹಿಸಬೇಕು ಎಂದು ಬಿಜೆಪಿ‌ ಮುಖಂಡ ಇಂಡುವಾಳು ಸಚ್ಚಿದಾನಂದ ಆಗ್ರಹಿಸಿದರು.

ತಾಲೂಕಿನ ಕಪರನಕೊಪ್ಪಲು ಗ್ರಾಮದ ರವಿಕುಮಾರ್ ಪುತ್ರ ಹರ್ಷ ಪ್ರಸಕ್ತ ಸಾಲಿನಲ್ಲಿ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಸರ್ಕಾರಿ ಕೋಟಾದಲ್ಲಿ ಉಚಿತ ಸೀಟು ಪಡೆದ ಹಿನ್ನೆಲೆಯಲ್ಲಿ ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಾನುವಾರ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿದರು.

ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರು ಹಾಗೂ ಉಪನ್ಯಾಸಕರ ಹುದ್ದೆಗಳು‌ ಖಾಲಿ ಇರುವುದರಿಂದ ವಿದ್ಯಾರ್ಥಿಗಳಿಗೆ ಸಮರ್ಪಕ ಶಿಕ್ಷಣ ಸಿಗುತ್ತಿಲ್ಲ. ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರನ್ನು ಸಕಾಲಕ್ಕೆ ನೇಮಕ ಮಾಡುತ್ತಿಲ್ಲ. ಆರೋಗ್ಯ ಇಲಾಖೆಯಲ್ಲಿ‌ ಕೂಡ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಹುದ್ದೆಗಳು ಖಾಲಿ ಉಳಿದಿವೆ ಎಂದರು.

ಲೋಕೋಪಯೋಗಿ ಮತ್ತು ಪಂಚಾಯತರಾಜ್ ಇಲಾಖೆಗಳಲ್ಲಿ ಎಂಜಿನಿಯರ್ ಹುದ್ದೆಗಳನ್ನು‌ ಹಲವು ವರ್ಷಗಳಿಂದ ಭರ್ತಿ ಮಾಡಿಲ್ಲ. ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಉದ್ಯೋಗಾಕಾಂಕ್ಷಿಗಳಿಗೆ ಕೆಲಸ‌ ಕೊಡಲು ಸರ್ಕಾರ ವಿಫಲವಾಗಿದೆ ಎಂದು ದೂರಿದರು.

ಇದೇ ವೇಳೆ ಜೂನಿಯರ್ ಐಸ್ ಸ್ಕೇಟಿಂಗ್ ಸ್ಪರ್ಧೆ ಏಶಿಯನ್ ಚಾಂಪಿಯನ್ ಶಿಪ್ ಕೂಟಕ್ಕೆ ಅರ್ಹತೆ ಪಡೆದಿರುವ ಪಾಂಡವಪುರ ತಾಲೂಕಿನ ಹಿರೇಮರಳಿ ಗ್ರಾಮದ ಅರುಣ್ ಗೌಡರ ಪುತ್ರ ದುವನ್ ಗೌಡ ಹಾಗೂ ತರಬೇತುದಾರ ಮುರಳಿ ಅವರನ್ನು ಸಚ್ಚಿದಾನಂದ ಅಭಿನಂದಿಸಿದರು.

ಈ ವೇಳೆ ಮುಖಂಡರಾದ ಸತೀಶ್, ಗುಣವಂತ, ದಯಾನಂದ್, ಮಹೇಶ್, ಕೆ.ಜಯರಾಂ, ಪರಮೇಶ್, ಶಂಕರ್, ದಿವಾಕರ್, ನಲ್ಲಿ ರಾಮಣ್ಣ, ರಾಜೇಶ್, ಪ್ರಸನ್ನ, ನಿತಿನ್, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಬಲ್ಲೇನಹಳ್ಳಿ ಬಿ.ಸಿ.ಕೃಷ್ಣೇಗೌಡ, ದರ್ಶನ್‌ ಲಿಂಗರಾಜು, ಚಂದ್ರಣ್ಣ, ಹರೀಶ್, ಪಾಪಣ್ಣ, ರಂಜಿತ್ ಸೇರಿದಂತೆ ಇತರರು ಇದ್ದರು.