ಸಾರಾಂಶ
ಹಾಸನಾಂಬೆ ದೇವಿ ದರ್ಶನಕ್ಕಾಗಿ ಬಂದಿದ್ದ ಮಹಿಳೆಯೊಬ್ಬರು ಧರ್ಮದರ್ಶನದ ಸಾಲಿನಲ್ಲಿ ಹೋಗುತ್ತಿದ್ದಾಗ ಏಕಾಏಕಿ ಮೈಮೇಲೆ ದೇವರು ಬಂದಂತೆ ವರ್ತಿಸಿದ ಘಟನೆ ಭಾನುವಾರ ಸಂಭವಿಸಿದೆ. ಮಹಿಳೆ ಸಮಾಧಾನಗೊಳ್ಳದೆ ನೆಲದಲ್ಲೇ ಕುಳಿತು ತಲೆ ಒದರುತ್ತಾ ಮಾತನಾಡುತ್ತಿದ್ದರು. ಘಟನೆಯನ್ನು ಗಮನಿಸಿದ ಸ್ಥಳೀಯ ಪೊಲೀಸರು ಧರ್ಮದರ್ಶನದ ಸಾಲಿನಲ್ಲೇ ಮಹಿಳೆಯನ್ನು ಶಾಂತವಾಗಿ ಕರೆದೊಯ್ದು ಸುರಕ್ಷಿತ ಸ್ಥಳಕ್ಕೆ ಸಾಗಿಸಿದರು. ನಂತರ ಪರಿಸ್ಥಿತಿ ಸಾಮಾನ್ಯಗೊಂಡಿತು.
ಹಾಸನ: ಹಾಸನಾಂಬೆ ದೇವಿ ದರ್ಶನಕ್ಕಾಗಿ ಬಂದಿದ್ದ ಮಹಿಳೆಯೊಬ್ಬರು ಧರ್ಮದರ್ಶನದ ಸಾಲಿನಲ್ಲಿ ಹೋಗುತ್ತಿದ್ದಾಗ ಏಕಾಏಕಿ ಮೈಮೇಲೆ ದೇವರು ಬಂದಂತೆ ವರ್ತಿಸಿದ ಘಟನೆ ಭಾನುವಾರ ಸಂಭವಿಸಿದೆ.
ದರ್ಶನದ ಸಾಲಿನಲ್ಲಿ ನಿಂತಿದ್ದಾಗಲೇ ಮಹಿಳೆ ಅಕಸ್ಮಾತ್ ತಲೆಯನ್ನು ಎತ್ತಿಕೊಂಡು ಭಾರಿಯಾಗಿ ಕಿರುಚಾಡಲು ಆರಂಭಿಸಿದರು. ಕಣ್ತುಂಬ ಭಕ್ತಿ, ಉತ್ಸಾಹ ಮತ್ತು ಭಾವೋದ್ವಿಗ್ನ ಸ್ಥಿತಿಯಲ್ಲಿ ಆಕೆಯು ನೆಲದ ಮೇಲೆ ಕುಳಿತುಕೊಂಡು ನಾನು ದೇವಿ ಬಂದಿದ್ದೀನಿ, ಇಲ್ಲಿ ಹೋಗಲು ಆಗುತ್ತಿಲ್ಲ. ಎಲ್ಲರೂ ನನ್ನನ್ನು ಅಪಹಾಸ್ಯ ಮಾಡುತ್ತಿದ್ದಾರೆ. ನಾನು ಬೇರೆ ದಾರಿಯಿಂದ ಹೋಗಬೇಕು ಎಂದು ಕೂಗಿದರು ಎಂದು ಸಾಕ್ಷಿಗಳು ತಿಳಿಸಿದ್ದಾರೆ. ಸ್ಥಳದಲ್ಲಿದ್ದ ಕೆಲವು ಯುವಕರು ಈ ದೃಶ್ಯ ನೋಡಿ ಶಿಳ್ಳೆ ಹಾಕಿ ಚಪ್ಪಾಳೆ ತಟ್ಟಿದರು. ಮಹಿಳೆಯನ್ನು ಸಮಾಧಾನಪಡಿಸಲು ಸುತ್ತಲಿನವರು ಹಾಗೂ ಮತ್ತೊಬ್ಬ ಮಹಿಳೆ ಮುಖಕ್ಕೆ ನೀರು ಚಿಮುಕಿಸಿದರು. ಆದರೆ ಮಹಿಳೆ ಸಮಾಧಾನಗೊಳ್ಳದೆ ನೆಲದಲ್ಲೇ ಕುಳಿತು ತಲೆ ಒದರುತ್ತಾ ಮಾತನಾಡುತ್ತಿದ್ದರು. ಘಟನೆಯನ್ನು ಗಮನಿಸಿದ ಸ್ಥಳೀಯ ಪೊಲೀಸರು ಧರ್ಮದರ್ಶನದ ಸಾಲಿನಲ್ಲೇ ಮಹಿಳೆಯನ್ನು ಶಾಂತವಾಗಿ ಕರೆದೊಯ್ದು ಸುರಕ್ಷಿತ ಸ್ಥಳಕ್ಕೆ ಸಾಗಿಸಿದರು. ನಂತರ ಪರಿಸ್ಥಿತಿ ಸಾಮಾನ್ಯಗೊಂಡಿತು.ಮಹಿಳೆ ಯಾವುದೇ ಅಸಭ್ಯ ವರ್ತನೆ ಅಥವಾ ಅಪಾಯಕಾರಿ ಸ್ಥಿತಿಯಲ್ಲಿ ಇರಲಿಲ್ಲ. ಕ್ಷಣಿಕ ಭಾವನಾತ್ಮಕ ಉದ್ರೇಕದಿಂದ ಹೀಗೆ ವರ್ತಿಸಿದ್ದು ಎಂದು ಪ್ರಾಥಮಿಕ ಮಾಹಿತಿ ನೀಡಲಾಗಿದೆ.