ಕನ್ನಡಪ್ರಭ ವಾರ್ತೆ ಹೊಸಪೇಟೆ

ತುಂಗಭದ್ರಾ ಜಲಾಶಯದ ಜಲಾಶಯದ ಕ್ರಸ್ಟ್‌ಗೇಟ್‌ ಬದಲಾಯಿಸುವ ಕಾರ್ಯ ಪೂರ್ಣಗೊಂಡಿದ್ದು, ಶೀಘ್ರವೇ ಉದ್ಘಾಟನೆ ಮಾಡಲಾಗುವುದು. ಮೇ 15ಕ್ಕೆ ಉದ್ಘಾಟನೆ ನಡೆಸಲು ಸಾಧ್ಯವೇ ಎಂಬುದರ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಭಾನುವಾರ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ, ಬಹುತೇಕ ಅಂತಿಮ ಹಂತ ತಲುಪಿದ ಗೇಟ್ ಅಳವಡಿಕೆ ಕಾರ್ಯ ಪರಿಶೀಲಿಸಿದರು. ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕ, ಆಂಧ್ರಪ್ರದೇಶ ರಾಜ್ಯಗಳು 64:34 ಅನುಪಾತದಲ್ಲಿ ಜಲಾಶಯಕ್ಕೆ ಬಂಡವಾಳ ಹೂಡುತ್ತಿದ್ದು, ಡ್ಯಾಂ ಮಂಡಳಿಗೆ ಸಂಪೂರ್ಣ ಸ್ವಾತಂತ್ರ‍್ಯ ನೀಡಲಾಗಿದೆ. ಸದ್ಯ ಜಲಾಶಯದಲ್ಲಿ 10.5 ಟಿಎಂಸಿ ನೀರಿದ್ದು, ಈಗ ಮಳೆ ಪ್ರಾರಂಭವಾದರೆ ಎರಡು ತಿಂಗಳಲ್ಲಿ ಸುಮಾರು 44 ಟಿಎಂಸಿ ನೀರು ಸಂಗ್ರಹವಾಗಲಿದೆ. ಕ್ರಸ್ಟ್‌ಗೇಟ್‌ ಅಳವಡಿಕೆ ದೊಡ್ಡ ಸವಾಲಾಗಿತ್ತು. ಈ ಕಾರ್ಯ ಯಶಸ್ವಿಯಾಗಿ ಹಮ್ಮಿಕೊಂಡು ನಾವು ದೇಶಕ್ಕೆ ಮಾದರಿಯಾಗಿದ್ದೇವೆ. ಇದರಿಂದ ಇಂದು ದೇಶವೇ ನಮ್ಮ ರಾಜ್ಯದತ್ತ ತಿರುಗಿ ನೋಡುತ್ತಿದೆ ಎಂದರು.ತಜ್ಞರ ವರದಿಯಂತೆ ಕ್ರಸ್ಟ್‌ಗೇಟ್ ಅಳವಡಿಕೆ ಕಾರ್ಯದಿಂದ ಅಣೆಕಟ್ಟಿನ ಆಯಸ್ಸು ಮುಂದಿನ 50 ವರ್ಷಗಳವರೆಗೆ ವೃದ್ಧಿಸಲಿದೆ. ತಜ್ಞರ ವರದಿಯಂತೆ ಹೊಸ ಚೈನ್‌ ಅಳವಡಿಸಲು ನಿರ್ಧರಿಸಿದ್ದು, ಮೊದಲ ಸೆಟ್ ಹೊಸ ಚೈನ್‌ ಮೇ 7ರಂದು ಆಗಮಿಸಲಿದೆ. ಮೇ ಅಂತ್ಯದೊಳಗೆ ಚೈನ್ ಅಳವಡಿಕೆ ಕಾರ್ಯ ಸಂಪೂರ್ಣ ಮುಗಿಯಲಿದೆ ಎಂದರು.

ಇದೇ ವೇಳೆ, ನವಲಿ ಸಮಾನಾಂತರ ಜಲಾಶಯ ನಿರ್ಮಾಣದ ಬಗ್ಗೆ ನಾವು ಸಿದ್ಧರಿದ್ದೇವೆ. ಆದರೆ, ಆಂಧ್ರಪ್ರದೇಶ, ತೆಲಂಗಾಣ ಮುಖ್ಯಮಂತ್ರಿಗಳು ಈ ಕುರಿತು ಮಾತುಕತೆ ನಡೆಸಲು ಸಮಯ ನೀಡುತ್ತಿಲ್ಲ ಎಂದು ಶಿವಕುಮಾರ್‌ ಹೇಳಿದರು. ಆಂಧ್ರ, ತೆಲಂಗಾಣ ರಾಜ್ಯಗಳಿಗೆ ಜಲಾಶಯದಿಂದ ನೀರು ಹೋಗುತ್ತಿದೆಯಲ್ಲ, ಅದಕ್ಕೆ ಅವರು ಸುಮ್ಮನೆ ಇದ್ದಾರೆ. ನವಲಿ ಸಮಾನಾಂತರ ಜಲಾಶಯದ ಬಗ್ಗೆ ಮಾತುಕತೆ ಮಾಡಿ ಬಗೆಹರಿಸಿಕೊಳ್ಳೋಣ ಎಂದು ಅವರಲ್ಲಿ ನಾವು ಮನವಿ ಮಾಡಿದ್ದೇವೆ ಎಂದರು.

ಜಲಾಶಯದಲ್ಲಿ 30 ಟಿಎಂಸಿ ಹೂಳು ತುಂಬಿದೆ. ಹೂಳು ತೆಗೆಸುವ ವಿಚಾರ ಮತ್ತು ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣ ಕುರಿತು ಎರಡು ರೀತಿಯಲ್ಲಿ ಚಿಂತನೆ ನಡೆಸಲಾಗುತ್ತಿದೆ. 30 ಟಿಎಂಸಿ ಹೂಳು ತುಂಬಿದ್ದರಿಂದ ಅಷ್ಟು ನೀರಿನ ನಷ್ಟ ಅನುಭವಿಸುತ್ತಿದ್ದೇವೆ. ನವಲಿ ಬಳಿ ಹೊಸ ಲಿಫ್ಟ್‌ ಮಾಡಿ ನೀರು ಸಂಗ್ರಹಿಸುವ ಯೋಜನೆಯೂ ಇದೆ. ಈ ಕುರಿತು ಯೋಜನೆ ಸಿದ್ಧಪಡಿಸಿ ತುಂಗಭದ್ರಾ ಮಂಡಳಿಯಲ್ಲಿ ಚರ್ಚಿಸಲು ಪ್ರಸ್ತಾವನೆ ಇದೆ. ಯಾವ ಸ್ಥಳ ಎಂದು ಈಗಲೇ ಬಹಿರಂಗ ಪಡಿಸುವಂತಿಲ್ಲ. ಸ್ಥಳ ಬಹಿರಂಗ ಪಡಿಸಿದರೆ ಅಲ್ಲಿನ ಜನರನ್ನು ಎತ್ತಿ ಕಟ್ಟುತ್ತಾರೆ. ಈ ಹಿನ್ನೆಲೆಯಲ್ಲಿ ತುಂಗಭದ್ರಾ ಮಂಡಳಿಯಲ್ಲಿ ಚರ್ಚಿಸಿ ಮತ್ತು ಆಂಧ್ರಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ಸರ್ಕಾರ ಸಿದ್ಧವಿದೆ. ಆದರೆ, ಆಂಧ್ರಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿಗಳು ಮಾತುಕತೆಗೆ ಮುಂದೆ ಬರುತ್ತಿಲ್ಲ. ಸ್ವಲ್ಪದಿನ ಕಾಯೋಣ ಎಂದರು.ಜಲಾಶಯ ಹೂಳು ತುಂಬಿರುವ ಕಾರಣ ಅಣೆಕಟ್ಟಿನ ಸಾಮರ್ಥ್ಯ 105 ಟಿಎಂಸಿಯಿಂದ 100 ಟಿಎಂಸಿಗೆ ಇಳಿಕೆಯಾಗಿದೆ. ಹೂಳು ತೆಗೆಯಲು ಚೀನಾ ತಂತ್ರಜ್ಞಾನ ಬಳಕೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಗ್ಲೋಬಲ್ ಟೆಂಡರ್ ಕರೆಯುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.


ತುಂಗಭದ್ರಾ ಅಣೆಕಟ್ಟಿನ ಸುತ್ತಲಿನ ಕೈಗಾರಿಕೆಗಳಿಂದ ರಾಸಾಯನಿಕಯುಕ್ತ ನೀರು ಅಣೆಕಟ್ಟನ್ನು ಸೇರುತ್ತಿರುವ ಬಗ್ಗೆ ವರದಿ ಬಂದಿದ್ದು, ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಜನರ ಆರೋಗ್ಯ ಮತ್ತು ಬೆಳೆಗಳ ರಕ್ಷಣೆ ಸರ್ಕಾರದ ಆದ್ಯತೆಯಾಗಿದೆ ಎಂದರು.