ಶಿಕ್ಷಕಿ ಶವ ಕೆರೆಯಲ್ಲಿ ಪತ್ತೆ

| Published : Oct 16 2025, 02:00 AM IST

ಸಾರಾಂಶ

ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿ ಅಕ್ತರ್‌ ಬೇಗಂ ಶವವಾಗಿ ಪತ್ತೆಯಾಗಿದ್ದಾರೆ. ಸಾಮಾಜಿಕ-ಆರ್ಥಿಕ ಸಮೀಕ್ಷೆ ಕಾರ್ಯ ಕಷ್ಟಕರವಾಗಿದ್ದರಿಂದ ಅವರು ಮಾನಸಿಕ ಒತ್ತಡದಿಂದ ಜೀವನದಲ್ಲಿ ಜುಗುಪ್ಸೆಗೊಂಡಿದ್ದರು ಎನ್ನಲಾಗಿದೆ. ಮನೆಯಲ್ಲೇ ಮೊಬೈಲ್‌ ಬಿಟ್ಟು ಸಮೀಕ್ಷೆಗೆ ತೆರಳಿದ್ದರು. ರಾತ್ರಿಯಾದರೂ ಮನಗೆ ಬಾರದಿದ್ದಾಗ ಠಾಣೆಗೆ ದೂರು ನೀಡಲಾಗಿತ್ತು.

ಕನ್ನಡಪ್ರಭ ವಾರ್ತೆ ಬೇತಮಂಗಲಕೋಲಾರ ತಾಲೂಕು ನರಸಾಪುರದಲ್ಲಿ ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಿ ಶಿಕ್ಷಕಿ ಅಕ್ತರ್‌ಬೇಗಂ(೫೦) ಮೃತದೇಹ ಬೇತಮಂಗಲ ಹೋಬಳಿಯ ಅಯ್ಯಪಲ್ಲಿ ಅಮಾನಿ ಕೆರೆಯಲ್ಲಿ ಪತ್ತೆಯಾಗಿದ್ದಾರೆ.ಟಿ.ಕೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಅಯ್ಯಪಲ್ಲಿ ಅಮಾನಿಕೆರೆಯ ದಡದಲ್ಲಿ ಶಿಕ್ಷಕಿಯ ಬ್ಯಾಕ್ ಪತ್ತೆಯಾಗಿದ್ದು, ಸಾರ್ವಜನಿಕರು ಬ್ಯಾಗನ್ನು ಗಮನಿಸಿ ಕೆರೆ ಕಡೆ ನೋಡಿದಾಗ ಕೆರೆಯಲ್ಲಿ ಶವ ತೇಲುತ್ತಿದ್ದನ್ನು ಕಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.ಮಾನಸಿಕ ಒತ್ತಡದಿಂದ ಜಿಗುಪ್ಸೆ

ಬೇತಮಂಗಲ ಪೊಲೀಸ್ ಠಾಣೆಯ ಪಿಎಸ್‌ಐ ಗುರುರಾಜ್ ಸಿಪಿಐ ರಂಗಶಾಮಯ್ಯ ನೇತೃತ್ವದಲ್ಲಿ ಆಗ್ನಿಶಾಮಕ ಮತ್ತು ಸ್ಥಳೀಯರ ನೆರವಿನೊಂದಿಗೆ ಶವವನ್ನು ಕೆರೆಯಿಂದ ಹೊರತೆಗೆದು ಕೆಜಿಎಫ್‌ನ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಸಾಗಿಸಿದರು. ಸಾಮಾಜಿಕ-ಆರ್ಥಿಕ ಸಮೀಕ್ಷೆ ಕಾರ್ಯ ಕಷ್ಟಕರವಾಗಿದ್ದರಿಂದ ಅವರು ಮಾನಸಿಕ ಒತ್ತಡದಿಂದ ಜೀವನದಲ್ಲಿ ಜುಗುಪ್ಸೆಗೊಂಡಿದ್ದರು ಎಂದು ತಿಳಿದುಬಂದಿದೆ.

ಕಳೆದ ೧೫ ದಿನದಿಂದ ಇದೇ ಒತ್ತಡದಿಂದ ಚಿಂತೆಗೀಡಾಗಿದ್ದು ಅಕ್ತರ್ ಬೇಗಂ ಸೋಮವಾರ ಬೆಳಗ್ಗೆ ಮಗನ ಬೈಕ್‌ನಲ್ಲಿ ಬಸ್ ನಿಲ್ದಾಣದವರೆಗೆ ಡ್ರಾಪ್ ಪಡೆದುಕೊಂಡಿದ್ದಾರೆ. ಈ ವೇಳೆ ತಮ್ಮ ಮೊಬೈಲ್‌ನನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾರೆ. ಇದನ್ನು ಕಂಡ ಪೋಷಕರು ಮರೆತುಹೋಗಿರಬಹುದು ಎಂದು ಭಾವಿಸಿದ್ದರು. ರಾತ್ರಿಯಾದರೂ ಮನೆಗೆ ವಾಪಸ್ ಬರದೆ ಇದ್ದಾಗ ಕುಟುಂಬದವರು ಗಾಬರಿಗೊಂಡು ಕೋಲಾರ ನಗರ ಠಾಣೆಯಲ್ಲಿ ದೂರು ನೀಡಿದ್ದರು.

ಸಮೀಕ್ಷೆ ಕೆಲಸದಲ್ಲಿ ಹಿನ್ನಡೆ

ಈ ಬಗ್ಗೆ ಅನೇಕ ಕಡೆ ವಿಚಾರಿಸಿದರೂ ಶಿಕ್ಷಕಿಯ ಸುಳಿವು ಸಿಕ್ಕಿರಲಿಲ್ಲ. ಸಮೀಕ್ಷೆ ಕಾರ್ಯದಲ್ಲಿ ಸಾರ್ವಜನಿಕರು ಸರಿಯಾಗಿ ಸ್ಪಂದಿಸದೆ ಸಮೀಕ್ಷೆಯ ಪ್ರಗತಿ ಸಾಧಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಹಿರಿಯ ಅಧಿಕಾರಿಗಳ ಕಡೆಯಿಂದಲೂ ಒತ್ತಡ ಹೆಚ್ಚಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗಿದೆ.

ಮೂರು ದಿನಗಳ ನಂತರ ಬೇತಮಂಗಳ ಹೋಬಳಿಯ ಟಿ.ಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಅಯ್ಯಪಲ್ಲಿ ಅಮಾನಿಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಪೋಷಕರ ಅಕ್ರಂದನ ಮುಗಿಲು ಮುಟ್ಟಿದೆ.