ಪ್ರಕೃತಿ ಮಡಿಲಲ್ಲಿರುವ ಈ ಶಾಲೆ ಅತ್ಯಂತ ಹಿಂದುಳಿದ ಗ್ರಾಮೀಣ ಭಾಗದ ಮಕ್ಕಳ ಸರ್ವತೋಮುಖ ಬೆಳವಣಿಗೆ ಶ್ರಮಿಸುತ್ತಿದೆ. ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ಭಾವಿಸಿ ಶಿಕ್ಷಣ ನೀಡುವ ಜೊತೆಗೆ ಪೋಷಕರು ಸಹ ಮನೆಯಲ್ಲಿ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಿದಾಗ ಮಾತ್ರ ಮಕ್ಕಳ ಸಾಧನೆ ಶಿಖರ ಏರಲು ಸಾಧ್ಯ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಜ್ಞಾನವಂತನೇ ದೊಡ್ಡ ವ್ಯಕ್ತಿ ಎಂಬ ಕಾಲ ಬಂದಿದೆ. ಮಕ್ಕಳನ್ನು ಜ್ಞಾನವಂತರಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಜೊತೆಗೆ ಪೋಷಕರ ಮೇಲು ಇದೆ ಎಂದು ಸಾಹಿತಿ, ವಿಚಾರವಾದಿ ಪ್ರೊ.ಎಂ.ಕೃಷ್ಣೇಗೌಡ ತಿಳಿಸಿದರು.ತಾಲೂಕಿನ ಪಂಡಿತಹಳ್ಳಿಯ ಸೆಂಟ್ ಜೋಸೆಫ್ ಆಂಗ್ಲ (ಜಿಸ್ವಿಟ್ ಸಂಸ್ಥೆ) ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಇದುವರೆಗೆ ಆಸ್ತಿ, ಹಣ, ಅಂತಸ್ತು ಹೊಂದಿದವರನ್ನು ದೊಡ್ಡವ್ಯಕ್ತಿ ಎಂದು ಹೇಳಲಾಗುತ್ತಿತ್ತು. ಈಗ ಆದನ್ನು ಗುರುತಿಸುವ ಕಾಲ ಮುಗಿದಿದೆ ಎಂದರು.
ಪ್ರಕೃತಿ ಮಡಿಲಲ್ಲಿರುವ ಈ ಶಾಲೆ ಅತ್ಯಂತ ಹಿಂದುಳಿದ ಗ್ರಾಮೀಣ ಭಾಗದ ಮಕ್ಕಳ ಸರ್ವತೋಮುಖ ಬೆಳವಣಿಗೆ ಶ್ರಮಿಸುತ್ತಿದೆ. ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ಭಾವಿಸಿ ಶಿಕ್ಷಣ ನೀಡುವ ಜೊತೆಗೆ ಪೋಷಕರು ಸಹ ಮನೆಯಲ್ಲಿ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಿದಾಗ ಮಾತ್ರ ಮಕ್ಕಳ ಸಾಧನೆ ಶಿಖರ ಏರಲು ಸಾಧ್ಯ ಎಂದರು.ಶಾಲೆ ಸಂಚಾಲಕರಾದ ಫಾದರ್ ಎಸ್.ಜೆ.ಪ್ರದೀಪ್ ಅಂತೋನಿ ಮಾತನಾಡಿ, ಮಕ್ಕಳನ್ನು ಮಕ್ಕಳಾಗಿ ಬೆಳೆಯಲು ಬಿಟ್ಟು ಅವರಲ್ಲಿರುವ ಪ್ರತಿಭೆ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಶಿಕ್ಷಕರು ಮತ್ತು ಪೋಷಕರು ಕೂಡಿ ಮಾಡಬೇಕು ಎಂದರು,
ಪ್ರಾಂಶುಪಾಲರಾದ ಫಾದರ್ ಎಸ್. ಜೆ.ಆಲ್ವಿನ್ ಡಿಸೋಜ ಮಾತನಾಡಿ, ಪ್ರತಿಯೊಂದು ಮಗುವಿನ ಸಾಮರ್ಥ್ಯವನ್ನು ಗುರುತಿಸಿ ಬೆಳೆಸುವ ಸಮಗ್ರ ಬೆಳವಣಿಗೆಯನ್ನು ಹೊತ್ತಿ ಸಮಾಜಕ್ಕೆ ಜವಾಬ್ದಾರಿಯುತ ಸೇವಾಭರಿತ ಮುಂದಿನ ಭವಿಷ್ಯಕ್ಕೆ ಸಿದ್ಧರಾಗಿಸುವ, ನಾಗರಿಕರಾಗಿ ರೂಪಿಸುವ ಗುರಿಯನ್ನು ಹೊಂದುವ ಕಾರ್ಯವನ್ನು ಜಿಸ್ವಿಟ್ ಸಂಸ್ಥೆ ಮಾಡುತ್ತಿದೆ ಎಂದರು.ಇದೇ ವೇಳೆ ಶಿಕ್ಷಣ ಹಾಗೂ ಕ್ರೀಡಾಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನೂರಕ್ಕೆ ನೂರರಷ್ಟು ಹಾಜರಾತಿ ಪಡೆದಿದ್ದ ಶಿಕ್ಷಕಿ ಚಂದ್ರಕಲಾ ಅವರಿಗೆ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು. ಬಳಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ವೇಳೆ ಸೂರ್ಯ ಸೂಪರ್ ಥ್ರೆಡ್ ನಿರ್ದೇಶಕ ಸುನೀಲ್ ದಳ್ ವನಿ, ಮಾಸ್ಟರ್ ಮ್ಯಾರಿನರ್ ಗ್ಲೇನ್ ರಿಗೊ, ಅಂತೋನಿದಾಸ್, ಸಿಸ್ಟರ್ ಲಿಂಡಿಯ್, ವಿದ್ಯಾರ್ಥಿ ಪ್ರತಿನಿಧಿಗಳಾದ ಸಿಂಚಿನ, ಬಾಲಾಜಿಗೌಡ, ನಿರೂಪಕರಾದ ಯಶಸ್ವಿ, ಜಾನ್ಸಿ ಸೇರಿದಂತೆ ಸಹಶಿಕ್ಷಕರು, ಪೋಷಕರು ಹಾಜರಿದ್ದರು.