ಹುಬ್ಬಳ್ಳಿ ಮರ್ಯಾದಾ ಹತ್ಯೆ ಪ್ರಕರಣದ ಪೂರ್ವದ ಅರಿವಿದ್ದರೂ ಹತ್ಯೆಯನ್ನು ತಡೆಯಲಾಗದೆ ಕೈಚೆಲ್ಲಿದ ಪೋಲೀಸರ ವೈಫಲ್ಯಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯನ್ನು ಈ ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಮತ್ತು ರಾಜ್ಯ ಸರ್ಕಾರ ತನ್ನ ವೈಫಲ್ಯದ ನೈತಿಕ ಹೊಣೆ ಹೊರಬೇಕು.

ಮಂಡ್ಯ:

ಕಾಂಗ್ರೆಸ್ ಸರ್ಕಾರ ದಲಿತರ ಮಾನಪ್ರಾಣ, ಆಸ್ತಿ ಸಂರಕ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ, ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ ಪ್ರಕರಣನ್ನು ಖಂಡಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸಿದರು.

ಹುಬ್ಬಳ್ಳಿಯ ಇನಾಂ ವೀರಪುರ ಗ್ರಾಮದಲ್ಲಿ ಕಳೆದ 7 ತಿಂಗಳ ಹಿಂದೆ ದಲಿತ ಯುವಕ ವಿವೇಕಾನಂದನನ್ನು ಪ್ರೀತಿಸಿ ಅನ್ಯ ಜಾತಿಯ ಮಾನ್ಯ ಎಂಬುವವರು ವಿವಾಹವಾದ ಕಾರಣಕ್ಕೆ ಹೆತ್ತ ತಂದೆಯೇ ಮರ್ಯಾದಾ ಹತ್ಯೆ ನಡೆಸಿರುವುದನ್ನು ಖಂಡಿಸಿದರು.

ದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಮಾತನಾಡಿ, ಹುಬ್ಬಳ್ಳಿ ಮರ್ಯಾದಾ ಹತ್ಯೆ ಪ್ರಕರಣದ ಪೂರ್ವದ ಅರಿವಿದ್ದರೂ ಹತ್ಯೆಯನ್ನು ತಡೆಯಲಾಗದೆ ಕೈಚೆಲ್ಲಿದ ಪೋಲೀಸರ ವೈಫಲ್ಯಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯನ್ನು ಈ ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಮತ್ತು ರಾಜ್ಯ ಸರ್ಕಾರ ತನ್ನ ವೈಫಲ್ಯದ ನೈತಿಕ ಹೊಣೆ ಹೊರಬೇಕು ಎಂದು ಆಗ್ರಹಿಸಿದರು.

ಮುಗ್ದ ಮನಸಿನ ಮಕ್ಕಳ ಮೇಲೆಯೇ ಈ ಕ್ರೌರ್ಯ ಮೆರೆದ ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಗುರಿಪಡಿಸಲು ಸಮರ್ಪಕವಾದ ತನಿಖೆಗಾಗಿ ಎಸ್.ಐ.ಟಿ ಮೂಲಕ ತನಿಖೆ ನಡೆಸಲು ರಾಜ್ಯ ಸರ್ಕಾರ ಮುಂದಾಗಬೇಕು. ಹುಬ್ಬಳ್ಳಿ ಇನಾಂ ವೀರಪುರದ ಸಂತ್ರಸ್ಥ ದಲಿತ ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡಿ ಸಂಪೂರ್ಣ ಪುನ‌ರ್ ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಆನಂದ್, ಸುಸ್ಮಿತ, ಸುರೇಶ್ ಕುಮಾರ್ ಶೆಟ್ಟಹಳ್ಳಿ, ಶರಾವತಿ ಅಶ್ವಥ್, ಮುತ್ತುರಾಜ್, ಕರಿಯಪ್ಪ ಇತರರಿದ್ದರು.

ಡಿ.29 ರಂದು ಉದ್ಯೋಗ ಮೇಳ

ಮಂಡ್ಯ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಡಿ.29 ರಂದು ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

ಮೇಳದಲ್ಲಿ 8 ರಿಂದ 10 ಕಂಪನಿಯ ನಿಯೋಜಕರುಗಳು ಭಾಗವಹಿಸಲಿದ್ದಾರೆ. ಜಿಲ್ಲೆಯ ಅರ್ಹ ನಿರುದ್ಯೋಗ ಅಭ್ಯರ್ಥಿಗಳಿಗೆ ನೇಮಕಾತಿ ಪ್ರಕ್ರಿಯೆಯು ಜರುಗಲಿದೆ. ಪ್ರಮುಖವಾಗಿ ಯುವನಿಧಿ ಫಲಾನುಭವಿಗಳು ಮೇಳದಲ್ಲಿ ಭಾಗವಹಿಸಿ ಉದ್ಯೋಗವನ್ನು ಪಡೆದುಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ. ಉದ್ಯೋಗ ಮೇಳದಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ. ಪದವಿ, ಐ.ಟಿ.ಐ, ಹಾಗೂ ಸ್ನಾತಕೋತ್ತರ ಪದವಿ ತೇರ್ಗಡೆಯಾಗಿರುವ ಅಭ್ಯರ್ಥಿಗಳು ಭಾಗವಹಿಸಬಹುದು. ಮಂಡ್ಯ, ಮೈಸೂರು, ಬೆಂಗಳೂರು ಹಾಗೂ ಇನ್ನೂ ಹಲವಾರು ಸ್ಥಳಗಳಲ್ಲಿ 2000 ಉದ್ಯೋಗಾವಕಾಶಗಳು ಲಭ್ಯವಿದ್ದು, ವೇತನವು ಕನಿಷ್ಠ ರು,14,750/- ನಿಂದ ಗರಿಷ್ಠ ರು,50000/- ದ ಉದ್ಯೋಗಾವಕಾಶಗಳು ಲಭ್ಯವಿದೆ.

ಅಭ್ಯರ್ಥಿಯ ವಯೋಮಿತಿಯು ಕನಿಷ್ಠ 18 ರಿಂದ 40ವರ್ಷದೊಳಗೆ ಇರಬೇಕು. ಆಸಕ್ತರು ಅನ್‌ಲೈನ್‌ನಲ್ಲಿ ಲಿಂಕ್ ಅಥವಾ ಈ ಕೆಳಕಂಡ ಕ್ಯೂಆರ್ ಕೋಡ್‌ನ್ನು ಬಳಸಿಕೊಂಡು ಉದ್ಯೋಗ ಮೇಳದಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಮೊ:9113875775, 9741939716 ಮತ್ತು 9113500761 ಅನ್ನು ಸಂಪರ್ಕಿಸಲು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.