ರೈತರೇ ಈ ದೇಶದ ಬೆನ್ನೆಲುಬು ಅನ್ನದಾತರು ಎಂದು ರಾಜಕೀಯ ನಾಯಕರು, ವಿಚಾರವಂತರು, ಗಣ್ಯರು ಬರೀ ಮಾತಿನಲ್ಲಿ ಹೇಳುತ್ತಾರೆ. ಅದೇ ಸಂಕಷ್ಟಕ್ಕೆ ಸಿಲುಕಿದಾಗ ಯಾರು ಅವರ ನೆರವಿಗೆ ಧಾವಿಸುವುದಿಲ್ಲ. ಎಲ್ಲರೂ ಸ್ವಾರ್ಥ ಜೀವನಕ್ಕೆ ಮುಂದಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಆಳುವ ಸರ್ಕಾರಗಳು ನಿರಂತರವಾಗಿ ದಬ್ಬಾಳಿಕೆ ಮಾಡುತ್ತಾ ಕೃಷಿ ನಂಬಿ ಬದುಕುತ್ತಿರುವ ರೈತರನ್ನು ನಾಶ ಮಾಡುವ ವಾತಾವರಣವನ್ನು ಸೃಷ್ಠಿಸಿವೆ ಎಂದು ರೈತ ನಾಯಕಿ ಸುನಂದ ಜಯರಾಂ ಆತಂಕ ವ್ಯಕ್ತಪಡಿಸಿದರು.ಸಮೀಪದ ಅಂಬೇಡ್ಕರ್ ಭವನದಲ್ಲಿ ವಿಶ್ವ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊಸದಾಗಿ ಬರುತ್ತಿರುವ ರೈತ ವಿರೋಧಿ ಕಾನೂನುಗಳಿಂದ ರೈತರು ಕೃಷಿ ಬಿಟ್ಟು ದಿಕ್ಕಪಾಲಾಗಿ ಹೋಗುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತರೇ ಈ ದೇಶದ ಬೆನ್ನೆಲುಬು ಅನ್ನದಾತರು ಎಂದು ರಾಜಕೀಯ ನಾಯಕರು, ವಿಚಾರವಂತರು, ಗಣ್ಯರು ಬರೀ ಮಾತಿನಲ್ಲಿ ಹೇಳುತ್ತಾರೆ. ಅದೇ ಸಂಕಷ್ಟಕ್ಕೆ ಸಿಲುಕಿದಾಗ ಯಾರು ಅವರ ನೆರವಿಗೆ ಧಾವಿಸುವುದಿಲ್ಲ. ಎಲ್ಲರೂ ಸ್ವಾರ್ಥ ಜೀವನಕ್ಕೆ ಮುಂದಾಗಿದ್ದಾರೆ ಎಂದು ಕಿಡಿಕಾರಿದರು.ಸರಕಾರ ರೈತರ ನೆರವಿಗೆ ಧಾವಿಸಬೇಕು. ಯಾವುದೇ ಒತ್ತಡಗಳಿಗೆ ಒಳಗಾಗದೇ ರೈತರು ಬೆಳೆಯುವ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು ನಿಗದಿ ಮಾಡಬೇಕು. ಒಂದು ವೇಳೆ ರೈತರನ್ನು ಇದೀ ರೀತಿ ನಿರ್ಲಕ್ಷ್ಯ ಮಾಡುತ್ತಾ ಹೋದರೆ ಜನರು ಹಸಿವಿನಿಂದ ಸಾಯುವ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತರು ಯಾವ ವಿಚಾರವಂತ, ಪಿಎಚ್ ಡಿಪದವಿದರರಿಗಿಂತ ಹೆಚ್ಚು ಬುದ್ದಿವಂತಿಕೆ, ಶಕ್ತಿ ಹೊಂದಿದ್ದಾರೆ. ಜನರು ತಮ್ಮ ಪ್ರಾಣ ಹೋಗುವವರೆಗೂ ರೈತ ಸಂಘ, ರೈತರಿಗೆ ಬೆಲೆಕೊಡಬೇಕು. ರೈತರು ಸ್ವಾಭಿಮಾನವನ್ನು ಕಳೆದುಕೊಳ್ಳಬಾರದು. ರೈತರಲ್ಲಿ ಚಿಕ್ಕವರು ದೊಡ್ಡವರು ಎಂಬ ಬೇಧ ಬಾವವಿಲ್ಲ ಎಂದರು.ರೈತ ಸಂಘದ ಚಳವಳಿಗಳು ಗುಂಪು ಗುಂಪಾಗಲೂ ರಾಜಕೀಯ ನಾಯಕರುಗಳೇ ಕಾರಣ. ರೈತರು ಎಲ್ಲಾ ಹೋರಟಗಳಲ್ಲೂ ಭಾಗವಹಿಸುತ್ತಾರೆ. ಆದರೆ, ರೈತ ಕಾರ್ಯಕ್ರಮಗಳಿಗೆ ರೈತರೇ ಬರುವುದಿಲ್ಲ. ಇದು ವಾಸ್ತವವಾಗಿದೆ. ಒಬ್ಬ ಚಳವಳಿಗಾರ ಹೋರಾಟ, ಸಿದ್ದಾಂತ ಕಾನೂನಿನ ಚೌಕಟ್ಟಿನ ಒಳಗಿರಬೇಕು ಎಂದು ತಿಳಿಸಿದರು.
ಪೊಲೀಸ್ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಮಾತನಾಡಿ, ತುತ್ತು ಅನ್ನ ತಿನ್ನುವ ಮೊದಲು ರೈತನನ್ನು ನೆನೆಯಿರಿ ಎಂಬ ನಾಣ್ಣುಡಿಯಂತೆ ಇಂದು ನಾವೆಲ್ಲರೂ ಹೊಟ್ಟೆ ತುಂಬುವಷ್ಟು ಊಟ ಮಾಡಿ ಹಸಿವೆ ಇಲ್ಲದೆ ನಿಶ್ಚಿಂತೆಯಿಂದ ನಿದ್ದೆ ಮಾಡುತ್ತಿದ್ದೇವೆ ಎಂದರೆ ಇದಕ್ಕೆ ರೈತನ ಬೇವರಿನ ಶ್ರಮವೇ ಕಾರಣ ಎಂದರು.ನಮಗೆಲ್ಲರಿಗೂ ಡಾಕ್ಟರ್, ಲಾಯರ್, ಇಂಜಿನಿಯರ್‌ಗಳು ಮಾತ್ರ ಮುಖ್ಯ ಎನಿಸುತ್ತಾರೆ. ಆದರೆ, ಮೂರು ಹೊತ್ತು ಅನ್ನಕ್ಕೆ ಕಾರಣವಾಗಿರುವ ರೈತನ ನೆನಪು ಮಾತ್ರ ಬರುವುದಿಲ್ಲ. ಪ್ರತಿಯೊಬ್ಬರೂ ರೈತನಿಗೆ ಕೃತಜ್ಞರಾಗಿರಬೇಕು ಎಂದು ಕಿವಿಮಾತು ಹೇಳಿದರು.
ರೈತರಿಗೆ ಸಣ್ಣ ಅಸೆಗಳು ಮಾತ್ರ ಇರುತ್ತವೆ. ಅವರು ಬೆಳೆದ ಫಸಲಿಗೆ ಒಳ್ಳೆಯ ಬೆಲೆ ಸಿಕ್ಕರೇ ಅವರಿಗೆ ಪರಮಾನಂದ. ರೈತ ದೇಶದ ಬೆನ್ನಲುಬು ಮಾತ್ರವಲ್ಲ. ರೈತರು ಬೆಳೆದ ಬೆಲೆಗಳಿಗೆ ಬೆಂಬಲ ನೀಡಿದರೆ ಅದೇ ಇಡೀ ಮಾನವ ಕುಲದ ಬೆನ್ನಲುಬು ಎಂದು ತಿಳಿಸಿದರು.ಜಿಲ್ಲಾ ರೈತ ಸಂಘದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್ ಮಾತನಾಡಿ, ದೇಶದಲ್ಲಿ ಹಸಿವಿನಿಂದ ಇರುವ ಎಲ್ಲರ ಹೊಟ್ಟೇ ತುಂಬಿಸೋದೆ ರೈತರು. ಜಮೀನಿನಲ್ಲಿ ನಾಟಿ ಹಾಕಿ, ಕಳೆ ಕೀಳೋ ರೈತರಿಗೆ ಸನ್ಮಾನ ಮಾಡದೇ ರಾಜಕೀಯ ನಾಯಕರಿಗೆ ಹಾರ ತುರಾಯಿ ಹಾಕಲು ಹಿಡಿದುಕೊಂಡು ರೈತರೇ ಮುಂದೆ ಇರುತ್ತಾರೆ ಎಂದು ಇದು ವಿಪರ್ಯಸ. ರೈತರ ಕಷ್ಠ ಇಂದಿನ ರಾಜಕಾರಣಿಗಳಿಗೆ ತಿಳಿದಿಲ್ಲ. ಸರ್ಕಾರವೇ ರೈತ ದಿನಾಚರಣೆ ಆಚರಿಸಿದೆ ದ್ರೋಹ ಮಾಡುತ್ತಿದೆ ಎಂದು ಬೇಸರ ಹೊರ ಹಾಕಿದರು.
ಈ ವೇಳೆ ಹಿರಿಯ ರೈತ ಮುಖಂಡ ಸೀತರಾಮು ಹಾಗೂ ಶ್ರಮಿಕ ರೈತ ಮಹಿಳೆಯರನ್ನು ಸನ್ಮಾನಿಸಿರು. ಕಾರ್ಯಕ್ರಮವನ್ನು ರೈತ ಸಂಘದ ತಾಲೂಕು ಅಧ್ಯಕ್ಷ ಎಚ್.ಜಿ.ಪ್ರಭುಲಿಂಗ ಉದ್ಘಾಟಿಸಿದರು. ಈ ವೇಳೆ ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಅಣ್ಣೂರು ಮಹೇಂದ್ರ, ಜಿಪಂ ಮಾಜಿ ಸದಸ್ಯ ಎ.ಎಸ್.ರಾಜೀವ್, ರೈತ ಹೋರಾಟಗಾರರಾದ ಪುಟ್ಟಸ್ವಾಮಿ, ಬನ್ನೂರು ನಾರಾಯಣ್, ಯೋಗೇಶ್, ಮಂಜೇಶ್, ನಾಗೇಂದ್ರ, ನಂಜುಂಡಯ್ಯ, ತೊರೆಚಾಕನಹಳ್ಳಿ ಶಂಕರೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಪ್ರೊ.ಬಿ.ಎಸ್.ಬೋರೆಗೌಡ, ಕರಡಕೆರೆ ಯೋಗೇಶ್, ಅಣ್ಣೂರು ನವೀನ್. ಜೆಡಿಎಸ್ ಮಹಿಳಾ ತಾಲೂಕು ಅಧ್ಯಕ್ಷೆ ದಿವ್ಯ ರಾಮಚಂದ್ರ ಮತ್ತಿತರರು ಇದ್ದರು.