ಶಿಕ್ಷಕರು ಅಧ್ಯಯನಶೀಲರಾಗಿ: ಸಾಹಿತಿ ಡಾ.ಶಿವಕುಮಾರಸ್ವಾಮಿ

| Published : Feb 28 2025, 12:45 AM IST

ಸಾರಾಂಶ

ರಾಮನಗರ: ಶಿಕ್ಷಕರು ಉತ್ತಮ ಸಮಾಜವನ್ನು ನಿರ್ಮಾಣ ಮಾಡುವ ಅರ್ಹತೆಯನ್ನು ಹೊಂದಿದ್ದಾರೆ. ಶಿಕ್ಷಕ ವೃತ್ತಿಗಾಗಿ ತರಬೇತಿ ಪಡೆಯುತ್ತಿರುವ ನೀವು ಯಾವುದೇ ಭ್ರಮೆಗಳಲ್ಲಿ ಮುಳುಗದೆ ಅಧ್ಯಯನಶೀಲರಾಗಿ ಮಕ್ಕಳಿಗೆ ಉತ್ತಮವಾಗಿ ಬೋಧಿಸಬೇಕು ಎಂದು ಸಾಹಿತಿ ಡಾ.ಸಿ.ಶಿವಕುಮಾರಸ್ವಾಮಿ ತಿಳಿಸಿದರು.

ರಾಮನಗರ: ಶಿಕ್ಷಕರು ಉತ್ತಮ ಸಮಾಜವನ್ನು ನಿರ್ಮಾಣ ಮಾಡುವ ಅರ್ಹತೆಯನ್ನು ಹೊಂದಿದ್ದಾರೆ. ಶಿಕ್ಷಕ ವೃತ್ತಿಗಾಗಿ ತರಬೇತಿ ಪಡೆಯುತ್ತಿರುವ ನೀವು ಯಾವುದೇ ಭ್ರಮೆಗಳಲ್ಲಿ ಮುಳುಗದೆ ಅಧ್ಯಯನಶೀಲರಾಗಿ ಮಕ್ಕಳಿಗೆ ಉತ್ತಮವಾಗಿ ಬೋಧಿಸಬೇಕು ಎಂದು ಸಾಹಿತಿ ಡಾ.ಸಿ.ಶಿವಕುಮಾರಸ್ವಾಮಿ ತಿಳಿಸಿದರು.

ನಗರದ ಜಾನಪದ ಲೋಕದಲ್ಲಿ ಬೆಂಗಳೂರಿನ ಕಾವೇರಿ ಬಿ.ಇಡಿ ಕಾಲೇಜು ವತಿಯಿಂದ ಪ್ರಶಿಕ್ಷಣಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸಮುದಾಯ ಜೀವನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಶಾಲೆಗಳಲ್ಲಿ ಓದುತ್ತಿರುವ ಹಲವು ಮಕ್ಕಳಿಗೆ ತಮ್ಮ ಹೆಸರುಗಳನ್ನು ತಪ್ಪಿಲ್ಲದಂತೆ ಬರೆಯಲು ಬರುತ್ತಿಲ್ಲ. ಇಂತಹ ಸಂದರ್ಭದಲ್ಲಿ ಶಿಕ್ಷಕರು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕಿದೆ ಎಂದು ಕಿವಿಮಾತು ಹೇಳಿದರು.

ಜಾಗತಿಕ ನಕ್ಷೆಯಲ್ಲಿ ಭಾರತ ಗುರುತಿಸಿಕೊಳ್ಳಲು ಗುಣಮಟ್ಟದ ಶಿಕ್ಷಣ ಹಾಗೂ ಶಿಕ್ಷಕರು ಅವಶ್ಯಕ. ಯಾವ ದೇಶ ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸುವುದೋ ಅದು ಜಾಗತಿಕ ಮಟ್ಟದ ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಗೆ ಸೇರುವುದು ಖಚಿತ. ಈ ನಿಟ್ಟಿನಲ್ಲಿ ನಮ್ಮ ದೇಶವನ್ನು ಪ್ರಗತಿಯತ್ತಾ ಕೊಂಡೊಯ್ಯಬೇಕಾದರೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ, ಗುಣಮಟ್ಟದ ಶಿಕ್ಷಕರಿಂದ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಶಿಕ್ಷಣ ಒದಗಿಸಬೇಕು ಎಂದು ತಿಳಿಸಿದರು.

ವಿದ್ಯಾರ್ಥಿ ದಿಸೆಯಲ್ಲಿ ಸಾಧನೆ ಚಿಕ್ಕದಾಗಿದ್ದರೂ ಕಾಣುವ ಕನಸು ದೊಡ್ಡದಾಗಿದ್ದಾಗ ಮಾತ್ರ ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತದೆ. ಶಿಕ್ಷಣ ಕಲಿಯುವ ಹಂತದಲ್ಲಿ ವಿದ್ಯಾರ್ಥಿಗಳು ಶ್ರದ್ದೆ ಮತ್ತು ಶ್ರಮದಿಂದ ಸಮಯವನ್ನು ಸದ್ಭಳಕೆ ಮಾಡಿಕೊಂಡು ಕಲಿಯಬೇಕು. ಒಮ್ಮೆ ಹೋದ ಸಮಯ ಮತ್ತೆಂದು ಹಿಂದಕ್ಕೆ ಬರುವುದಿಲ್ಲ ಎಂಬುದನ್ನು ವಿದ್ಯಾರ್ಥಿಗಳು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.

ಇಂದಿನ ಪ್ರತಿಯೊಬ್ಬ ವಿದ್ಯಾರ್ಥಿಗೂ ಭಾರತ ದೇಶ ಕಂಡಂತಹ ಅಪರೂಪದ ರಾಷ್ಟ್ರಪತಿ ಹಾಗೂ ವಿಜ್ಞಾನಿ ಅಬ್ದುಲ್ ಕಲಾಂ ಅವರು ಮಾರ್ಗದರ್ಶಕರಾಗಬೇಕು. ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ ಪ್ರತಿಯೊಂದು ಆದರ್ಶಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.

ಕಾವೇರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎಂ. ದೇವರಾಜಪ್ಪ ಮಾತನಾಡಿ, ಶಿಕ್ಷಕರು ಜ್ಞಾನ ದಾಹದ ಜತೆಗೆ ಪುಸ್ತಕಗಳ ಮೇಲೆ ಹೆಚ್ಚಿನ ಒಲವು ಹೊಂದಿರಬೇಕು. ಅಲ್ಲದೇ ಯಾವುದೇ ಪ್ರತಿಫಲ, ಪುರಸ್ಕಾರಗಳ ಆಮೀಷಕ್ಕೆ ಒಳಗಾಗದೆ ನಿಸ್ವಾರ್ಥ ಮನೋಭಾವದಿಂದ ಸಮಾಜ ಸೇವೆಗೂ ಮುಂದಾಗಬೇಕು ಎಂದು ತಿಳಿಸಿದರು.

ಕಾವೇರಿ ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ಡಾ.ಇ.ಬಿ. ರಾಜೇಶ್ ಮಾತನಾಡಿ, ಶಿಕ್ಷಕ ತರಬೇತಿಯನ್ನು ಪಡೆಯುವವರು ಶಿಸ್ತು ಸಂಯಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ಅರ್ಥವಾಗುವಂತೆ ಪರಿಣಾಮಕಾರಿಯಾಗಿ ಬೋಧಿಸಬೇಕು. ಪಠ್ಯವನ್ನು ಬೋಧಿಸುವ ಜತೆಗೆ ಮಕ್ಕಳನ್ನು ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿ ಅವರ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗಬೇಕು ಎಂದು ಹೇಳಿದರು.

ಶಿಬಿರದ ಮುಖ್ಯಸ್ಥ ಶಿವಗುಂಡಪ್ಪ, ಸಹಮುಖ್ಯಸ್ಥ ಮೋಹನ್ ಕುಮಾರ್, ಪ್ರಶಿಕ್ಷಣಾರ್ಥಿಗಳಾದ ವೈಷ್ಣವಿ, ಶಿಲ್ಪ, ಶಿವರಾಜ್‌, ಡಿ. ಶಿಲ್ಪ ಇತರರು ಪಾಲ್ಗೊಂಡಿದ್ದರು.

26ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಜಾನಪದ ಲೋಕದಲ್ಲಿ ಬೆಂಗಳೂರಿನ ಕಾವೇರಿ ಬಿ.ಇಡಿ ಕಾಲೇಜು ವತಿಯಿಂದ ಪ್ರಶಿಕ್ಷಣಾರ್ಥಿಗಳಿಗೆ ಶನಿವಾರ ಹಮ್ಮಿಕೊಂಡಿದ್ದ ಸಮುದಾಯ ಜೀವನ ಶಿಬಿರದಲ್ಲಿ ಸಾಹಿತಿ ಡಾ.ಸಿ. ಶಿವಕುಮಾರಸ್ವಾಮಿ ಅವರನ್ನು ಸನ್ಮಾನಿಸಲಾಯಿತು.