ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಿ: ವೈ.ದೇವೇಂದ್ರಪ್ಪ

| Published : Nov 16 2025, 02:45 AM IST

ಸಾರಾಂಶ

ಸರ್ಕಾರಿ ಶಾಲೆಗಳಲ್ಲಿ ಬಡ ವಿದ್ಯಾರ್ಥಿಗಳಿರುವುದರಿಂದ ಶೈಕ್ಷಣಿಕ ಪ್ರಗತಿ ಆಗಬೇಕಾದರೆ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಬೇಕು.

ಹರಪನಹಳ್ಳಿ: ತಾಲೂಕಿನ ಅರಸೀಕೆರೆ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರ ಹಾಗೂ ಶಿಕ್ಷಕರ ಮಹಾಸಭೆ ನಡೆಯಿತು.

ಬಳ್ಳಾರಿಯ ಮಾಜಿ ಸಂಸದ ವೈ.ದೇವೇಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಬಡ ವಿದ್ಯಾರ್ಥಿಗಳಿರುವುದರಿಂದ ಶೈಕ್ಷಣಿಕ ಪ್ರಗತಿ ಆಗಬೇಕಾದರೆ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಬೇಕು. ಜೊತೆಗೆ ಪೋಷಕರು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದರೆ ಶೈಕ್ಷಣಿಕ ಪ್ರಗತಿ ಕಾಣಬಹುದು ಎಂದು ಹೇಳಿದರು.

ಜವಾಹರ್ ಲಾಲ್ ನೆಹರೂ ಅವರ ಹುಟ್ಟುಹಬ್ಬದ ಪ್ರಯುಕ್ತ ಮಕ್ಕಳ ದಿನಾಚರಣೆಯನ್ನು ಆಚರಣೆ ಮಾಡುವ ಜೊತೆಗೆ ಪೋಷಕರು ಹಾಗೂ ಶಿಕ್ಷಕರ ಮಹಾಸಭೆಯನ್ನು ಮಾಡುತ್ತಿದ್ದೇವೆ. ಶಿಕ್ಷಕರಾದ ನೀವು ಚಿಕ್ಕಂದಿನಿಂದಲೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು, ಹಾಗಾದರೆ ಮಾತ್ರ ಶೈಕ್ಷಣಿಕ ಪ್ರಗತಿ ಸಾಧ್ಯ ಎಂದು ಹೇಳಿದರು.

ಎಸ್ ಡಿಎಂಸಿ ಅಧ್ಯಕ್ಷ ಖಾಜಾ ಸಾಹೇಬ್ ಮಾತನಾಡಿ, ಸರ್ಕಾರವು ಶಿಕ್ಷಕರು ಶಾಲೆಗೆ ಬರಲು, ಹೋಗಲು ಒಂದು ಸಮಯವನ್ನು ನಿಗದಿಪಡಿಸಿದೆ. ಆ ಸಮಯಕ್ಕೆ ಸರಿಯಾಗಿ ಎಲ್ಲ ಶಿಕ್ಷಕರು ಶಾಲೆಗೆ ಬಂದು ಹೋಗಬೇಕು. ಮೊದಲು ಶಿಕ್ಷಕರಿಗೆ ಸಮಯದ ಪ್ರಜ್ಞೆ ಇರಬೇಕು. ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಮೊರಾರ್ಜಿ, ನವೋದಯ, ಆದರ್ಶ ವಿದ್ಯಾಲಯಗಳ ಪರೀಕ್ಷೆ ಬರೆಯುವಂತೆ ಉತ್ತಮ ಶಿಕ್ಷಣ ನೀಡಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಪ್ರಭಾರ ಮುಖ್ಯ ಶಿಕ್ಷಕ ಎಂ.ಮಾಲತೇಶ್ ಪಾಟೀಲ್ ಮಾತನಾಡಿ, ಈ ಶಾಲೆಯಲ್ಲಿ ಉತ್ತಮ ಕೊಠಡಿಗಳಿವೆ. ಶಿಕ್ಷಣ ಕಲಿಯಲು ಉತ್ತಮ ವಾತಾವರಣವಿದೆ. ನಮ್ಮ ಶಾಲೆಯಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ಇವೆ. ಊರಿನವರ ಪ್ರೋತ್ಸಾಹ ಹಾಗೂ ಸಹಕಾರವಿದೆ. ಮುಂದಿನ ದಿನಗಳಲ್ಲಿ ಹಾಸ್ಟೆಲ್ ವ್ಯವಸ್ಥೆ ಮಾಡಿಕೊಡಬೇಕೆಂದು ಮಾಜಿ ಸಂಸದರಿಗೆ ಹಾಗೂ ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ದೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಆರೋಗ್ಯ ಇಲಾಖೆಯಿಂದ ಅಸುರಕ್ಷಿತ ಸ್ಪರ್ಶ, ಸುರಕ್ಷಿತ ಸ್ಪರ್ಶದ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾದರೆ ಮಕ್ಕಳ ಸಹಾಯವಾಣಿ 1098ಕ್ಕೆ ಕರೆಮಾಡಬೇಕೆಂದು ಹೇಳಿದರು.

ಎಸ್ ಡಿಎಂಸಿ ಅಧ್ಯಕ್ಷ ಖಾಜಾ ಹುಸೇನ್, ಉಪಾಧ್ಯಕ್ಷೆ ನೀಲಾಂಬಿಕ ಬಸವರಾಜ್, ಸದಸ್ಯರಾದ ನಿಂಗಪ್ಪ, ಹುಸೇನ್ ಸಾಹೇಬ್, ಬರ್ಕತ್‌, ಪರ‍್ವೀನ್‌ಬಾನು, ಲಕ್ಷ್ಮಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಂದ್ಯಮ್ಮ, ಪಿ.ಹಾಲೇಶ್, ಅದಾಮ್ ಸಾಹೇಬ್,ದಸ್ತಗಿರಿ ಸಾಹೇಬ್, ಹನುಮಂತಪ್ಪ, ಶ್ರುತಿ, ಶಫಿವುಲ್ಲಾ, ಅರೋಗ್ಯ ಇಲಾಖೆಯ ಬಸಮ್ಮ, ಸಂತೋಷ್, ಮುಖ್ಯ ಶಿಕ್ಷಕ ಮಾಲತೇಶ್ ಪಾಟೀಲ್, ಸಹ ಶಿಕ್ಷಕರಾದ ಅಡ್ಡಿ ಕೆಂಪಣ್ಣ, ಬಂದಮ್ಮ, ಪರಶುರಾಮ್, ರಾಜಶೇಖರ್, ಅಜ್ಜಯ್ಯ, ರೇಣುಕಾ, ತಹಸೀನಾ ಬೇಗಂ, ಪರ‍್ಣಿಮಾ, ಸುನಂದ, ಪವನಕುಮಾರಿ, ರೇಖಾದೇವಿ, ಗಿರಿಜಾ ಹಾಗೂ ಪೋಷಕರು, ಮಕ್ಕಳು ಭಾಗವಹಿಸಿದ್ದರು.