ಪಠ್ಯದಲ್ಲಿ ಸಹಕಾರಿ ವಿಷಯದ ಪಾಠ ಸೇರ್ಪಡೆಗೊಳಿಸಿ: ಜಿ.ಟಿ. ಹೆಗಡೆ ತಟ್ಟೀಸರ

| Published : Nov 16 2025, 02:45 AM IST

ಪಠ್ಯದಲ್ಲಿ ಸಹಕಾರಿ ವಿಷಯದ ಪಾಠ ಸೇರ್ಪಡೆಗೊಳಿಸಿ: ಜಿ.ಟಿ. ಹೆಗಡೆ ತಟ್ಟೀಸರ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲಾ ಪಠ್ಯ-ಪುಸ್ತಕಗಳಲ್ಲಿ ಸಹಕಾರಿ ವಿಷಯದ ಪಾಠವನ್ನು ಸೇರ್ಪಡೆಗೊಳಿಸಬೇಕು.

72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿದ ಟಿಎಂಎಸ್‌ ಅಧ್ಯಕ್ಷಕನ್ನಡಪ್ರಭ ವಾರ್ತೆ ಶಿರಸಿ

ಶಾಲಾ ಪಠ್ಯ-ಪುಸ್ತಕಗಳಲ್ಲಿ ಸಹಕಾರಿ ವಿಷಯದ ಪಾಠವನ್ನು ಸೇರ್ಪಡೆಗೊಳಿಸಬೇಕು. ಯುವಕರಿಂದ ಸಹಕಾರಿ ಕ್ಷೇತ್ರದಲ್ಲಿ ಹೊಸ ಆಯಾಮ ನಿರ್ಮಿಸಲು ಸಾಧ್ಯ ಎಂದು ಟಿಎಂಎಸ್‌ ಅಧ್ಯಕ್ಷ ಹಾಗೂ ಹಿರಿಯ ಸಹಕಾರಿ ಜಿ.ಟಿ ಹೆಗಡೆ ತಟ್ಟೀಸರ ಹೇಳಿದರು.

ನಗರದ ಎಪಿಎಂಸಿ ಆವಾರದಲ್ಲಿರುವ ಟಿಆರ್‌ಸಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಉತ್ತರ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ಕುಮಟಾ, ಕೆಡಿಸಿಸಿ ಬ್ಯಾಂಕ್, ಸಹಕಾರ ಇಲಾಖೆ, ತೋಟಗಾರ್ಸ್ ರೂರಲ್ ಕೋ ಆಫ್ ಅಗ್ರಿಕಲ್ಚರಲ್ ಮಲ್ಟಿಪರ್ಸಸ್ ಸೊಸೈಟಿ ಶಿರಸಿ ಹಾಗೂ ಶಿರಸಿ ತಾಲೂಕಿನ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಹಕಾರಿ ಸಂಘಗಳ ಕಾಯ್ದೆ, ವ್ಯವಹಾರಗಳ ತಿಳುವಳಿಕೆ ಎಷ್ಟಿದೆ ಎಂಬುದು ಗಮನಾರ್ಹ. ಮಕ್ಕಳಿಗೆ ಸಹಕಾರಿ ವ್ಯವಸ್ಥೆಯ ಕುರಿತು ತಿಳುವಳಿಕೆ ನೀಡುವ ಅವಶ್ಯಕತೆ ಇದೆ. ರಾಜ್ಯದಲ್ಲಿ ರಾಷ್ಟ್ರದಲ್ಲಿ ಸಹಕಾರಿ ಆಂದೋಲನ ಎಷ್ಟರ ಮಟ್ಟಿಗೆ ಬೆಳೆದಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿದಿಲ್ಲ. ಪಠ್ಯಪುಸ್ತಕಗಳಲ್ಲಿ ಸಹಕಾರಿ ವ್ಯವಸ್ಥೆಯ ಕುರಿತು ಪಾಠಗಳು ಬರುವವರೆಗೂ ಜನರಿಗೆ ಸಹಕಾರಿ ತತ್ವಗಳನ್ನು ತಿಳಿಸಲು ಸಾಧ್ಯವಿಲ್ಲ. ವಿದ್ಯಾರ್ಥಿ ಘಟ್ಟದಿಂದಲೇ ಸಹಕಾರಿ ತತ್ವಗಳ ಮನವರಿಕೆ ಆಗಬೇಕು. ಮುಂದೆ ವಿದ್ಯಾರ್ಥಿಗಳಿಗೆ ಈ ವಿಷಯ ಬಹಳ ಅನುಕೂಲವಾಗಲಿದೆ ಎಂದರು.

ಸಹಕಾರಿ ಕಾಯ್ದೆಗಳಲ್ಲಿ ನಿರಂತರವಾಗಿ ಹಸ್ತಕ್ಷೇಪ ನಡೆಯುತ್ತಿದೆ. ನ್ಯಾಯಾಲಯಗಳಿಗೆ ಹೋಗುವ ಸಂಖ್ಯೆ ಕಡಿಮೆಯಾಗಬೇಕು. ಭಕ್ತಿ-ಭಾವ ಇರುವವರು ದೇವಸ್ಥಾನಗಳನ್ನು ಸ್ಥಾಪನೆ ಮಾಡುತ್ತಾರೆ‌. ರೈತ ಸಮುದಾಯ ಸಹಕಾರಿ ಸಂಘಗಳನ್ನು ಸ್ಥಾಪನೆ ಮಾಡಿಕೊಂಡಿದೆ. ಸಹಕಾರಿ ಸಂಘಗಳ ಬಲವರ್ಧನೆಗೆ ಹೆಚ್ಚಿನ ಗಮನ ನೀಡಬೇಕು ಎಂದರು.

ಧಾರವಾಡ ಹಾಲು ಒಕ್ಕೂಟದ ಪ್ರಭಾರಿ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೇಶಿನ್ಮನೆ ಮಾತನಾಡಿ, ಸಹಕಾರಿ ವ್ಯವಸ್ಥೆ ಯಲ್ಲಿ ಲಾಭಕ್ಕಾಗಿ ಸಂಸ್ಥೆಗಳಿಲ್ಲ. ತಮ್ಮ ಸೇವೆಯನ್ನು ಸಮಾಜಕ್ಕೆ ನೀಡುತ್ತಿವೆ. ಉತ್ತರ ಕನ್ನಡ ಜಿಲ್ಲೆಯ ಸಹಕಾರಿಗಳ ಬಗ್ಗೆ ರಾಜ್ಯದಲ್ಲಿ ಉತ್ತಮ ಹೆಸರಿದೆ. ರೈತರ ಆಶಾಕಿರಣವೇ ಸಹಕಾರಿ ಸಂಘಗಳು. ಶೇರು ಸದಸ್ಯರು ಜವಾಬ್ದಾರಿಯಿಂದ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಿದಾಗ ಮಾತ್ರ ಸಹಕಾರಿ ಸಂಘ ಉಳಿಯುತ್ತದೆ ಎಂದರು.

ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಹಿಂದಿನವರ ಹೆಸರನ್ನು ಹೇಳಿಕೊಂಡೇ ನಾವು ಮುಂದೆ ಹೋಗುತ್ತಿದ್ದೇವೆ‌. ‌ನಾವೇನು ಮಾಡಬೇಕು ಎಂಬುದರಲ್ಲಿ ನಾವು ಹಿಂದಿದ್ದೇವೆ. ಸಹಕಾರಿ ಕ್ಷೇತ್ರ ಯಾರ ಕಪಿಮುಷ್ಠಿಯಲ್ಲಿ ಸಿಲುಕಿ ಒದ್ದಾಡುತ್ತಿದೆ ಎಂದು ತಿಳಿಯುತ್ತಿಲ್ಲ. ಸಹಕಾರಿ ಕ್ಷೇತ್ರದ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕಿದೆ. ಸಹಕಾರ ಕ್ಷೇತ್ರ ಬಡವಾಗದಂತೆ ನಾವು ನೋಡಿಕೊಳ್ಳಬೇಕು. ಅಂತಹ ಬಹುದೊಡ್ಡ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಸಹಕಾರ ಸಂಘಗಳ ಸಹಾಯಕ ನಿಬಂಧಕ ಅಜಿತ ಶಿರಹಟ್ಟಿ ಉಪನ್ಯಾಸ ನೀಡಿ ಮಾತನಾಡಿ, 47 ಸಾವಿರ ಸಹಕಾರಿ ಸಂಘಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಲಕ್ಷಾಂತರ ಜನರು ಸಹಕಾರಿ ಸಂಘಗಳ ಮೂಲಕ ವ್ಯವಹಾರ ಮಾಡುತ್ತಿದ್ದಾರೆ. ಸಹಕಾರಿ ವ್ಯವಸ್ಥೆಯ ಬಗ್ಗೆ ಜನರಲ್ಲಿ ಅರಿವು ಬಂದಿಲ್ಲ. ಅತಿಯಾದ ರಾಜಕೀಯ ಹಸ್ತಕ್ಷೇಪ ಸಹಕಾರಿ ಕ್ಷೇತ್ರದಲ್ಲಿ ನಡೆಯುತ್ತಿದೆ. ರಾಜಕೀಯ ಹಿತದೃಷ್ಟಿ ಅಥವಾ ಸ್ವ ಹಿತದೃಷ್ಟಿಯಿಂದ ಸಹಕಾರ ಕ್ಷೇತ್ರಕ್ಕೆ ಬರುವವರೇ ಹೆಚ್ಚಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಡೆವಲಪ್ಮೆಂಟ್ ಸೊಸೈಟಿ ಅಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ, ಟಿಆರ್‌ಸಿ ಸೊಸೈಟಿ ಉಪಾಧ್ಯಕ್ಷ ವಿಶ್ವಾಸ ಬಲ್ಸೆ, ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳಿ ನಿರ್ದೇಶಕ ಶ್ರೀಪಾದ ಹೆಗಡೆ ಕಡವೆ ಮಾತನಾಡಿದರು.

ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಗೈದ ಯೂನಿಯನ್ ಉಪಾಧ್ಯಕ್ಷ ಶ್ರೀಪಾದ ರಾಯ್ಸದ್ ಅಧ್ಯಕ್ಷತೆ ವಹಿಸಿದ್ದರು.

ಕದಂಬ ಮಾರ್ಕೆಟಿಂಗ್ ಸಹಕಾರ ಸಂಘದ ಅಧ್ಯಕ್ಷ ಶಂಭುಲಿಂಗ ಹೆಗಡೆ ಇದ್ದರು. ಯೂನಿಯನ್ ನಿರ್ದೇಶಕ ಮಹೇಂದ್ರ ಭಟ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಟಿಆರ್‌ಸಿ ಸೊಸೈಟಿ ಸಿಬ್ಬಂದಿ ಜಿ.ಜಿ. ಹೆಗಡೆ ನಿರ್ವಹಿಸಿದರು.

ಬಸವೇಶ್ವರ ಸಂಘಕ್ಕೆ ಉತ್ತಮ ಸಹಕಾರಿ ಪ್ರಶಸ್ತಿ

ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಉತ್ತಮ ಸಹಕಾರಿ ಸಂಘ ಪ್ರಶಸ್ತಿಯನ್ನು ಬಸವೇಶ್ವರ ಸಹಕಾರಿ ಸೇವಾ ಸಂಘಕ್ಕೆ ನೀಡಿ ಗೌರವಿಸಲಾಯಿತು. ಉತ್ತಮ ಸಹಕಾರಿ ಪ್ರಶಸ್ತಿಯನ್ನು ಅರ್ಬನ್ ಬ್ಯಾಂಕ್ ಅಧ್ಯಕ್ಷ ಜಯದೇವ ನಿಲೇಕಣಿ ಅವರಿಗೆ, ಉತ್ತಮ ಸಹಕಾರಿ ನೌಕರ ಪ್ರಶಸ್ತಿಯನ್ನು ಎಸ್.ಎನ್. ಹೆಗಡೆ ದೊಡ್ನಳ್ಳಿ ಅವರಿಗೆ, ಎನ್.ಪಿ. ಗಾಂವ್ಕರ್ ದತ್ತಿನಿಧಿ ಪ್ರಶಸ್ತಿಯನ್ನು ಹುಳಗೋಳ ಸೇವಾ ಸಹಕಾರಿ ಸಂಘ ಭೈರುಂಬೆಯ ಮುಖ್ಯ ಕಾರ್ಯನಿರ್ವಾಹಕ ಜಿ.ಎಂ. ಹೆಗಡೆ ಮಾತ್ನಳ್ಳಿ ಅವರಿಗೆ ನೀಡಿ ಗೌರವಿಸಲಾಯಿತು.