ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ತಾಲೂಕಿನ ಕ್ಯಾತನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಊಟ ತಯಾರಕ ಸಿಬ್ಬಂದಿ ಹಾಗೂ ಶಿಕ್ಷಕರ ನಡುವಿನ ಜಗಳದಿಂದ ಬಿಸಿಯೂಟವೇ ಸ್ಥಗಿತವಾಗಿದ್ದ ಸಮಸ್ಯೆಯನ್ನು ತಹಸೀಲ್ದಾರ್ ವೈ. ಎಂ. ರೇಣುಕುಮಾರ್ ಬಗೆಹರಿಸಿದ ಹಿನ್ನೆಲೆಯಲ್ಲಿ ಮೂರು ದಿನಗಳಿಂದ ಶಾಲೆಗೆ ಬಾರದ ವಿದ್ಯಾರ್ಥಿಗಳು ಶನಿವಾರ ಶಾಲೆಗೆ ಖುಷಿಯಿಂದ ಆಗಮಿಸಿ, ಸಂಭ್ರಮಿಸಿದರು.

ತಾಲೂಕಿನ ಹಳ್ಳಿಮೈಸೂರು ಹೋಬಳಿ ಕ್ಯಾತನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಹಾಗೂ ಬಿಸಿಊಟ ತಯಾರಕರ ನಡುವೆ ಸಮನ್ವಯ ಕೊರತೆಯಿಂದ ಶುಚಿತ್ವ ಕಾಪಾಡಲು ಹೇಳಿದಕ್ಕೆ ಶಿಕ್ಷಕಿ ಲತಾ ಅವರ ಮೇಲೆ ಅಡುಗೆ ಸಿಬ್ಬಂದಿ ಈರಮ್ಮ ಹಲ್ಲೆ ಮಾಡಿದ್ದರು ಹಾಗೂ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ ಜತೆಗೆ ಘಟನೆ ಕುರಿತು ಮುಖ್ಯಶಿಕ್ಷಕರು ಬಿಇಒ ಅವರ ಗಮನಕ್ಕೆ ತಂದಿದ್ದರು. ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರಿಗೆ ಗೌರವ ನೀಡದೇ, ಹೊಡೆಯುವ ಅಡಿಗೆಯವರು ನಮ್ಮ ಮಕ್ಕಳಿಗೆ ನೀಡುವ ಅಡಿಗೆಯಲ್ಲಿ ಗುಣಮಟ್ಟವಿರಲು ಹೇಗೆ ಸಾಧ್ಯ, ನಿಮಗೇ ಭದ್ರತೆಯಿಲ್ಲದ ಶಾಲೆಯಲ್ಲಿ ಮಕ್ಕಳಿಗೆ ರಕ್ಷಣೆ ಹೇಗೆ ಸಾಧ್ಯ, ಶಾಲೆಗೆ ಮಕ್ಕಳನ್ನು ಕಳಿಸಲ್ಲವೆಂದು ಜುಲೈ ೮ರ ಬುಧವಾರದಿಂದ ಪೋಷಕರು ಶಾಲೆಗೆ ವಿದ್ಯಾರ್ಥಿಗಳನ್ನು ಕಳುಹಿಸಿರಲಿಲ್ಲ.

ಶುಕ್ರವಾರದಂದು ತಹಸೀಲ್ದಾರ್‌ ವೈ.ಎಂ. ರೇಣುಕುಮಾರ್ ಅವರು ಶಾಲೆಗೆ ತೆರಳಿ ವಿಚಾರಣೆ ನಡೆಸಿದರು. ಪೋಷಕರು ಅಡುಗೆ ಸಿಬ್ಬಂದಿಯ ವಿರುದ್ಧ ಅನೇಕ ದೂರುಗಳನ್ನು ಹೇಳಿದ್ದು, ಇವರುಗಳನ್ನೇ ಮುಂದುವರಿಸಿದರೆ ನಾವು ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲವೆಂದು ತಿಳಿಸಿದ್ದಾರೆ. ವಾಸ್ತವಾಂಶವನ್ನು ಅವಲೋಕಿಸಿದ ತಹಸೀಲ್ದಾರ್‌ ಅವರು, ಅಡುಗೆ ಸಿಬ್ಬಂದಿಗೆ ನಿಯಮದಂತೆ ನೋಟಿಸ್ ನೀಡಿ ಶಾಲೆಯಿಂದ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೂ ಪಕ್ಕದ ಶಾಲೆಯ ಅಡುಗೆ ಸಿಬ್ಬಂದಿಯಿಂದ ಅಡುಗೆ ಮಾಡಿಸಿ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದ್ದಾರೆ. ಇದರಿಂದ ಪೋಷಕರಲ್ಲಿ ಇದ್ದ ಆತಂಕ ದೂರವಾದ ಹಿನ್ನೆಲೆಯಲ್ಲಿ ನಿಶ್ಚಿಂತೆಯಿಂದ ಶನಿವಾರ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಗಿಸಿದ್ದಾರೆ.

ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ, ಅಕ್ಷರ ದಾಸೋಹ ಅಧಿಕಾರಿ ರಾಮಚಂದ್ರು, ಸಿಆರ್‌ಪಿ ನಟೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬೋರೇಗೌಡ, ಉಪಾಧ್ಯಕ್ಷ ಪರಮೇಶ್, ಸದಸ್ಯರಾದ ಶಿಲ್ಪಾ, ಕವಿತಾ, ಮುಖ್ಯ ಶಿಕ್ಷಕ ಎಲ್.ಕೆ. ಕುಮಾರ್, ಶಿಕ್ಷಕಿಯರಾದ ಎಚ್.ವಿ.ಲತಾ, ಮುಬಿನ್‌ತಾಜ್ ಹಾಗೂ ಪೋಷಕರು ಸಭೆಯಲ್ಲಿ ಇದ್ದರು.