ವಿವಿಧ ಕಲಾ ತಂಡಗಳು, ವೀರಗಾಸೆ ನೃತ್ಯ, ಡೊಳ್ಳುಕುಣಿತ, ಕೀಲುಕುದುರೆ, ತಮಟೆ, ಮಂಗಳವಾದ್ಯ ಸೇರಿದಂತೆ ವಿವಿಧ ಆಕರ್ಷಣೀಯ ಕಲಾಪ್ರಕಾರ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ ಪಟ್ಟಣದ ಆಂಜನೇಯ ಬಡಾವಣೆಯ ಮಾರುತಿ ಯುವಕರ ಸಂಘ ಮತ್ತು ಗೀತಾ ಮಹಿಳಾ ಸ್ವ-ಸಹಾಯ ಸಂಘದ ವತಿಯಿಂದ ಬುಧವಾರ ಹನುಮ ಜಯಂತಿಯ ಶೋಭಾಯಾತ್ರೆಯನ್ನು ಅತ್ಯಂತ ವೈಭವದಿಂದ ಆಚರಿಸಿತು. ದೇವಾಲಯದ ಆವರಣದಲ್ಲಿ ಬೆಳಗ್ಗೆ ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜ ಸ್ವಾಮೀಜಿ, ಶಾಸಕ ಡಿ. ರವಿಶಂಕರ್ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು. ನೆರೆದಿದ್ದ ಸಾವಿರಾರು ಹನುಮ ಭಕ್ತರು ದೇವರಿಗೆ ಜಯಕಾರದ ಘೋಷಣೆಗಳನ್ನು ಮೊಳಗಿಸಿ ಪುಷ್ಪಾರ್ಚನೆ ಮಾಡಿದ ನಂತರ ದೇವಾಲಯದ ಆವರಣದಿಂದ ಹೊರಟ ಯಾತ್ರೆ ಬಜಾರ್ರಸ್ತೆ, ಗರುಡಗಂಭ ವೃತ್ತ, ವಾಣಿವಿಲಾಸ ರಸ್ತೆ, ಪುರಸಭೆ ವೃತ್ತ, ಸಿಎಂ ರಸ್ತೆ, ಅರ್ಕನಾಥ ರಸ್ತೆಯ ಮೂಲಕ ಸಾಗಿ ಮೂಲ ಸ್ಥಾನ ತಲುಪಿತು. ವಿವಿಧ ಕಲಾ ತಂಡಗಳು, ವೀರಗಾಸೆ ನೃತ್ಯ, ಡೊಳ್ಳುಕುಣಿತ, ಕೀಲುಕುದುರೆ, ತಮಟೆ, ಮಂಗಳವಾದ್ಯ ಸೇರಿದಂತೆ ವಿವಿಧ ಆಕರ್ಷಣೀಯ ಕಲಾಪ್ರಕಾರಗಳು ಜನರ ಗಮನ ಸೆಳೆದವಲ್ಲದೆ ಯುವಕ ಯುವತಿಯರು ಮತ್ತು ಹನುಮ ಭಕ್ತರು ಕೇಸರಿ ಧ್ವಜ ಕೈಯಲ್ಲಿ ಹಿಡಿದು ಆಂಜನೇಯನ ಜಪ ಮಾಡುತ್ತಾ ದಾರಿಯುದ್ದಕ್ಕು ಹರ್ಷೋದ್ಗಾರದಿಂದ ಮುನ್ನಡೆದವರು. ಕುಣಿದು ಕುಪ್ಪಳಿಸಿದ ಭಕ್ತರು- ಹನುಮನ ಗೀತೆಗೆ ನೆರೆದಿದ್ದವರು ಕುಣಿದು ಕುಪ್ಪಳಿಸಿ ಭಕ್ತಿ ರಸದಲ್ಲಿ ಮಿಂದೆದ್ದರು ಪಟ್ಟಣದ ಸೇರಿದಂತೆ ಕೆ.ಆರ್. ನಗರ ಮತ್ತು ಸಾಲಿಗ್ರಾಮ ತಾಲೂಕುಗಳಿಂದ ಸಾವಿರಾರು ಮಂದಿ ಭಕ್ತರು ಆಗಮಿಸಿ ದೇವರಿಗೆ ನಮಿಸಿ ಹನುಮ ಜಯಂತಿಯ ದೃಶ್ಯ ವೈಭವವನ್ನು ಕಣ್ತುಂಬಿಕೊಂಡರು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಪಾನಕ, ಪ್ರಸಾದ ಸಿಹಿ ಮತ್ತು ಮಜ್ಜಿಗೆಯನ್ನು ವಿವಿಧ ಸಂಘಟನೆಗಳ ಪ್ರಮುಖರು, ವರ್ತಕರು, ಮತ್ತು ಭಕ್ತರು ವಿತರಣೆ ಮಾಡಿ ತಮ್ಮ ಭಕ್ತಿ ಮೆರೆದರು. ದಾರಿಯುದ್ದಕ್ಕು ಕಿಕ್ಕಿರಿದು ನಿಂತಿದ್ದ ಭಕ್ತ ಸಮೂಹ ಭಗವಂತನ ಸ್ಮರಣೆ ಮಾಡಿತು. ಸಾ.ರಾ.ಮಹೇಶ್ ಭೇಟಿ ಹನುಮ ಜಯಂತಿ ಹಿನ್ನೆಲೆ ಮಾಜಿ ಸಚಿವ ಸಾ.ರಾ. ಮಹೇಶ್ ಮಂಗಳವಾರ ರಾತ್ರಿ ದೇವಾಲಯಕ್ಕೆ ಭೇಟಿ ನೀಡಿ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ಶುಭ ಹಾರೈಸಿದರು. ಭಾರಿ ಬಂದೋಬಸ್ತ್ - ಪಟ್ಟಣದಲ್ಲಿ ನಡೆದ ಹನುಮ ಜಯಂತಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ನೇತೃತ್ವದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ. ಮಲ್ಲಿಕ್, ಡಿವೈಎಸ್ಪಿ ಟಿ.ಬಿ. ರಾಜಣ್ಣ, ಪೊಲೀಸ್ ಇನ್ಸ್ಪೆಕ್ಟರ್ ಎಸ್. ಶಿವಪ್ರಕಾಶ್ ಭಾರಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು. ಮಧ್ಯ ಮಾರಾಟ ಬಂದ್ - ಹನುಮ ಜಯಂತಿ ಹಿನ್ನೆಲೆ ಪಟ್ಟಣಾದ್ಯಂತ ಬುಧವಾರ ಮದ್ಯ ಮಾರಾಟ ಬಂದ್ ಮಾಡಲಾಗಿತ್ತು. ಮಾರುತಿ ಯುವಕರ ಸಂಘದ ಅಧ್ಯಕ್ಷ ಗೌತಮ್ ಜಾಧವ್, ಪದಾಧಿಕಾರಿಗಳಾದ ಕೆಂಚಿ ಮಂಜು, ದರ್ಶನ್, ಎಸ್. ಯೋಗಾನಂದ್, ಲೋಕೇಶ್, ಪುನೀತ್, ಕಿರಣ್, ಮನೋಜ್, ವಿನಯ್, ಸುಮಂತ್, ಶ್ರೀನಿವಾಸ್, ರಾಜೇಶ್, ಭಾಸ್ಕರ್, ಕಿಶೋರ್, ಮಂದೀಪ್, ಪ್ರವೀಣ್, ಮೋಹನ್, ದೀಪು, ಸಂಜು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಮಹೇಶ್, ಪುರಸಭೆ ಮಾಜಿ ಅಧ್ಯಕ್ಷ ಡಿ. ಶಿವುನಾಯಕ್, ಮಾಜಿ ಸದಸ್ಯರಾದ ಪ್ರಕಾಶ್, ಉಮೇಶ್, ಕೆ.ಎಲ್. ಜಗದೀಶ್, ಸಂತೋಷ್ ಗೌಡ, ಶಂಕರ್, ಕೆ. ವಿನಯ್, ಜಿಲ್ಲಾ ಕಾಂಗ್ರೆಸ್ ಮುಖಂಡ ಜಿ.ಎಸ್. ವೆಂಕಟೇಶ್ ಅರ್ಚಕ ಶ್ರೀನಿವಾಸಭಟ್ ಇದ್ದರು.