ದುರಸ್ತಿಯಲ್ಲಿರುವ ಮಿನಿ ಬಾರ್ಜ್ ನಿರ್ವಹಣೆಗೆ ಟೆಂಡರ್

| Published : Jul 12 2024, 01:35 AM IST / Updated: Jul 12 2024, 01:36 AM IST

ಸಾರಾಂಶ

ಮುರಿದು ಬೀಳುವ ಅಪಾಯದಲ್ಲಿರುವ ಬಾರ್ಜನ್ನು ಪುನಃ ನಡೆಸಲು ನೀಡಲು ಮುಂದಾಗಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಹರಾಜು ಪ್ರಕಟಣೆಯಲ್ಲಿ ಬೋಟ್‍ನ್ನು ದುರಸ್ತಿಗೊಳಿಸಿ ಬಳಕೆಗೆ ಸೂಚಿಸಿದೆ.

ಗೋಕರ್ಣ: ಇಲ್ಲಿನ ತದಡಿ ಮತ್ತು ಅಘನಾಶಿನಿ ಸಂಪರ್ಕ ಕಲ್ಪಿಸಲು ಹಾಕಿರುವ ಕಡವು(ಮಿನಿ ಬಾರ್ಜ್‌) ನಿರ್ವಹಣೆಗೆ ಬಂದರು ಇಲಾಖೆ ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕರ್ನಾಟಕ ಜಲಸಾರಿಗೆ ಮಂಡಳಿ ನಿರ್ವಹಣೆಗೆ ಹರಾಜು ಕರೆದಿದೆ.

ಮುರಿದು ಬೀಳುವ ಅಪಾಯದಲ್ಲಿರುವ ಬಾರ್ಜನ್ನು ಪುನಃ ನಡೆಸಲು ನೀಡಲು ಮುಂದಾಗಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಹರಾಜು ಪ್ರಕಟಣೆಯಲ್ಲಿ ಬೋಟ್‍ನ್ನು ದುರಸ್ತಿಗೊಳಿಸಿ ಬಳಕೆಗೆ ಸೂಚಿಸಿದೆ. ಆದರೆ ದುರಸ್ತಿಗೆ ಬಾರದಂತೆ ಕೆಟ್ಟಿರುವ ಬೋಟ್‍ನ್ನು ಮತ್ತೆ ಬಳಕೆಗೆ ನೀಡುವುದು ಎಷ್ಟು ಸರಿ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಜೀವಾಪಾಯದಲ್ಲಿ ಪ್ರಯಾಣ: ಅಘನಾಶಿನಿ ನದಿ ಸಮುದ್ರ ಸೇರುವ ಭಾಗದಲ್ಲಿ ಸಂಚರಿಸುವ ಬೋಟ್‍ನಲ್ಲಿ ನಿತ್ಯ ನೂರಾರು ಜನರು ಕುಮಟಾ ಮತ್ತಿತರ ಕಡೆ ತೆರಳಲು ಪ್ರಯಾಣಿಸುತ್ತಾರೆ. ಇದರ ಜತೆಗೆ ಬೈಕ್‍ಗಳನ್ನು ತುಂಬಲಾಗುತ್ತೆ. ಸ್ವಲ್ಪ ಹೆಚ್ಚುಕಮ್ಮಿಯಾದರೂ ಜನರ ಪ್ರಾಣಕ್ಕೆ ಕುತ್ತು ತರುವ ಆತಂಕವಿದ್ದು, ಇಂತಹ ದುಃಸ್ಥಿತಿಯಲ್ಲಿರುವ ಬೋಟ್‍ನ್ನು ಮತ್ತೆ ತೇಪೆ ಹಚ್ಚಿ ನಡೆಸಲು ಮುಂದಾಗಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಸುಸ್ಥಿತಿಯಲ್ಲಿರದ ಕುರಿತು ಹರಾಜಿನಲ್ಲಿ ಇಲಾಖೆಯೇ ಸ್ಪಷ್ಟಪಡಿಸಿದ್ದು, ಇಂತಹ ಸ್ಥಿತಿಯಲ್ಲಿ ಜಲಸಾರಿಗೆ ನಡೆಯುತ್ತಿದೆ. ಈ ಬಗ್ಗೆ ಉಸ್ತುವಾರಿ ಸಚಿವರು ಗಮನಹರಿಸಿ ಪ್ರವಾಸಿ ತಾಣವನ್ನು ಸಂಪರ್ಕಿಸುವ ಈ ಮಾರ್ಗಕ್ಕೆ ಹೊಸ ಬೋಟ್ ನೀಡಿ ಟೆಂಡರ್ ಕರೆಯುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬೋಟ್ ತೂತು?: ಬಾಕ್ಸ್‌ ಮಾದರಿಯಲ್ಲಿರುವ ಈ ಬಾರ್ಜ್‌ನಲ್ಲಿ ತೂತು ಬಿದ್ದಿದ್ದು, ನೀರು ತುಂಬುತ್ತಿದೆ. ಚಾಲಕನ ಸೀಟಿನ ಹಿಂಭಾಗದಲ್ಲಿರುವ ಫ್ಯಾನ್‌ಗೆ ನೀರು ತಾಗಬಾರದು ಎಂದು ಒಂದು ಕಡೆ ಕಲ್ಲು ತುಂಬಿ ಸಮತೋಲನ ಮಾಡಲಾಗಿದ್ದು, ಅಲೆಗಳ ಅಬ್ಬರದಲ್ಲಿ ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.

₹10 ಲಕ್ಷ ಠೇವಣಿ: ಟೆಂಡರದಾರರಿಗೆ ₹10 ಲಕ್ಷ ಠೇವಣಿಯನನ್ನು ನಿಗದಿ ಮಾಡಲಾಗಿದೆ. ಆದರೆ ಹಾಳಾದ ಇದರ ಮೌಲ್ಯ ಮೂರು ಲಕ್ಷ ಆಗಲು ಸಾಧ್ಯವಿಲ್ಲ ಎನ್ನಲಾಗಿದೆ. ಆದರೆ ಹಳೆಯ ಬಾರ್ಜನ್ನೆ ಮತ್ತೆ ನೀಡುತ್ತಿರುವುದು ದುರಂತವಾಗಿದೆ.