ನೀರಾವರಿ ಯೋಜನೆ ಅಭಿವೃದ್ಧಿಗೊಳಿಸುವಲ್ಲಿ ನಿರ್ಲಕ್ಷ್ಯ

| Published : Jul 12 2024, 01:35 AM IST

ಸಾರಾಂಶ

ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಡಿ. ಕೆ. ಸುರೇಶ್ ಮಾಗಡಿ ತಾಲೂಕಿಗೆ ನೀರು ತೆಗೆದುಕೊಂಡು ಹೋಗುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ಕುಣಿಗಲ್

ತುಮಕೂರು ಜಿಲ್ಲೆಗೆ 25.31ಟಿಎಂಸಿ ಹೇಮಾವತಿ ನೀರು ಮಂಜೂರಾತಿ ನೀರಿನಲ್ಲಿ ಕುಣಿಗಲ್‌ಗೆ 3.03 ಟಿಎಂಸಿ ನೀರು ಮಂಜೂರಾಗಿದ್ದು, ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಡಿ. ಕೆ. ಸುರೇಶ್ ಮಾಗಡಿ ತಾಲೂಕಿಗೆ ನೀರು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಬಿ.ಎನ್. ಜಗದೀಶ್ ಆರೋಪಿಸಿದರು.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಗಡಿ, ಕುಣಿಗಲ್ ತಾಲೂಕಿನ ಜನರ ನಡುವೆ ಗೊಂದಲ ಸೃಷ್ಟಿಸುವ ಕೆಲಸವನ್ನು ಶಾಸಕ ರಂಗನಾಥ್ ಮಾಡುತ್ತಿದ್ದಾರೆ. ತುಮಕೂರು ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆದ ನಡವಳಿಕೆ ಸೇರಿದಂತೆ ಹಲವಾರು ದಾಖಲೆಗಳು ಇದೆ. D26 ನಾಲೆ ಮೂಲಕ ನೀರು ಹರಿಸಿದರೆ ಯಡಿಯೂರು, ಅಮೃತೂರು ಹೋಬಳಿಗಳಿಗೆ ಅನುಕೂಲವಾಗುತ್ತದೆ. ಅದನ್ನು ಬಿಟ್ಟು 400 ಮೀಟರ್ ಮುಂದೆ ಕಾಲುವೆಯನ್ನು ತೆಗೆದುಕೊಂಡು ಹೋಗುತ್ತಿರುವುದು ಸರಿ ಇಲ್ಲ ಎಂದರು.

ಡಿ 26 ನಾಲೆಯನ್ನು ತಪ್ಪಿಸುವುದಕ್ಕೆ ನಾವು ಬಿಡುವುದಿಲ್ಲ, ಎಡಿಯೂರು ಹಾಗೂ ಅಮೃತೂರು ಹೋಬಳಿಯ ರೈತರ ಹಿತದೃಷ್ಟಿ ಬಹು ಮುಖ್ಯವಾಗಿದೆ. ನಮ್ಮದು ಲಿಂಕ್ ಕೆನಾಲ್‌ಗೆ ವಿರೋಧ ಇಲ್ಲ. ಡಿ 26 ಭಾಗದ ರೈತರಿಗೆ ಮೋಸ ಆಗಲು ನಾವು ಬಿಡುವುದಿಲ್ಲ. ಕುಣಿಗಲ್ ರೈತರು ರಂಗನಾಥ್ ಅವರನ್ನು ಶಾಸಕರನ್ನಾಗಿ ಮಾಡಿದ್ದಾರೆ. ಕುಣಿಗಲ್ ತಾಲೂಕಿನಲ್ಲಿ ಯಾವುದೇ ನೀರಾವರಿ ಯೋಜನೆಗಳನ್ನು ಅಭಿವೃದ್ಧಿಗೊಳಿಸಿಲ್ಲ ಎಂದರು.

ತಾಲೂಕಿನ ಮತದಾರರಿಂದ ಮತ ಪಡೆದು ಬೇರೆ ತಾಲೂಕಿಗೆ ಅನುಕೂಲ ಮಾಡುತ್ತಿರುವ ಶಾಸಕ ರಂಗನಾಥ್ ಡಿಕೆ ಶಿವಕುಮಾರ್ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ. ಸ್ಥಳೀಯ ಕಾಂಗ್ರೆಸ್ ಮುಖಂಡರು ತಮ್ಮ ಭಾಗದ ಅನ್ಯಾಯದ ಬಗ್ಗೆ ಮನವರಿಕೆ ಮಾಡಿಕೊಳ್ಳಬೇಕು. ಸರಿಯಾದ ವಿಚಾರ ತಿಳಿಯದೇ ಪ್ರತಿಭಟಿಸುವುದು ಸರಿಯಲ್ಲ ಎಂದರು.

ರಂಗಸ್ವಾಮಿ . ಕೆ ಎಲ್ ಹರೀಶ್, ಹೊಸಹಳ್ಳಿ ಜಯಣ್ಣ, ತರೀಕೆರೆ ಪ್ರಕಾಶ್, ನಿಡಸಾಲೆ ಯೋಗೇಶ್ , ಅವರಗೆರೆ ಧನಂಜಯ ಸೇರಿ ಇತರರು ಇದ್ದರು.