ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಮೈಸೂರಿನಲ್ಲಿ ಇಂದು ಪ್ರತಿಭಟನೆ

| Published : Jul 12 2024, 01:35 AM IST

ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಮೈಸೂರಿನಲ್ಲಿ ಇಂದು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಡಾ ಅಕ್ರಮ ಖಂಡಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯಿಂದ ಜು.೧೨ರಂದು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದ್ದು, ಜಿಲ್ಲೆಯ ಸಂಸದರು, ಮಾಜಿ ಶಾಸಕರು, ಜಿಲ್ಲಾ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಹೇಳಿದರು.

ಹಾವೇರಿ: ಮುಡಾ ಅಕ್ರಮ ಖಂಡಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯಿಂದ ಜು.೧೨ರಂದು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದ್ದು, ಜಿಲ್ಲೆಯ ಸಂಸದರು, ಮಾಜಿ ಶಾಸಕರು, ಜಿಲ್ಲಾ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಹೇಳಿದರು. ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನಗಳಿಂದ ಸರ್ಕಾರದ ಒಂದಿಲ್ಲೊಂದು ಭ್ರಷ್ಟಾಚಾರ ಬಯಲಿಗೆ ಬರುತ್ತಿವೆ. ವಾಲ್ಮೀಕಿ ನಿಗಮದ ರು.೧೮೭ ಕೋಟಿ ಹಣವನ್ನು ಅಕ್ರಮ ವರ್ಗಾವಣೆ ಮಾಡಿರುವುದನ್ನು ಖಂಡಿಸಿ ಬಿಜೆಪಿ ಹೋರಾಟ ಮಾಡಿದ್ದರಿಂದ ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ನೀಡುವಂತಾಗಿದ್ದು, ಹಗರಣದ ಕುರಿತು ತನಿಖೆ ನಡೆಯುತ್ತಿದೆ. ಈಗ ಮತ್ತೆ ಮುಡಾ ನಿವೇಶನ ಹಂಚಿಕೆ ಅಕ್ರಮ ಬಯಲಿಗೆ ಬಂದಿದ್ದು, ೨೦೦೪ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಳಿಯ ಮಲ್ಲಿಕಾರ್ಜುನ ಸ್ವಾಮಿ ಅವರಿಂದ ದಾನದ ರೂಪದಲ್ಲಿ ಸಿದ್ದರಾಮಯ್ಯನವರ ಪತ್ನಿಗೆ ನೀಡಿದ್ದಾರೆ. ಆದರೆ ಮುಡಾ ಸ್ವಾಧೀನದಲ್ಲಿದ್ದ ಜಮೀನು ಖರೀದಿ ಹೇಗೆ ಸಾಧ್ಯ ಎಂಬುದು ನಮ್ಮ ಪ್ರಶ್ನೆಯಾಗಿದೆ. ೨೦೦೯-೨೦೧೦ರಲ್ಲಿ ಬಕ್ಷಿಸ್ ಆದ ಜಮೀನು ಆರ್‌ಟಿಸಿಯಲ್ಲಿ ಮುಡಾ ಹೆಸರು ನಮೂದಾಗಿದೆ. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯನವರು ರಾಜ್ಯದ ಜನತೆಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದರು.೧೯೯೧ರ ಕಾನೂನು ಪ್ರಕಾರ ೧ ಎಕರೆಗೆ ಮೀರಿದ ಜಮೀನಿಗೆ ಒಂದೇ ನಿವೇಶನ ಕೊಡಬೇಕು ಆದರೆ ೩ ಎಕರೆ ೧೬ ಗುಂಟೆ ಜಮೀನಿಗೆ ೨ ನಿವೇಶನ ಬದಲು ೧೪ ನಿವೇಶನಗಳನ್ನು ನೀಡಿರುವುದು ಕಾನೂನು ಬಾಹಿರವಾಗಿದೆ. ಈ ಕೂಡಲೇ ಸಿಎಂ ಸಿದ್ದರಾಮಯ್ಯನವರು ಭ್ರಷ್ಟಚಾರದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಹಾಗೂ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿ ಜು.೧೨ರಂದು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಜಿಲ್ಲೆಯ ಬಿಜೆಪಿ ಸಂಸದರು, ಮಾಜಿ ಸಚಿವರು, ಶಾಸಕರು, ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಮುಂದಿನ ದಿನಗಳಲ್ಲಿ ಮುಡಾ ಅಕ್ರಮ ಖಂಡಿಸಿ ಜಿಲ್ಲೆಯಲ್ಲಿ ಸಹ ಸಂಸದ ಬಸವರಾಜ ಬೊಮ್ಮಯಿ ನೇತೃತ್ವದಲ್ಲಿ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದರು. ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಸುಳ್ಳನ್ನೇ ನೂರು ಬಾರಿ ಹೇಳಿ ಸತ್ಯವನ್ನಾಗಿಸಿದವರು. ಮುಡಾದಲ್ಲಿ ಅಕ್ರಮವಾಗಿ ಸೈಟ್ ಪಡೆದಿರುವುದಕ್ಕೆ ಸಿದ್ದರಾಮಯ್ಯನವರಿಗೆ ನಾಚಿಕೆಯಾಗಬೇಕು. ಎಸ್ಸಿ ಎಸ್ಟಿ ಹೆಸರಿನ ಜಮೀನನ್ನು ಹೆಂಡತಿ ಹೆಸರಿನಲ್ಲಿ ೫೦:೫೦ ಅನುಪಾತದಲ್ಲಿ ಪಡೆದುಕೊಂಡಿದ್ದಾರೆ. ಈಗ ರು. ೬೦ ಕೋಟಿ ಕೊಟ್ಟರೆ ನಿವೇಶನ ವಾಪಾಸ್ ನೀಡುತ್ತೇನೆ ಎಂದು ಹೇಳಿದ್ದು ಅವರಿಗೆ ಶೋಭೆ ತರುವಂತಹದ್ದಲ್ಲ ಎಂದರು. ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದು, ಅವರಿಗೆ ಮೀಸಲಿದ್ದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿದ್ದು, ಆ ಜನಾಂಗಕ್ಕೆ ನ್ಯಾಯ ಕೊಡಿಸುವ ಪ್ರಯತ್ನ ಮಾಡಲಿಲ್ಲ. ಸಿದ್ದರಾಮಯ್ಯನವರಿಗೆ ನೈತಿಕತೆ ಇದ್ದಲ್ಲಿ ೨೦೦೪ರಿಂದ ಇಲ್ಲಿಯವರೆಗೆ ನಡೆದ ಅಕ್ರಮಗಳ ವಿಚಾರಣೆ ನಡೆಸಲಿ, ಅಕ್ರಮ ಪ್ರಕರಣವನ್ನು ಸಿಬಿಐಗೆ ವಹಿಸಲಿ ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಡೆಂಘೀ ಮರಣ ಮೃದಂಗ ಬಾರಿಸುತ್ತಿದೆ. ಒಂದು ವೇಳೆ ಕಾಂಗ್ರೆಸ್ ಸರ್ಕಾರ ಕೋವಿಡ್ ನಿರ್ವಹಣೆ ಮಾಡಿದ್ದರೆ ನಿತ್ಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾವಿರಾರು ಜನರು ಸಾವನ್ನಪ್ಪುತ್ತಿದ್ದರು. ಈ ಸರ್ಕಾರಕ್ಕೆ ಸೊಳ್ಳೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಡೆಂಘೀ ನಿಯಂತ್ರಣಕ್ಕೆ ಗಮನ ಹರಿಸುತ್ತಿಲ್ಲ. ರೈತರಿಗೆ ಬೆಳೆ ಪರಿಹಾರ ಇಂದಿಗೂ ಕೊಡುತ್ತಿಲ್ಲ. ನೀತಿಗೆಟ್ಟ, ಭ್ರಷ್ಟಾಚಾರದ ಕಾಂಗ್ರೆಸ್ ಸರ್ಕಾರಕ್ಕೆ ಜನರು ತಕ್ಕಪಾಠ ಕಲಿಸಬೇಕು ಎಂದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಂಜುಂಡೇಶ ಕಳ್ಳೇರ, ಜಿಲ್ಲಾ ವಕ್ತಾರ ನಿರಂಜನ ಹೇರೂರ, ಜಿಲ್ಲಾ ಸಹ ವಕ್ತಾರ ನಾಗರಾಜ ಹುಳ್ಳುಕುಪ್ಪಿ, ದೀಪಕ ಹರಪನಹಳ್ಳಿ ಇದ್ದರು.