ಶಿವಾನಂದ ಪಿ.ಮಹಾಬಲಶೆಟ್ಟಿ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿರಾಜ್ಯ ಸರ್ಕಾರ ಕೈಗೊಂಡಿರುವ ತಾಲೂಕು ಪಂಚಾಯಿತಿ ಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆಯಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ತೇರದಾಳ ತಾಲೂಕಿಗೆ ಗಮನಾರ್ಹ ಪ್ರಾತಿನಿಧ್ಯತೆ ದೊರೆತಿದೆ. ಹೊಸ ತಾಲೂಕಿನ ಆಡಳಿತಾತ್ಮಕ ಅಗತ್ಯತೆ ಹಾಗೂ ಜನಸಂಖ್ಯೆಯ ಆಧಾರದ ಮೇಲೆ ತೇರದಾಳ ತಾಲೂಕಿನಲ್ಲಿ ಒಟ್ಟು 7 ತಾಪಂ ಕ್ಷೇತ್ರಗಳನ್ನು ರಚಿಸಲಾಗಿದ್ದು, ಈ ಬೆಳವಣಿಗೆ ಸ್ಥಳೀಯ ಆಡಳಿತ ವ್ಯವಸ್ಥೆಗೆ ಹೊಸ ಚೈತನ್ಯ ತುಂಬಿದೆ.
ಈ ಮರುವಿಂಗಡಣೆಯಿಂದ ರಬಕವಿ-ಬನಹಟ್ಟಿ ತಾಲೂಕಿನ ತಾಪಂ ಕ್ಷೇತ್ರಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ಈ ಹಿಂದೆ ಇದ್ದ 14 ಕ್ಷೇತ್ರಗಳ ಪೈಕಿ ಈಗ 9 ಕ್ಷೇತ್ರಗಳಿಗೆ ಸೀಮಿತವಾಗಿದೆ. ಇನ್ನೊಂದೆಡೆ, ತೇರದಾಳ ಮತ್ತು ರಬಕವಿ-ಬನಹಟ್ಟಿ ತಾಲೂಕುಗಳನ್ನು ಒಳಗೊಂಡಿರುವ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟಾರೆ ತಾಪಂ ಕ್ಷೇತ್ರಗಳ ಸಂಖ್ಯೆ 14ರಿಂದ 16ಕ್ಕೆ ಏರಿಕೆಯಾಗಿದೆ.ತೇರದಾಳ ತಾಲೂಕಿಗೆ 7 ಕ್ಷೇತ್ರಗಳ ಲಾಭ:
ತೇರದಾಳ ತಾಲೂಕು ರಚನೆಯಾಗುವ ಮೊದಲು ಇಲ್ಲಿ ಸಸಾಲಟ್ಟಿ, ಗೊಲಭಾಂವಿ, ಹನಗಂಡಿ ಹಾಗೂ ಹಳಿಂಗಳಿ ಎಂಬ ನಾಲ್ಕು ತಾಪಂ ಕ್ಷೇತ್ರಗಳಷ್ಟೇ ಇದ್ದವು. ಆದರೆ ಮರುವಿಂಗಡಣೆಯ ನಂತರ ತಾಲೂಕಿನ ಎಲ್ಲ ಗ್ರಾಪಂಗಳಿಗೆ ಪ್ರಾತಿನಿಧ್ಯ ಸಿಗುವಂತೆ ಕ್ಷೇತ್ರಗಳನ್ನು ಪುನರ್‌ರಚಿಸಲಾಗಿದ್ದು, ಯರಗಟ್ಟಿ, ಕಾಲತಿಪ್ಪಿ ಹಾಗೂ ತಮದಡ್ಡಿ ಹೊಸ ತಾಪಂ ಕ್ಷೇತ್ರಗಳಾಗಿ ಸೇರ್ಪಡೆಗೊಂಡಿವೆ. ಈಗ ಸಸಾಲಟ್ಟಿ, ಗೊಲಭಾಂವಿ, ಹನಗಂಡಿ, ಹಳಿಂಗಳಿ, ಯರಗಟ್ಟಿ, ಕಾಲತಿಪ್ಪಿ ಹಾಗೂ ತಮದಡ್ಡಿ ಸೇರಿ ಒಟ್ಟು ಏಳು ಕ್ಷೇತ್ರಗಳು ಅಸ್ತಿತ್ವಕ್ಕೆ ಬಂದಿವೆ.
ಸ್ಥಳೀಯ ಆಡಳಿತವನ್ನು ಮತ್ತಷ್ಟು ಜನಸ್ನೇಹಿ ಹಾಗೂ ಪರಿಣಾಮಕಾರಿಯಾಗಿ ರೂಪಿಸುವ ಉದ್ದೇಶದಿಂದ ಕೈಗೊಂಡಿರುವ ಈ ಕ್ರಮವನ್ನು ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಸ್ವಾಗತಿಸಿದ್ದಾರೆ.
ರಬಕವಿ-ಬನಹಟ್ಟಿಗೆ 9 ಕ್ಷೇತ್ರಗಳು:ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಹಿಪ್ಪರಗಿ ತಾಪಂ ಕ್ಷೇತ್ರವು ಜಮಖಂಡಿ ತಾಲೂಕಿಗೆ ಸೇರ್ಪಡೆಗೊಂಡಿರುವ ಹಿನ್ನೆಲೆಯಲ್ಲಿ ಕ್ಷೇತ್ರಗಳ ಸಂಖ್ಯೆ 9ಕ್ಕೆ ಇಳಿಕೆಯಾಗಿದೆ. ಹೊಸ ಮರುವಿಂಗಡಣೆಯ ಪ್ರಕಾರ ಯಲ್ಲಟ್ಟಿ(ಯಲ್ಲಟ್ಟಿ–ಬಂಡಿಗಣಿ), ಕುಲಹಳ್ಳಿ, ಆಸಂಗಿ(ಆಸಂಗಿ–ಮದನಮಟ್ಟಿ), ಜಗದಾಳ, ನಾವಲಗಿ, ಚಿಮ್ಮಡ, ಕೆಸರಗೊಪ್ಪ(ಕೆಸರಗೊಪ್ಪ–ಬಿಸನಾಳ–ಸಂಗಾನಟ್ಟಿ), ಸೈದಾಪೂರ(ಸೈದಾಪೂರ–ಮದಬಾವಿ–ಮಾರಾಪೂರ) ಹಾಗೂ ಢವಳೇಶ್ವರ(ಢವಳೇಶ್ವರ–ನಂದಗಾಂವ) ತಾಪಂ ಕ್ಷೇತ್ರಗಳಾಗಿ ಮುಂದುವರಿಯಲಿವೆ.
ಜಿಪಂ ಕ್ಷೇತ್ರಗಳಲ್ಲಿ ಬದಲಾವಣೆಯಿಲ್ಲ:ಜಿಪಂ ಕ್ಷೇತ್ರಗಳ ಮರುವಿಂಗಡಣೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಈ ಹಿಂದೆ ಇದ್ದ 4 ಜಿಪಂ ಕ್ಷೇತ್ರಗಳೇ ಮುಂದುವರಿಯಲಿದ್ದು, ರಬಕವಿ-ಬನಹಟ್ಟಿ ತಾಲೂಕಿಗೆ ಚಿಮ್ಮಡ, ಸೈದಾಪೂರ ಹಾಗೂ ಕುಲಹಳ್ಳಿ ಜಿಪಂ ಕ್ಷೇತ್ರಗಳು ಸೇರ್ಪಡೆಯಾಗಿವೆ. ಹೊಸದಾಗಿ ರಚನೆಯಾದ ತೇರದಾಳ ತಾಲೂಕಿಗೆ ಸಸಾಲಟ್ಟಿ ಜಿಪಂ ಕ್ಷೇತ್ರವನ್ನು ಹಂಚಿಕೆ ಮಾಡಲಾಗಿದೆ.
ಸ್ಥಳೀಯ ರಾಜಕೀಯದಲ್ಲಿ ಹೊಸ ಸಮೀಕರಣ:ತಾಪಂ ಕ್ಷೇತ್ರಗಳ ಈ ಮರುವಿಂಗಡಣೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ. ಹೊಸ ಕ್ಷೇತ್ರಗಳ ಸೇರ್ಪಡೆ ಹಾಗೂ ಗಡಿಗಳ ಮರುನಿರ್ಧಾರದಿಂದ ರಾಜಕೀಯ ಪಕ್ಷಗಳು ಮತ್ತು ಆಕಾಂಕ್ಷಿಗಳ ಚುನಾವಣಾ ತಂತ್ರಗಳಲ್ಲಿ ಬದಲಾವಣೆ ಅನಿವಾರ್ಯವಾಗಿದ್ದು, ಹೊಸ ನಾಯಕತ್ವಕ್ಕೂ ಅವಕಾಶಗಳು ಸೃಷ್ಟಿಯಾಗಲಿವೆ. ಗ್ರಾಮೀಣ ಅಭಿವೃದ್ಧಿ ಯೋಜನೆಗಳ ಅನುಷ್ಠಾನ, ಜನಪ್ರತಿನಿಧಿಗಳ ಹೊಣೆಗಾರಿಕೆ ಹಾಗೂ ಆಡಳಿತದ ವಿಕೇಂದ್ರೀಕರಣಕ್ಕೂ ಈ ಮರುವಿಂಗಡಣೆ ಸಹಕಾರಿಯಾಗಲಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ದಟ್ಟವಾಗಿದೆ.