ನಾಟಕಗಳಿಂದ ಜನರಿಗೆ ಮನ ಮುಟ್ಟುವ ಕಾರ್ಯ: ಅಕ್ಕಿ

| Published : Feb 04 2024, 01:33 AM IST

ಸಾರಾಂಶ

ನಾಟಕ ಎಂಬುವುದು ದೃಶ್ಯ ಮಾಧ್ಯಮವಾಗಿದೆ. ಎಲ್ಲಾ ಕಲೆಗಳಲ್ಲಿ ರಂಗಕಲೆ ವಿಷಯ ವಿಶಿಷ್ಟವಾಗಿದೆ. ಜನರ ಮನ ಮುಟ್ಟುವ ರೀತಿ ನಾಟಕಗಳು ಕೆಲಸ ಮಾಡುತ್ತವೆ.

ರಾಯಚೂರು: ನಾಟಕ ಎಂಬುವುದು ದೃಶ್ಯ ಮಾಧ್ಯಮವಾಗಿದೆ. ಎಲ್ಲಾ ಕಲೆಗಳಲ್ಲಿ ರಂಗಕಲೆ ವಿಷಯ ವಿಶಿಷ್ಟವಾಗಿದೆ. ಜನರ ಮನ ಮುಟ್ಟುವ ರೀತಿ ನಾಟಕಗಳು ಕೆಲಸ ಮಾಡುತ್ತವೆ ಎಂದು ಹಿರಿಯ ರಂಗಕರ್ಮಿ ವಿ.ಎನ್.ಅಕ್ಕಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹೊಸಮನಿ ಪ್ರಕಾಶನ ಹಾಗೂ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರದಯಲ್ಲಿ ಬಶೀರ್ ಅಹಮ್ಮದ್ ಹೊಸಮನಿ ವಿರಚಿತ ಸ್ವಪ್ನ ದರ್ಶನಿ ನಾಟಕ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ಸ್ವಪ್ನ ದರ್ಶನಿ ನಾಟಕ ಹೊಸ ಅಲೆಯ ಹೊಸ ತಲೆಮಾರಿನ ನಾಟಕವಾಗಿದ್ದು, ಅಕ್ಷರಗಳು ನಿಂತ ನೀರಾಗದೆ ಹರಿಯುವ ನೀರಾದಾಗ ಅದಕ್ಕೆ ಒಂದು ಅರ್ಥ ಬರುತ್ತದೆ. 26 ಪಾತ್ರಧಾರಿಗಳನ್ನೊಳಂಗೊಂಡ ಈ ನಾಟಕ ತುಂಬಾ ಅರ್ಥಪೂರ್ಣವಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.

ಕೃತಿ ಬಿಡುಗಡೆಗೊಳಿಸಿದ ಹಿರಿಯ ಬಂಡಾಯ ಸಾಹಿತಿ ಭಗತರಾಜ ನಿಜಾಮಕಾರಿ ಮಾತನಾಡಿ, ಹೊಸಮನಿ ಪ್ರಕಾಶನದ ಬಶೀರ್ ಅಹ್ಮದ್ ಹೊಸಮನಿಯವರು ಕನ್ನಡವೇ ತಮ್ಮ ಉಸಿರಾಗಿಸಿಕೊಂಡು ಪ್ರತಿ ಹೆಜ್ಜೆ ಹೆಚ್ಚು ಹೆಚ್ಚು ಕನ್ನಡವನ್ನು ನೆನೆಯುತ್ತಾ ತಮ್ಮ ಮನೆಗೂ ಕನ್ನಡ ಡಿಂಡಿಮ ನಿಲಯ ಎಂದು ಹೆಸರಿಟ್ಟು ಅವರು ಉದ್ಯೋಗದಲ್ಲಿದ್ದಾಗ ಸಹ ಕನ್ನಡ ಅಭಿಮಾನವನ್ನು ಹೊಂದಿ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾದ ಡಾ.ಅಲ್ಲಮಪ್ರಭು ಅಂಬಿ ಮಾತನಾಡಿ, ಕನ್ನಡವೇ ಮನ ಕನ್ನಡವೇ ಆದಾಗ ಮನೆ ಮನೆಯಲ್ಲಿ ಊರಿನಲ್ಲಿ, ತಾಲೂಕಿನಲ್ಲಿ, ಜಿಲ್ಲೆಯಲ್ಲಿ, ನಾಡಿನಲ್ಲಿ ಹಾಗೆ ಜಗತ್ತಿನಲ್ಲಿ ಕನ್ನಡವನ್ನು ಬಳಸಲು ಸಾಧ್ಯ ಮೊದಲು ನಾವೆಲ್ಲರೂ ಕನ್ನಡವನ್ನು ಗೌರವಿಸಬೇಕು ಎಂದು ಕರೆ ನೀಡಿದರು.

ಸಾಹಿತಿಗಳಾದ ವೀರ ಹನುಮಾನ್ ಹಾಗೂ ವ್ಯಂಗ್ಯ ಚಿತ್ರ ಕಲಾವಿದರಾದ ಈರಣ್ಣ ಬೆಂಗಾಲಿ, ಎಚ್.ಎಚ್ ಮ್ಯಾದಾರ್ ಮಾತನಾಡಿದರು.

ಇದೇ ಸಂದರ್ಭದಲ್ಲಿ ಹಿರಿಯ ಬಯಲಾಟ ಕಲಾವಿದರಾದ ರಾಮಣ್ಣ ಗುರುಪಾದ ಹಾಗೂ ಸಿನಿಮಾ ಕಲಾವಿದರಾದ ಬಸವರಾಜ್ ಮತ್ತು ಕವಿಗಳಾದ ತಿಮ್ಮಯ್ಯ ರಾಯಚೂರ್ ಹಾಗೂ ಬಾಗಲಕೋಟೆಯ ಹಿರಿಯ ಶಿಕ್ಷಕ ಶಕುಂತಲಾ ಸುರೇಶ ಸಾಲ ಮಂಟಪ ಗೂಡೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪ್ರಾಸ್ತಾವಿಕವಾಗಿ ಕೊಶಾಧ್ಯಕ್ಷರಾದ ಖಷಿ ಬಿ.ಹೊಸಮನಿ ಮಾತನಾಡಿದರು.

ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯ ಬೂದೆಪ್ಪ ಮಾತನಾಡಿ, ಓದಿನೊಂದಿಗೆ ಕಲೆಯ ಆಸಕ್ತಿಯನ್ನು ಹೊಂದಿದರೆ, ಸಾಕಷ್ಟು ಜ್ಞಾನ ಪಡೆಯಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ನಡುವಿನಮನಿ, ಉಪಾಧ್ಯಕ್ಷರಾದ ಪರ್ವೀನ್ ಬೇಗಂ ಹೊಸಮನಿ ಹಾಗೂ ಮತ್ತಿತರರಿದ್ದರು. ರಾಮಣ್ಣ ಮ್ಯಾದಾರ ಪ್ರಾರ್ಥಿಸಿದರು. ಪ್ರಕಾಶನದ ಪ್ರಧಾನ ಕಾರ್ಯದರ್ಶಿ ಶಿಫಾ ಹೊಸಮನಿ ಸ್ವಾಗತಿಸಿದರು. ಉಪನ್ಯಾಸಕ ಗೋವರ್ಧನರೆಡ್ಡಿ ನಿರೂಪಿಸಿದರು.