ಸಾರಾಂಶ
ಪಾಂಡವಪುರ: ಹೈನುಗಾರಿಕೆ ಬಗ್ಗೆ ರೈತ ಸಮುದಾಯಕ್ಕೆ ಹೆಚ್ಚಿನ ಅರಿವು ಮೂಡಿಸಿ ಹಾಲು ಉತ್ಪಾದನೆಯಲ್ಲಿ ತಾಲೂಕನ್ನು ಜಿಲ್ಲೆಗೆ ಮೊದಲ ಸ್ಥಾನಕ್ಕೆ ತೆಗೆದುಕೊಂಡು ಹೋಗಬೇಕು ಎಂಬುದು ನನ್ನ ಮುಖ್ಯ ಗುರಿ ಎಂದು ಮನ್ಮುಲ್ ನೂತನ ನಿರ್ದೇಶಕ ಸಿ.ಶಿವಕುಮಾರ್ ಹೇಳಿದರು.
ತಾಲೂಕಿನ ಚಿನಕುರಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಹೈನುಗಾರಿಕೆ ರೈತರು ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗಿದೆ. ಡಿಂಕಾ ಗ್ರಾಮದ ರೈತ ಮಹಿಳೆ ದಕ್ಷಿಣ ಭಾರತದಲ್ಲಿಯೇ ಅತಿಹೆಚ್ಚು ಹಾಲು ಉತ್ಪಾದನೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರು.ಗ್ರಾಮೀಣ ಪ್ರದೇಶದ ರೈತ ಕುಟುಂಬಗಳಿಗೆ ಹೈನುಗಾರಿಕೆ ಆರ್ಥಿಕ ಆಧಾರ ಸ್ತಂಭ. ಲಕ್ಷಾಂತರ ಕುಟುಂಬಗಳ ಬದುಕು ನಿರ್ವಹಣೆಗೆ ಸಹಕಾರಿಯಾಗಿದೆ. ಸಹಕಾರ ಸಂಘಗಳು ದೇವಸ್ಥಾನಗಳಿದ್ದಂತೆ. ನಾವು ದೇವರ ಬಗ್ಗೆ ಎಷ್ಟು ಭಕ್ತಿ, ನಂಬಿಕೆ ಇಟ್ಟು ಪೂಜಿಸುತ್ತೇವೋ, ಅಷ್ಟೇ ಪ್ರಾಮಾಣಿಕವಾಗಿ ಸಂಘದ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ ಎಂದರು.
ಮನ್ಮುಲ್ ಚುನಾವಣೆಯಲ್ಲಿ ತಾಲೂಕಿನ ಹಾಲು ಉತ್ಪಾದಕರ ಸಂಘದ ಮತದಾರರು ಹೆಚ್ಚಿನ ಮತಕೊಟ್ಟು ನಿರ್ದೇಶಕರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಹಣ ಇದ್ದವರೆಲ್ಲ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಜನರ ಪ್ರೀತಿ, ವಿಶ್ವಾಸ, ರೈತರ ಬಗ್ಗೆ ಕಾಳಜಿ ಹೊಂದಿರುವವರಿಗೆ ಮಾತ್ರ ಮತದಾರರು ಆಶೀರ್ವಾದ ಮಾಡುತ್ತಾರೆ ಎಂದರು.ಮುಖಂಡ ರಾಧಾಕೃಷ್ಣ, ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ವಿಎಸ್‌ಎಸ್‌ಬಿಎನ್ ಅಧ್ಯಕ್ಷ ಸಿ.ಎಸ್.ಗೋಪಾಲಗೌಡ, ಉಪಾಧ್ಯಕ್ಷ ಸಿ.ಸುರೇಂದ್ರ, ಟಿಎಪಿಸಿಎಂಎಸ್ ನಿರ್ದೇಶಕ ರಾಮಕೃಷ್ಣೇಗೌಡ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪ್ರಕಾಶ್, ಯಶವಂತ್ ಕುಮಾರ್, ವೀರಶೈವ- ಲಿಂಗಾಯತ ಮಹಾ ಸಭಾ ಜಿಲ್ಲಾಧ್ಯಕ್ಷ ಆನಂದ್, ಡೇರಿ ಉಪಾಧ್ಯಕ್ಷ ಸಿ.ಆರ್.ರಮೇಶ್, ನಿರ್ದೇಶಕರಾದ ಸಿ.ಎಂ.ರಮೇಶ್, ಆರ್.ವರದರಾಜು, ಸಿ.ಎಸ್.ಲೋಕೇಶ್, ಸಿ.ಎ.ಮಂಜುನಾಥ್, ಸಿ.ಎಸ್.ಕೆಂಪೇಗೌಡ, ಸಿ.ಬಿ.ನಾರಾಯಣಾಚಾರಿ, ಯೋಗೇಂದ್ರ, ವರಲಕ್ಷ್ಮೀ, ಯಶೋಧಮ್ಮ, ಹೇಮಾ, ಕಾರ್‍ಯದರ್ಶಿ ಲೋಕೇಶ್, ಗ್ರಾಪಂ ಹಾಲಿ ಹಾಗೂ ಮಾಜಿ ಸದಸ್ಯರು, ವಿಎಸ್‌ಎಸ್‌ಎನ್‌ಬಿ ಮಾಜಿ ಅಧ್ಯಕ್ಷರಾದ ಮಂಜುನಾಥ್, ಮೊಗ್ಗಣ್ಣೇಗೌಡ, ಎಲ್ಲಾ ನಿರ್ದೇಶಕರು, ಮುಖಂಡರು ಹಾಜರಿದ್ದರು.
---------ಚಿನಕುರಳಿ ಡೇರಿಯಲ್ಲಿ ಮನ್ಮುಲ್ ನೂತನ ನಿರ್ದೇಶಕ ಸಿ.ಶಿವಕುಮಾರ್ ಅವರನ್ನು ಎಲ್ಲಾ ನಿರ್ದೇಶಕರು, ಮುಖಂಡರು ಅಭಿನಂದಿಸಿದರು.