ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಅಕ್ಷರ ಕಲರವ

| Published : Feb 06 2025, 11:47 PM IST

ಸಾರಾಂಶ

ದೇಶದ ಅತ್ಯಂತ ಕಠಿಣ ಜೈಲು ಎಂದೇ ಹೇಳಲಾಗುವ ಬಳ್ಳಾರಿ ಕೇಂದ್ರ ಕಾರಾಗೃಹ ಓದಿನ ಆಸಕ್ತಿಯ ಬಂದಿಗಳಿಗೆ ಅರಿವಿನ ಜ್ಞಾನ ದೇಗುಲವಾಗಿ ಮಾರ್ಪಟ್ಟಿದೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ದೇಶದ ಅತ್ಯಂತ ಕಠಿಣ ಜೈಲು ಎಂದೇ ಹೇಳಲಾಗುವ ಬಳ್ಳಾರಿ ಕೇಂದ್ರ ಕಾರಾಗೃಹ ಓದಿನ ಆಸಕ್ತಿಯ ಬಂದಿಗಳಿಗೆ ಅರಿವಿನ ಜ್ಞಾನ ದೇಗುಲವಾಗಿ ಮಾರ್ಪಟ್ಟಿದೆ.

2012ರಿಂದ ಕಾರಾಗೃಹದಲ್ಲಿ ದೂರ ಶಿಕ್ಷಣ ಪಡೆಯುವವರಿಗೆ ಅವಕಾಶ ಕಲ್ಪಿಸಲಾಗುತ್ತಿದ್ದು, ಈವರೆಗೆ 400ಕ್ಕೂ ಹೆಚ್ಚು ಕೈದಿಗಳು ಇಲ್ಲಿ ಪದವಿ ಪಡೆದುಕೊಂಡಿದ್ದಾರೆ. ಇಲ್ಲಿ ಪದವಿ ಪಡೆದ ಅನೇಕರು ಜೈಲಿನಿಂದ ಬಿಡುಗಡೆ ಬಳಿಕ ಬದುಕು ರೂಪಿಸಿಕೊಂಡಿದ್ದಾರೆ. ಅಧ್ಯಯನದಲ್ಲಿ ತೊಡಗಿಸಿಕೊಳ್ಳಲು ಇಚ್ಚಿಸುವ ಕೈದಿಗಳಿಗೆ ಕಾರಾಗೃಹದ ಅಧಿಕಾರಿಗಳು ನೀಡುತ್ತಿರುವ ಸಲಹೆ ಹಾಗೂ ಸಹಕಾರಗಳು ನೂರಾರು. ಬಂದಿಗಳು ಅಕ್ಷರದ ಅರಿವಿನೆಡೆಗೆ ಹೆಜ್ಜೆ ಇಡುವಂತೆ ಮಾಡಿದೆ. ಜೈಲಿನಿಂದಲೇ ಪರೀಕ್ಷೆ ಬರೆದಿರುವ ಬಂದಿಗಳು ಪಿಯುಸಿ, ಪದವಿ ಸೇರಿದಂತೆ ವಿವಿಧ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಪೂರೈಸಿದ್ದಾರೆ. ಸ್ನಾತಕೋತ್ತರ ಪದವಿ ಪಡೆದವರೂ ಇದ್ದಾರೆ.

14 ವರ್ಷದಿಂದ ದೂರ ಶಿಕ್ಷಣ:

ವಿವಿಧ ಕಾರಣಗಳಿಂದಾಗಿ ಪದವಿ ಶಿಕ್ಷಣ ಪೂರೈಸಲು ಸಾಧ್ಯವಾಗದವರಿಗೆ 2012ರಲ್ಲಿ ಇಂದಿರಾಗಾಂಧಿ ನ್ಯಾಷನಲ್ ಓಪನ್ ಯೂನಿವರ್ಸಿಟಿಯ (ಇಗ್ನೋ) ಸಹಕಾರದಲ್ಲಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ದೂರ ಶಿಕ್ಷಣ ವ್ಯವಸ್ಥೆ ಆರಂಭಿಸಲಾಯಿತು. ಆರಂಭದ ವರ್ಷದಲ್ಲಿ 10 ಕೈದಿಗಳು ಮಾತ್ರ ಇದರ ಪ್ರಯೋಜನ ಪಡೆದರು. ನಂತರ ದೂರ ಶಿಕ್ಷಣದಿಂದ ಪದವಿ, ಇತರೆ ಸರ್ಟಿಫಿಕೇಟ್ ಕೋರ್ಸ್ ಪಡೆಯುವವರ ಸಂಖ್ಯೆ ಹೆಚ್ಚುತ್ತಲೇ ಸಾಗಿತು. ಕಳೆದ ಒಂದು ದಶಕದಲ್ಲಿ 422 ಜೈಲು ಬಂದಿಗಳು ಇಲ್ಲಿ ಪದವಿ, ಸ್ನಾತಕೋತ್ತರ ಪದವಿಗಳನ್ನು ಪೂರೈಸಿದ್ದಾರೆ. ಈ ವರ್ಷವೂ ಅನೇಕರು ಪದವಿ ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ.

ಬದುಕು ರೂಪಿಸಿದ ಜೈಲು:

ಕೇಂದ್ರ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸುತ್ತಿರುವ ವೇಳೆ ಪದವಿ ಪಡೆದವರ ಪೈಕಿ ಬಹುತೇಕರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಕೆಲವು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿದ್ದರೆ, ಹಲವರು ಸ್ವಯಂ ಉದ್ಯೋಗ ಕೈಗೊಂಡು ಜೀವನ ನಿರ್ವಹಿಸುತ್ತಿದ್ದಾರೆ.

ಕೈದಿಗಳ ನಿತ್ಯ ಓದಿಗೆ ಅನುಕೂಲವಾಗಲೆಂದೇ ಜೈಲಿನಲ್ಲಿ ಬೃಹತ್ ಗ್ರಂಥಾಲಯ ವ್ಯವಸ್ಥೆಯಿದೆ. ಇದರಲ್ಲಿ 14 ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ಬೆಳಿಗ್ಗೆ 10.30ರಿಂದ 1.30 ಹಾಗೂ ಸಂಜೆ 3.30ರಿಂದ 5.30ರ ಟೈಮ್‌ನಲ್ಲಿ ಆಸಕ್ತರು ತಮಗಿಷ್ಟದ ಪುಸ್ತಕಗಳನ್ನು ಓದಲು ಅವಕಾಶವಿದೆ. ದೂರ ಶಿಕ್ಷಣ ಪಡೆಯುವವರಿಗೆ ಹೊರಗಿನಿಂದ ಶಿಕ್ಷಕರು ಆಗಮಿಸಿ ಬೋಧನೆ ಮಾಡುತ್ತಾರೆ. ಓದಿಗೆ ಪೂರಕವಾದ ವಾತಾವರಣವೂ ರೂಪಿಸಿಕೊಡಲಾಗುತ್ತಿದೆ. ಜೈಲಿನ ಅಧಿಕಾರಿಗಳು ಪ್ರೋತ್ಸಾಹಿಸುತ್ತಿರುವುದರಿಂದ ಕಾರಾಗೃಹದಲ್ಲಿ ಇದ್ದುಕೊಂಡೇ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಿಸಿದೆ.

ನಾನಾ ಕಾರಣಗಳಿಗೆ ಹೆಚ್ಚು ಸುದ್ದಿಯಾಗುತ್ತಿರುವ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಅಕ್ಷರಪ್ರೀತಿಯ ಕೈದಿಗಳಿಗೆ ಬದುಕು ಕಟ್ಟಿಕೊಡುವ ಕೆಲಸವೂ ಸದ್ದಿಲ್ಲದೆ ಸಾಗಿದೆ.

ಈವರೆಗೆ 400ಕ್ಕೂ ಹೆಚ್ಚು ಕೈದಿಗಳು ಪದವಿ, ಸ್ನಾತಕೋತ್ತರ, ಇತರೆ ಸರ್ಟಿಫಿಕೇಟ್ ಪಡೆದಿದ್ದಾರೆ. ಓದುವ ಆಸಕ್ತಿಯಿರುವ, ಪರೀಕ್ಷೆ ಎದುರಿಸಲು ಇಚ್ಚಿಸುವವರಿಗೆ ಜೈಲಿನಿಂದ ಬೇಕಾದ ಸಹಾಯ ಮಾಡಲಾಗುವುದು. ಜೈಲು ಪರಿವರ್ತನಾ ಕೇಂದ್ರವಾಗಬೇಕು ಎಂಬುದೇ ನಮ್ಮ ಆಶಯ ಎನ್ನುತ್ತಾರೆ ಬಳ್ಳಾರಿ ಕೇಂದ್ರ ಕಾರಾಗೃಹ ಅಧೀಕ್ಷಕಿ ಲತಾ.