ಕಟೀಲು ಏಳನೇ ಮೇಳ ಆರಂಭ ಐತಿಹಾಸಿಕ ಪರ್ವಕಾಲ: ಶ್ರೀಹರಿನಾರಾಯಣ ದಾಸ ಆಸ್ರಣ್ಣ

| Published : Nov 13 2025, 01:30 AM IST

ಕಟೀಲು ಏಳನೇ ಮೇಳ ಆರಂಭ ಐತಿಹಾಸಿಕ ಪರ್ವಕಾಲ: ಶ್ರೀಹರಿನಾರಾಯಣ ದಾಸ ಆಸ್ರಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಕಟೀಲು ಏಳನೇ ಮೇಳ ಆರಂಭದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ, ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಸಂಚಾಲಕ ಶ್ರೀಹರಿನಾರಾಯಣ ದಾಸ ಆಸ್ರಣ್ಣ “ಕನ್ನಡಪ್ರಭ”ದ ಜೊತೆ ಮಾತನಾಡಿದ್ದಾರೆ.

ಕೃಷ್ಣಮೋಹನ ತಲೆಂಗಳ । ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಆರಂಭದ ಕಾಲಮಾನ ಬಗ್ಗೆ ಖಚಿತ ದಾಖಲೆ ಇಲ್ಲ. ಮಂಡಳಿಯ 2ನೇ ಮೇಳ 1975ರಲ್ಲಿ, 3ನೇ ಮೇಳ 1982ರಲ್ಲಿ, 4ನೇ ಮೇಳ 1993ರಲ್ಲಿ, 5ನೇ ಮೇಳ 2010ರಲ್ಲಿ, 6ನೇ ಮೇಳ 2013ರಲ್ಲಿ ಆರಂಭವಾಗಿತ್ತು. ಈ ವರ್ಷ 2025-26ನೇ ಸಾಲಿನ ತಿರುಗಾಟ ನ.16ರಿಂದ ಕಟೀಲು ಯಕ್ಷಗಾನ ಮಂಡಳಿ ಏಳನೇ ಮೇಳದ ಜೊತೆ ಆರಂಭವಾಗಲಿದೆ. ನ.15ರಂದು ನೂತನ ಮೇಳ ಆರಂಭದ ಪೂರ್ವಭಾವಿಯಾಗಿ ಪರಿಕರಗಳ ಮೆರವಣಿಗೆ ನಡೆಯಲಿದೆ. ಕಟೀಲು ಮೇಳದ ಆಟ ಆಡಿಸುವುದೂ ಹರಕೆ, ನೋಡುವುದೂ ಹರಕೆ ಅಥವಾ ಸೇವೆ ಎಂಬ ಭಾವ ಭಕ್ತರದ್ದು. ಆಟ ಆಡಿಸುವಾಗ, ದೇವಿಯೇ ತಮ್ಮೂರಿಗೆ ಬಂದು ಹರಸುತ್ತಾಳೆ ಎಂಬ ನಂಬಿಕೆ ಭಕ್ತರು ಹಾಗೂ ಸೇವಾದಾರರದ್ದು. ಕಟೀಲು ಏಳನೇ ಮೇಳ ಆರಂಭದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ, ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಸಂಚಾಲಕ ಶ್ರೀಹರಿನಾರಾಯಣ ದಾಸ ಆಸ್ರಣ್ಣ “ಕನ್ನಡಪ್ರಭ”ದ ಜೊತೆ ಮಾತನಾಡಿದ್ದಾರೆ.

-ಏಳನೇ ಮೇಳದ ಆರಂಭವಾಗುವುದು ಕಟೀಲಿನ ಮಟ್ಟಿಗೆ ಯಾಕೆ ಮುಖ್ಯ?

-ಕಟೀಲು ಮೇಳದ ಯಕ್ಷಗಾನ ಅಂದರೆ ದೇವರ ಸೇವೆ ಅಂತಲೇ ಪ್ರಸಿದ್ಧಿ. ದೇವರು ಸ್ವತಃ ಆಟ ನೋಡಲು ಬರುತ್ತಾರೆ ಎಂಬ ಐತಿಹ್ಯ. ಈ ಕಾರಣದಿಂದ ಕಟೀಲು ಮೇಳಗಳ ಆಟ ಆಡಿಸಲು ಒತ್ತಡ ಹೆಚ್ಚಾಗಿದೆ ಸುಮಾರು 8 ಮೇಳ ಆಡುವಷ್ಟು ಆಟದ ಮುಂಗಡ ಬುಕಿಂಗ್ ಪ್ರತಿ ವರ್ಷ ಹೊಸದಾಗಿ ಆಗುತ್ತಿದೆ. 500ರ ತನಕ ವಾರ್ಷಿಕ ಖಾಯಂ ಆಟಗಳಿವೆ. ಈಗಾಗಲೇ ಬುಕಿಂಗ್‌ ಬಳಿಕ ಆಟ ಆಡಿಸಲು 15-20 ವರ್ಷ ಸೇವಾದಾರರು ಕಾಯಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಬೇಗನೇ ಸೇವೆ ಮುಗಿಸುವ ಉದ್ದೇಶದಿಂದ ಏಳನೇ ಮೇಳ ಆರಂಭಿಸಿದ್ದು. ಸೇವಾದಾರರ ಬೇಡಿಕೆಯೇ ಏಳನೇ ಮೇಳ ಆರಂಭದ ಔಚಿತ್ಯ. ಏಳನೇ ಮೇಳದ ಆರಂಭ ಕಟೀಲು ಮೇಳ ಇತಿಹಾಸದಲ್ಲಿ ಪರ್ವಕಾಲ.

-ತಿರುಗಾಟ ಪೂರ್ವ ಕಟೀಲು ಯಕ್ಷಸಪ್ತಾಹ ಆಯೋಜಿಸಿದ ಉದ್ದೇಶ?-ಕಲಾವಿದರಿಗೆ ಹಿಂದೆ ಮೇಳವೇ ಪಾಠಶಾಲೆಯಾಗಿತ್ತು. ಈಗ ಹಾಗಲ್ಲ. ಅವರವರ ವೇಷ ಮಾಡುತ್ತಾರೆ, ಹೋಗುತ್ತಾರೆ, ಪ್ರಸಂಗ ನಡೆಗಳೆಲ್ಲ ಗೊತ್ತಿರುವುದಿಲ್ಲ. ಪ್ರೇಕ್ಷಕರಿಗೆ ಅನುಗುಣವಾಗಿ ಕಲಾವಿದರೂ ಬದಲಾಗಿದ್ದಾರೆ. ಹಾಗಾಗಿ ಈ ವರ್ಷ ತಿರುಗಾಟ ಪೂರ್ವದಲ್ಲಿ ಯಕ್ಷ ಸಪ್ತಾಹ ಹಮ್ಮಿಕೊಂಡಿದ್ದೇವೆ. ಕಲಾವಿದರಿಗೆ ಪುನರ್ ಮನನ ಶಿಬಿರ ಮಾಡಿದ್ದೇವೆ. ಖಾಯಂ ಸೇವಾದಾರರು ಮೇಳದ ಆಸ್ತಿ. ಅವರ ಜೊತೆಗೆ ಸಮಾವೇಶ ಮಾಡಿದ್ದೇವೆ. ಕಟೀಲು ಮೇಳ ಪ್ರಸಿದ್ಧವಾದರೂ ದಾಖಲೆಗಳಿಲ್ಲ. ಹಾಗಾಗಿ ದಾಖಲೀಕರಣ ಕಾರ್ಯ ನಡೆದಿದೆ. ಮೇಳದ ಮೇಲಿನ ಪ್ರೀತಿಯಿಂದ ಜಾಲತಾಣಗಳಲ್ಲಿ ಪ್ರಚಾರ ಆಗುತ್ತಿದೆ. ಅವರನ್ನೂ ಕರೆಸಿ ಸಮಾವೇಶ ಮಾಡಿದ್ದೇವೆ. ಯಕ್ಷಪ್ರೇಮಿಗಳನ್ನೂ ತಲುಪಬೇಕು ಅಂತ ಯಕ್ಷಪ್ರಭ ಪತ್ರಿಕೆ ಓದುಗರ, ಬರಹಗಾರರ ಸಮಾವೇಶ ಮಾಡಿದ್ದೇವೆ. ಭಕ್ತರು ಮತ್ತು ಕಲಾವಿದರ ನಂಟು ತಿಳಿಸಲು ಕಲಾವಿದರ ಸಮಾವೇಶ ನಡೆಯಲಿದೆ. ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ. ಭಕ್ತರನ್ನು ಸೇರಿಸಿ ಬಜಪೆಯಿಂದ ಕಟೀಲಿಗೆ ಮೇಳದ ಪರಿಕರಗಳ ಮೆರವಣಿಗೆ.. ಹೀಗೆ ಎಂಟು ದಿನ ಎಂಟು ರೀತಿಯ ಕಾರ್ಯಕ್ರಮ ನಡೆದಿದೆ. -ರಾತ್ರಿ ಧ್ವನಿವರ್ಧಕ ಬಳಕೆ ನಿರ್ಬಂಧ ಇದೆ. ಹೇಗೆ ಪ್ರದರ್ಶನ ನೀಡುತ್ತೀರಿ?

ಕಟೀಲು ಮೇಳಗಳ ಯಕ್ಷಗಾನ ರಾತ್ರಿ 12.30ರ ತನಕ ಪ್ರದರ್ಶಿಸಲು ಜಿಲ್ಲಾಧಿಕಾರಿಗಳ ವಿಶೇಷ ಆದೇಶ ಹಿಂದೆಯೇ ನಮಗೆ ದೊರಕಿದೆ. ಆ ಆದೇಶ ಪ್ರಕಾರ ಆ ಕಾಲಮಿತಿಯಲ್ಲಿ ಆಟ ನಡೆಸಬಹುದು. ಈ ವಿಚಾರದಲ್ಲಿ ಪೊಲೀಸರ ಕಳಕಳಿ ಒಪ್ಪಬೇಕು. ಆಟದಿಂದ ಪರಿಸರದ ಮಂದಿಗೆ ತೊಂದರೆ ಆಗಬಾರದು ಎಂಬುದು ಸರಿ. ಧ್ವನಿವರ್ಧಕವನ್ನು ಉಲ್ಲೇಖಿಸಿದ ಮಿತಿಯಲ್ಲೇ ಬಳಸಲು ಪ್ರಯತ್ನ ಪಡುತ್ತಿದ್ದೇವೆ. ನಿಪುಣ ಧ್ವನಿತಂತ್ರಜ್ಞಾನ ಪರಿಣತರು ನಮ್ಮಲ್ಲಿ ಇಲ್ಲ. ಆದರೂ ಎಷ್ಟು ಮಂದಿಗೆ ಕೇಳಬೇಕೋ ಅಷ್ಟೇ ಮಂದಿಗೆ ಕೇಳುವಂತೆ ತಂತ್ರಜ್ಞಾನ ಅಳವಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇವೆ. -ಹೊಸ ಕಲಾವಿದರಲ್ಲಿ ಅಧ್ಯಯನ ಕೊರತೆ ಇದೆ ಎಂಬ ಆರೋಪದ ಕುರಿತು?

-ಈಗ ಎಲ್ಲ ಕ್ಷೇತ್ರಗಳಲ್ಲೂ ಅಧ್ಯಯನ ಕೊರತೆ ಇದೆ. ಮುದ್ರಣವಾದದ್ದರಲ್ಲೂ ಅಕ್ಷರ ತಪ್ಪುಗಳು ಬರುತ್ತವೆ. ಪುಸ್ತಕ, ಪತ್ರಿಕೆಗಳಿಗೂ ಓದುಗರ ಕೊರತೆ ಇದೆ. ಓದುವುದೂ ಕಮ್ಮಿಯಾಗಿದೆ. ಕಲಾವಿದರಿಗೆ ಅಭಿಮಾನಿ ವರ್ಗ ಅಂತ ಹುಟ್ಟಿದೆ. ಅಭಿಮಾನಿಗಳ ಅಭಿರುಚಿ ಬೇರೆ ರೀತಿ ಇರುತ್ತದೆ. ಇದನ್ನು ಬದಿಗಿರಿಸಿ, ಪ್ರೇಕ್ಷಕರು ಸರಿ ಆದರೆ, ಸರಿಯಾದ ಕಲಾವಿದರಿಗೆ ಮಾತ್ರ ಮಾನ್ಯತೆ ಕೊಟ್ಟರೆ ಅಧ್ಯಯನ ಕೊರತೆ ಔದಾಸೀನ್ಯ ಸರಿ ಆಗ್ತದೆ. ಆಧುನಿಕ ಯುಗದಲ್ಲಿ ಹಾಸ್ಯ ರಸಕ್ಕೆ ವಿಶೇಷವಾದ ಸ್ಥಾನಮಾನ ದೊರಕಿದೆ. ಇದು ಒಳ್ಳೆಯದಲ್ಲ. ನವರಸ ಪ್ರಧಾನವಾದದ್ದು ಯಕ್ಷಗಾನ. ಹಾಸ್ಯವನ್ನೇ ಮಾಡಲು ಹೊರಟರೆ ರಾಮನಾದವನೂ ಹಾಸ್ಯ ಮಾಡುತ್ತಾನೆ. ಸಿಳ್ಳೆ, ಚಪ್ಪಾಳೆ ಬಡಿದ ಕೂಡಲೇ ನಾವು ಅಲೌಕಿಕದಿಂದ ಲೌಕಿಕಕ್ಕೆ ಬರುತ್ತೇವೆ. ಲೌಕಿಕತೆ ಕಡೆಗಣಿಸಿ ಕಲಾವಿದರು ತಲ್ಲೀನರಾಗಬೇಕು. ಪ್ರೇಕ್ಷಕರೂ ಅಪಸವ್ಯ ತಿರಸ್ಕರಿಸಬೇಕು.

-ಅಪಸವ್ಯಗಳ ತಡೆ ಅನುಷ್ಠಾನ ಹೊಣೆ ಯಾರದ್ದು? ಮೇಳಗಳದ್ದ, ಪ್ರೇಕ್ಷಕರದ್ದ, ಸಂಘಟಕರದ್ದ?

-ಯಕ್ಷಗಾನ ಉಳಿಯಬೇಕು ಅಂತಾದರೆ ಪ್ರೇಕ್ಷಕನೇ ಮನಸು ಮಾಡಬೇಕು. ಯಕ್ಷಗಾನದ ಪರಂಪರೆಗೆ ಕಲಾವಿದರು ಒಗ್ಗಿಕೊಳ್ಳಬೇಕು. ಅಪಸವ್ಯಗಳ ನಿಯಂತ್ರಣ ಯಜಮಾನರಿಗೂ ಕಷ್ಟ. ಎಲ್ಲ ಯಜಮಾನರಲ್ಲೂ ಒಮ್ಮತ ಬೇಕು. ಸಾಂಘಿಕ ಪ್ರಯತ್ನ ಬೇಕು. ಕಲಾವಿದರಲ್ಲಿ, ಪ್ರೇಕ್ಷಕರಲ್ಲೂ ಒಮ್ಮತ ಬೇಕು. ಹಾಗಾದರೆ ಮಾತ್ರ ಕಲೆಯನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯಬಹುದು.

-ಎಲ್ಲ ಮೇಳಗಳೂ ‘ದೇವಿಮಹಾತ್ಮೆ’ ಆಡುತ್ತವೆ. ಕಟೀಲು ಮೇಳದ ದೇವಿ ಮಹಾತ್ಮೆ ಅನುಭೂತಿ ಯಾಕೆ ವಿಭಿನ್ನ?

-ಇದಕ್ಕೆ ಕಟೀಲು ದೇವಿಯೇ ಕಾರಣ. ದೇವಿಮಹಾತ್ಮೆಗೆ ಪ್ರವರ್ತನೆ ಹೊರಟದ್ದೇ ಕಟೀಲಿನಿಂದ. ನನ್ನ ಅಜ್ಜ ಲಕ್ಷ್ಮಿನಾರಾಯಣ ಆಸ್ರಣ್ಣರು ಮೊದಲಾಗಿ ಮಾಂಬಾಡಿ ನಾರಾಯಣ ಭಾಗವತರ ನೇತೃತ್ವದಲ್ಲಿ ಐದು ದಿನಗಳಲ್ಲಿ ದೇವಿಮಹಾತ್ಮೆ ಆರಂಭದಲ್ಲಿ ಆಡಿಸಿದ್ದು. ದುರ್ಗಾನಮಸ್ಕಾರ ಇತ್ಯಾದಿ ಅನುಷ್ಠಾನ ಮಾಡಿ ಅಜ್ಜ ಆಟ ನೋಡಲು ಬರುತ್ತಿದ್ದರು. ದೇವಿ ಪಾತ್ರಧಾರಿಯೂ ಉಪವಾಸ ಇತ್ಯಾದಿ ನಿಯಮಗಳನ್ನು ಪಾಲಿಸಿ, ಆ ಪಾವಿತ್ರ್ಯತೆಯಿಂದಲೇ ಆಟ ಆಗುತ್ತಿತ್ತು. ಈಗಲೂ ಕಲಾವಿದರೂ ಆ ಪಾವಿತ್ರ್ಯ ಉಳಿಸಿಕೊಂಡಿದ್ದಾರೆ. ಕಟೀಲು ದೇವಿಗೆ ಯಕ್ಷಗಾನ ಇಷ್ಟ. ಆದ್ದರಿಂದ ಮೇಳದ ಕಲಾವಿದರಿಗೂ ಗೌರವ ದೊರಕುತ್ತದೆ. ಆದ್ದರಿಂದ ಸಣ್ಣ ಕಲಾವಿದನಲ್ಲೂ ದೇವಿಯೇ ಚೆನ್ನಾದ ನಿರ್ವಹಣೆ ಮಾಡಿಸ್ತಾಳೆ ಎಂದಷ್ಟೇ ನಾನು ಹೇಳಬಲ್ಲೆ. ಸ್ವತಃ ಸೂರಿಕುಮೇರು ಗೋವಿಂದ ಭಟ್ರೇ ಹೇಳಿದ್ರು ‘ದೇವಿ ಮಹಾತ್ಮೆ ಕಟೀಲಿಗೇ’ ಅಂತ. -ಬದಲಾದ ಕಾಲಘಟ್ಟದಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಹೇಗೆ?-ಯಕ್ಷಗಾನ ಸಾರ್ವಕಾಲಿಕ. ಹಾಗಾಗಿ ಎಲ್ಲರಿಗೂ ಬೇಕಾದ ಹಾಗೆ ಯಕ್ಷಗಾನ ಮಾಡಿಸಲು ಆಗುವುದಿಲ್ಲ. ಅಭಿರುಚಿ ಇರುವ ಕಲಾವಿದರನ್ನು ಉಳಿಸಬೇಕು. ಎಲ್ಲ ಪ್ರೇಕ್ಷಕರನ್ನು ಆಕರ್ಷಿಸುತ್ತೇವೆ, ಅದಕ್ಕೆ ಬೇಕಾದಂತೆ ಯಕ್ಷಗಾನ ಮಾಡುತ್ತೇವೆ ಎಂದರೆ ಅದು ಭ್ರಾಂತಿ. ಯಕ್ಷಗಾನ ಉಳಿಯಬೇಕಾದರೆ ಯಕ್ಷಗಾನೀಯತೆ ಉಳಿಸಿಕೊಳ್ಳಬೇಕು. ಎಲ್ಲರಿಗೂ ಮೆಚ್ಚುಗೆಯಾಗುವಂತೆ ಆಡಲು ಸಾಧ್ಯವೇ ಇಲ್ಲ.-ಕಾಲಮಿತಿ ನಡುವೆಯೂ ಯಕ್ಷಗಾನದ ಪಂರಪರೆ ನಡೆ ಉಳಿಸುವುದು ಹೇಗೆ?-ಸಂಪಾಜೆ ಯಕ್ಷೋತ್ಸವದಂತ ರಾಜಾಶ್ರಯ ಬೇಕು. ಕಟೀಲು ಮೇಳದ ಆರಂಭದಲ್ಲೂ, ಕೊನೆಗೂ ಪೂರ್ಣರಾತ್ರಿ ಪ್ರದರ್ಶನ ಆಗುತ್ತದೆ. ದುರ್ಗಾ ಮಕ್ಕಳ ಮೇಳದಲ್ಲಿ ವಿವರ ನಡೆಗಳನ್ನು ವರ್ಷಪೂರ್ತಿ ಕಲಿಸುತ್ತೇವೆ.ಅಧ್ಯಯನ ಶೀಲರಾದವರು ಯಕ್ಷಗಾನಕ್ಕೆ ಬರಲು ಆರಂಭವಾದರೆ ಕಾಲಮಿತಿಯ ನಡುವೆಯೂ ಪರಂಪರೆ ಉಳಿಯುತ್ತದೆ. ವಿದ್ವಾಂಸರು ಅಕಾಡೆಮಿಕ್ ಆಗಿ ಯಕ್ಷಗಾನ ಮುಂದೆ ಕೊಂಡು ಹೋದರೆ ಇದು ಸಾಧ್ಯ.

-ಏಳನೇ ಮೇಳ ಹೊರಡಿಸುವ ಹೊಸ್ತಿಲಲ್ಲಿದ್ದೀರಿ. ಪ್ರೇಕ್ಷಕರಿಗೆ ಸಂದೇಶ ಏನು?

-ಕಟೀಲು ಮೇಳಕ್ಕೆ ಜನ ಪ್ರೇಕ್ಷಕರೂ ಹೌದು, ಭಕ್ತರೂ ಹೌದು. ಆದ್ದರಿಂದ ಯಕ್ಷಗಾನವನ್ನು ದೇವರಿಗೆ ಇಷ್ಟವಾದದ್ದು ಎಂಬುದರಿಂದ ಭಾವುಕರಾಗಿ ನೋಡುತ್ತೀದ್ದೀರಿ. ದೇವರಿಗೆ ಪ್ರೀತಿಯಾದದ್ದೆಲ್ಲ ಶಾಸ್ತ್ರೀಯವಾಗಿ ಇರಬೇಕು. ಹೋಮ ಮಾಡುವಾಗ ಶಾಸ್ತ್ರ ತಪ್ಪುವುದಕಿಲ್ಲ. ಯಕ್ಷಗಾನವೂ ಶಾಸ್ತ್ರೀಯ ಕಲೆ. ದೇವರಿಗೆ ಪ್ರೀತಿಯಾಗಿ ಯಕ್ಷಗಾನ ನಡೆಯಬೇಕಾದರೆ ಶಾಸ್ತ್ರೀಯವಾಗಿ ನಡೆಯಬೇಕು. ಶಾಸ್ತ್ರೀಯತೆಗೆ ಒತ್ತು ಕೊಡುವ ಹಾಗೆ ಪ್ರೇಕ್ಷಕರೂ, ಭಕ್ತರೆಲ್ಲರೂ ಪ್ರಯತ್ನಪಡಬೇಕು. ಆಗ ನೀವು ದೇವರ ಸೇವೆ ಮಾಡಿದ ಹಾಗಾಗುತ್ತದೆ. ಆಗ ಕಲಾವಿದರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ. ಅವರದ್ದೂ ದೇವರ ಸೇವೆ ಆಗುತ್ತದೆ. ಆಗ ದೇವಸ್ಥಾನದಿಂದ ಏಳನೇ ಮೇಳ ಮಾಡಿದ್ದು ಸಾರ್ಥಕವಾಗುತ್ತದೆ.