ಸಾರಾಂಶ
ಚಿತ್ರದುರ್ಗ ಎಸ್‌ಪಿ ಮನೆ ಮುಂಭಾಗದಲ್ಲಿದ್ದ ಬ್ಲಾಕ್ ಸ್ಪಾಟ್‌ನ್ನು ಗುರುವಾರ ಸರಿಪಡಿಸಲಾಯಿತು.
ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ನಗರದಲ್ಲಿ ಒಳಚರಂಡಿಯಿಂದಾದ ಬ್ಲಾಕ್ ಸ್ಪಾಟ್ ಗಳ ಸರಿಪಡಿಸುವ ಕಾರ್ಯವನ್ನು ಕೊನೆಗೂ ಕೈಗೆತ್ತಿಕೊಳ್ಳಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸದಸ್ಯ ಎಸ್‌ಪಿ ಮನೆಯ ಮುಂಭಾಗ ಕಳೆದ ಎರಡು ವರ್ಷಗಳಿಂದ ಇದ್ದ ಬ್ಲಾಕ್ ಸ್ಪಾಟ್ ಗೆ ಕೊನೆಗೂ ಮುಕ್ತಿ ದೊರೆತಿದೆ.ಗುರುವಾರ ಸಿಸಿ ರಸ್ತೆ ಅಗೆದು ಒಳಚರಂಡಿ ಚೇಂಬರ್ ಗೆ ಹೊಸದಾದ ರಿಂಗ ಅಳವಡಿಸಿ ಅದರ ಮೇಲೊಂದು ಮುಚ್ಚಳ ಮುಚ್ಚುವುದರ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಎಸ್‌ಪಿ ಮನೆ ಮುಂಭಾಗದ ಬ್ಲಾಕ್ ಸ್ಪಾಟ್ ಗೆ ಸಂಬಂಧಿಸಿದಂತೆ ಕನ್ನಡಪ್ರಭ ಜೂ.3ರಂದು ವರದಿ ಪ್ರಕಟಿಸಿತ್ತು. ಮೂರು ಎಸ್‌ಪಿ ಗಳು ಬಂದರೂ ಬ್ಲಾಕ್ ಸ್ಪಾಟ್ ಬದಲಾಗಲಿಲ್ಲವೆಂಬ ಸುದ್ದಿ ಮಾಡಿತ್ತು. ಸುದ್ದಿ ಪ್ರಕಟಗೊಂಡ ಬೆನ್ನಲ್ಲೇ ನಗರ ಸಭೆಗೆ ಬಿಗಿ ನಿರ್ದೇಶನ ನೀಡಿದ ಎಸ್‌ಪಿ ಧರ್ಮೇಂದ್ರ ಕುಮಾರ್ ಮೀನಾ ಬ್ಲಾಕ್ ಸ್ಪಾಟ್ ಗಳಿಗೆ ಮುಕ್ತಿ ತೋರಿಸಿದ್ದಾರೆ. ಅಲ್ಲದೇ ಅಂಬೇಡ್ಕರ್ ಪ್ರತಿಮೆ ಪಕ್ಕದಿಂದ ಒನಕೆ ಓಬವ್ವ ಪ್ರತಿಮೆ ವರೆಗೆ ಇದ್ದ ಒಳ ಚರಂಡಿಯಿಂದಾದ ಎಲ್ಲ ಬ್ಲಾಕ್ ಸ್ಪಾಟ್ ಗಳ ಸರಿಪಡಿಸಲಾಗಿದೆ. ಗುರುವಾರ ದಿನವಿಡೀ ಸಿಸಿ ರಸ್ತೆ ಅಗೆದು ಸರಿಪಡಿಸುವ ಕಾರ್ಯ ನಡೆದಿತ್ತು.