ಸಾರಾಂಶ
ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಿಸಿರುವ ಹೊಸ ಜಿಎಸ್ಟಿ ನೀತಿ ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಗಣ್ಯರು ಅಭಿಮತ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಿಸಿರುವ ಹೊಸ ಜಿಎಸ್ಟಿ ನೀತಿ ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಶೇ.12 ಮತ್ತು ಶೇ.28 ರ ತೆರಿಗೆ ಸ್ಲ್ಯಾಬ್ ಗಳನ್ನು ತೆಗೆದು ಹಾಕಿ ಶೇ.5 ಮತ್ತು ಶೇ.18 ರ ಸ್ಲ್ಯಾಬ್ ನ್ನು ಮಾತ್ರ ಉಳಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು ತಿಳಿಸಿದ್ದಾರೆ.ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರಧಾನಮಂತ್ರಿ ನರೇಂದ್ರಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ನಾಲ್ಕು ಹಂತದ ಜಿಎಸ್‌ಟಿ ನೀತಿಯನ್ನು ಕಡಿತಗೊಳಿಸಿ ಎರಡಕ್ಕೆ ಸೀಮಿತಗೊಳಿಸುವ ಮೂಲಕ ಜನಪರ ಕಾಳಜಿ ತೋರಿದೆ. ಈ ಕ್ರಮದಿಂದ ಅನೇಕ ವಸ್ತುಗಳ ಬೆಲೆ ಕಡಿಮೆಯಾಗಲಿದ್ದು, ಬಡವರ ಹಾಗೂ ಜನಸಾಮಾನ್ಯರ ಆರ್ಥಿಕ ಬಲ ಸುಧಾರಣೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಆರೋಗ್ಯಕ್ಕೆ ಪೂರಕವಾದ ಅನೇಕ ಜೀವನಾವಶ್ಯಕ ಮತ್ತು ಜೀವರಕ್ಷಕ ಸಂಬಂಧಿತ 33 ಔಷಧಿಗಳು, ವೈಯುಕ್ತಿಕ ವಿಮೆ, ಕ್ಯಾನ್ಸರ್ ಚಿಕಿತ್ಸೆ ಹಾಗೂ ಸ್ಟೇಷನರಿಗಳು ಶೂನ್ಯ ತೆರಿಗೆ ವ್ಯಾಪ್ತಿಗೆ ಬರಲಿದೆ. ರಸಗೊಬ್ಬರ, ಕೃಷಿ ಯಂತ್ರೋಪಕರಣ, ಟ್ರ್ಯಾಕ್ಟರ್, ಸ್ಪಿಂಕ್ಲರ್ ಮತ್ತು ತುಂತುರು ನೀರಾವರಿಗೆ ಸಂಬಂಧಿಸಿದ ವಸ್ತುಗಳ ಮೇಲಿನ ತೆರಿಗೆಯನ್ನು ಶೇ.12ರಿಂದ ಶೇ.5ಕ್ಕೆ ರಿಂದ ಇಳಿಕೆ ಮಾಡುವ ಮೂಲಕ ಕೇಂದ್ರ ಸರಕಾರ ರೈತರ ಪ್ರಗತಿ ಹಾಗೂ ದೇಶದ ಅಭಿವೃದ್ಧಿಗೆ ದೊಡ್ಡ ಕೊಡುಗೆಯನ್ನೇ ನೀಡಿದೆ.ಗೃಹ ನಿರ್ಮಾಣದ ವಸ್ತುಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡಲಾಗಿದೆ. ಸಿಮೆಂಟ್, ಕಬ್ಬಿಣ, ಇಟ್ಟಿಗೆ, ಟೈಲ್ಸ್ ಮತ್ತು ಗೃಹ ಬಣ್ಣದ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲಾಗಿದ್ದು, ಇದರಿಂದ ಎಲ್ಲಾ ಬಡವರ ಹಾಗೂ ಮಧ್ಯಮ ವರ್ಗದ ಜನರ ಸ್ವಂತ ಮನೆ ಹೊಂದುವ ಕನಸು ನನಸಾಗಲಿದೆ. ವಿಮೆ ಹೊಂದಿದ ನಾಗರಿಕರಿಗೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಿದ್ದು, ಇದು ಸಾಕಷ್ಟು ಜನರಿಗೆ ದೊಡ್ಡ ಲಾಭವಾಗಲಿದೆ. ದೇಶದಲ್ಲಿ ದೊಡ್ಡ ಆರ್ಥಿಕ ಕ್ರಾಂತಿಯೇ ನಡೆಯಲಿದ್ದು, ಇತರ ರಾಷ್ಟ್ರಗಳಿಗೆ ಭಾರತ ಅಭಿವೃದ್ಧಿ ಕಾರ್ಯಗಳ ಮೂಲಕವೇ ಪ್ರತ್ಯುತ್ತರ ನೀಡಲಿದೆ ಎಂದು ಹೇಳಿದ್ದಾರೆ.ಕೇಂದ್ರ ಸರ್ಕಾರ ಜನಪರ ಕಾಳಜಿಯಿಂದ ಅನೇಕ ತೆರಿಗೆ ಸುಧಾರಣೆಗಳನ್ನು ಮಾಡಿದ್ದರೂ ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ಕೇವಲ ಜಿಎಸ್‌ಟಿ ನೀತಿಯನ್ನು ಟೀಕಿಸುವುದರಲ್ಲೇ ಕಾಲಹರಣ ಮಾಡುತ್ತಿದೆ. ರಾಜ್ಯದಲ್ಲಿ ತಾನು ವಿಧಿಸಿರುವ ಹೆಚ್ಚಿನ ಸೆಸ್ ಮತ್ತು ತೆರಿಗೆಗಳನ್ನು ಇಳಿಕೆ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ನಾಪಂಡ ರವಿ ಕಾಳಪ್ಪ ಟೀಕಿಸಿದ್ದಾರೆ.