ಜನಸಾಗರದ ಮಧ್ಯೆ ತಾಯವ್ವ ದೇವಸ್ಥಾನ ರಥೋತ್ಸವ

| Published : Oct 29 2025, 01:45 AM IST

ಸಾರಾಂಶ

ಶಿಗ್ಗಾಂವಿತಾಲೂಕಿನ ತಡಸ ಸಮೀಪವಿರುವ ಶಕ್ತಿ ದೇವತೆಯಾದ ತಾಯವ್ವನ ರಥೋತ್ಸವವು ವಿಧಿ ವಿಧಾನಗಳಿಂದ ಮಂಗಳವಾರ ವಿಜೃಂಭಣೆಯಿಂದ ಸಾಯಂಕಾಲ ಜರುಗಿತು.

ಶಿಗ್ಗಾಂವಿ: ತಾಲೂಕಿನ ತಡಸ ಸಮೀಪವಿರುವ ಶಕ್ತಿ ದೇವತೆಯಾದ ತಾಯವ್ವನ ರಥೋತ್ಸವವು ವಿಧಿ ವಿಧಾನಗಳಿಂದ ಮಂಗಳವಾರ ವಿಜೃಂಭಣೆಯಿಂದ ಸಾಯಂಕಾಲ ಜರುಗಿತು.

ತಡಸ ಗ್ರಾಮದಿಂದ ೫ ಕಿಲೋ ಮೀಟರ್ ಮುಂಡಗೋಡಕ್ಕೆ ಹೋಗುವ ದಾರಿ ಮಧ್ಯದಲ್ಲಿಯೇ ಸಹ್ಯಾದ್ರಿ ಪರ್ವತ ಶ್ರೇಣಿಯ ಸುಂದರವಾದ ದಟ್ಟ ಅರಣ್ಯದ ಮಧ್ಯೆ ಇಂದು ತಾಯಮ್ಮ ದೇವಿಯ ಜಾತ್ರೆಗೆ ಸಹಸ್ರಾರು ಭಕ್ತರು ಆಗಮಿಸಿದ್ದರು.

ದೇವಸ್ಥಾನದ ಮುಂಭಾಗದಿಂದ ಹೊರಟ ರಥೋತ್ಸವವು ಸಾವಿರಾರು ಭಕ್ತರ ಡೊಳ್ಳು ಕುಣಿತ ಝಾಂಜ ಮೇಳ ಮುಂತಾದ ವಾದ್ಯಗಳ ಮೂಲಕ ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯ ತನಕ ಹೋಗಿ ಮರಳಿ ಅದೇ ಮಾರ್ಗವಾಗಿ ತಂದು ದೇವಸ್ಥಾನದ ಹತ್ತಿರ ತಲುಪಿತು.

ಜೋಡೆತ್ತು ಚಕ್ಕಡಿ ಮೂಲಕ ಅಪಾರ ಸಂಖ್ಯೆಯಲ್ಲಿ ಜಾತ್ರೆಗೆ ಬಂದ ಭಕ್ತರು: ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಜೋಡೆತ್ತು ಚಕ್ಕಡಿ ಕಟ್ಟಿಕೊಂಡು ಎತ್ತುಗಳನ್ನು ಶೃಂಗರಿಸಿ ಬೆಳಗ್ಗೆಯಿಂದ ಬರತೊಡಗಿದರು. ವಿಶೇಷವಾಗಿ ಒಂದು ಕುದುರೆ ಒಂದು ಎತ್ತು ಚಕ್ಕಡಿಯನ್ನು ಹೂಡಿಕೊಂಡು ಬಂದಿರುವುದು ಈ ಒಂದು ಜಾತ್ರೆ ಮೆರುಗನ್ನು ಹೆಚ್ಚಿಸಿತು. ಸಹ ಪಂಕ್ತಿ ಭೋಜನ ಸವಿದ ಭಕ್ತರು: ಮನೆಯಲ್ಲಿ ವಿವಿಧ ಬಗೆಯ ಅಡುಗೆಯನ್ನು ತಯಾರಿಸಿಕೊಂಡು ಬಂದು ತಮ್ಮ ಕುಟುಂಬ ಹಾಗೂ ಸಂಬಂಧಿಕರೊಡನೆ ಸಮೃದ್ಧವಾಗಿ ಬೆಳೆದಿರುವ ಉತ್ತರ ಕನ್ನಡ ದಟ್ಟ ಅರಣ್ಯದಲ್ಲಿ ಪರಿಸರದ ಮಧ್ಯೆ ಊಟವನ್ನು ಭಕ್ತರು ಸವಿದರು. ದೇವಸ್ಥಾನದಲ್ಲಿ ತೊಟ್ಟಿಲನ್ನು ಕಟ್ಟಿ ಹರಕೆ ತೀರಿಸಲು ಭಕ್ತಿ ಸಮರ್ಪಣೆ ಜೊತೆಗೆ ಹರಕೆಗಾಗಿ ಬೀಗ ಹಾಕಿ ಉಡಿ ತುಂಬುವ ದೀರ್ಘ ದಂಡ ನಮಸ್ಕಾರ ಹಲವಾರು ಭಕ್ತರು ಕಾಲ್ನಡಿಗೆ ಮುಖಾಂತರ ಬಂದು ತಾಯಿಯ ದರ್ಶನಕ್ಕೆ ಪಾತ್ರರಾದರು.

ಹುಬ್ಬಳ್ಳಿ ಶಿರಸಿ ಮಾರ್ಗವಾಗಿ ರಾಜ್ಯ ಹೆದ್ದಾರಿಗೆ ಓಡಾಡುವ ವಾಹನಗಳು ಇಂದು ಮಾರ್ಗ ಬದಲಾಯಿಸಿ ತಡಸ ಗ್ರಾಮದಿಂದ ಅಡವಿಸೋಮಾಪುರ, ಕುನ್ನೂರು ಮಮದಾಪುರ, ತರ್ಲಗಟ್ಟ, ಜೇನಮುರಿ ಮಾರ್ಗವಾಗಿ ಮುಂಡಗೋಡ ಸುಮಾರು ೩ ಗಂಟೆಗಳಕಾಲ ಈ ಮಾರ್ಗದಲ್ಲಿ ಸಂಚರಿಸಿದವು. ಆದರೆ ರಥೋತ್ಸವ ಚಾಲನೆಗೊಂಡು ದೇವಸ್ಥಾನಕ್ಕೆ ಮರಳುವಾಗ ವಾಹನಗಳನ್ನು ಪೊಲೀಸರು ಬಿಟ್ಟಿದ್ದರಿಂದ ಭಕ್ತರು ಸಾಕಷ್ಟು ತೊಂದರೆಯನ್ನು ಅನುಭವಿಸುವಂತಾಯಿತು. ವೇದಿಕೆಯ ಕಾರ್ಯಕ್ರಮದಲ್ಲಿ ಅಗಡಿ ಮಠದ ಶ್ರೀಗಳು, ಭರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತಗೌಡ ದುಂಡಿಗೌಡ್ರ, ಕೆಎಂಎಫ್ ನಿರ್ದೇಶಕ ತಿಪ್ಪಣ್ಣಾ ಸಾತಣ್ಣವರ, ಡಾ. ಜಕ್ಕನಗೌಡ್ರ ಮಂಜುನಾಥ ಸಂಗಣ್ಣವರ, ಶೇಖಣ್ಣಾ ನಂಜಪ್ಪನವರ, ಕೃಷ್ಣಾ ಚವಡಾಳ ಸೇರಿದಂತೆ ವಿವಿಧ ಗಣ್ಯರು ಜಾತ್ರಾ ಸಮಿತಿ ಸದಸ್ಯರುಗಳು ಗ್ರಾಮ ಪಂಚಾಯತಿ ಪದಾಧಿಕಾರಿಗಳು, ಸದಸ್ಯರು ಭಕ್ತ ಸಮೂಹ ಪಾಲ್ಗೊಂಡಿತ್ತು.