ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಡಿ.೫ರಂದು ನಡೆಯುವ ಜನಕಲ್ಯಾಣ ಸ್ವಾಭಿಮಾನಿ ಸಮಾವೇಶದಲ್ಲಿ ಹಾಸನಕ್ಕೆ ಈ ಸರ್ಕಾರ ಎಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ ಎನ್ನುವುದನ್ನು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಬಹಿರಂಗಗೊಳಿಸುವಂತೆ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಸ್ವರೂಪ್ ಆಗ್ರಹಿಸಿದರು.ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸರ್ಕಾರಕ್ಕೆ ಈ ಸಮಾವೇಶ ನಡೆಸುವ ನೈತಿಕತೆ ಇಲ್ಲ. ಕಳೆದ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಂತೆ ಅನುದಾನ ಬಿಡುಗಡೆ ಮಾಡಿಲ್ಲ. ಕಡೆಪಕ್ಷ ರಸ್ತೆಗಳ ಗುಂಡಿ ಮುಚ್ಚಲೂ ಆಗುತ್ತಿಲ್ಲ. ಹೊಸ ಡಿಸಿ ಕಚೇರಿ ಕಟ್ಟಡ, ತಾಲೂಕು ಕಚೇರಿ ಕಟ್ಟಡಗಳಿಗೆ ಕೂಡ ಅನುದಾನ ಬಿಡುಗಡೆ ಮಾಡಿಲ್ಲ. ಈ ಸರ್ಕಾರ ದಿವಾಳಿ ಆಗಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಕಾಂಗ್ರೆಸ್ ಸರಕಾರ ದಿವಾಳಿ ಆಗಿಹೋಗಿದ್ದರೂ ಕೂಡ ನಮ್ಮ ಸರಕಾರದಲ್ಲಿ ಜನಕಲ್ಯಾಣ ಮಾಡಿದ್ದೇವೆ ಎಂದು ಸುಳ್ಳು ಹೇಳಿಕೊಂಡು ಹಾಸನದಲ್ಲಿ ಮಾಡಲಾಗುತ್ತಿರುವ ಸ್ವಾಭಿಮಾನಿ ಸಮಾವೇಶವನ್ನು ಜೆಡಿಎಸ್ ಪಕ್ಷದಿಂದ ಖಂಡಿಸುತ್ತೇವೆ ಎಂದು ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ತಿಳಿಸಿದರು. ಹಾಸ್ಯಸ್ಪದ ಹೇಳಿಕೆ: ಮೂರು ಉಪಚುನಾವಣೆ ಗೆದ್ದಿದ್ದೇವೆ. ಮಂಡ್ಯದಲ್ಲಿ ಕೂಡ ಒಬ್ಬರೂ ಮಾತ್ರ ಜೆಡಿಎಸ್ ಶಾಸಕರು ಬಿಟ್ಟರೇ ಉಳಿದ ಎಲ್ಲರೂ ಕಾಂಗ್ರೆಸ್ ಶಾಸಕರು ಇದ್ದೇವೆ. ಹಳೆ ಮೈಸೂರಿನಲ್ಲಿಯೂ ಕೂಡ ಕಾಂಗ್ರೆಸ್ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದೇವೆ. ಹಾಸನದಲ್ಲಿ ಒಬ್ಬರೂ ಕಾಂಗ್ರೆಸ್ ಶಾಸಕರು ಮತ್ತು ಸಂಸದರು ಇದ್ದು, ಇಲ್ಲಿ ಶಕ್ತಿ ತುಂಬುವ ನಿಟ್ಟಿನಲ್ಲಿ ಕಾಂಗ್ರೆಸ್ ಸಮಾವೇಶ ಇಲ್ಲೇ ಮಾಡುತ್ತಿರುವುದಾಗಿ ಹೇಳಿದ್ದಾರೆ. ಇದೊಂದು ಹಾಸ್ಯಸ್ಪದ ಹೇಳಿಕೆಯಾಗಿದ್ದು, ಹಾಸನ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿದ್ದಾರ ಎನ್ನುವ ಬಗ್ಗೆ ಡಿಸೆಂಬರ್ ೫ರ ಸಮಾವೇಶದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಇಬ್ಬರೂ ಹೇಳಬೇಕೆಂದು ಸವಾಲು ಹಾಕಿದರು.
ನಗರದ ವಿಮಾನ ನಿಲ್ದಾಣ, ಪ್ರೈ ಓವರ್, ಹೈಟೆಕ್ ಆಸ್ಪತ್ರೆ ಕಟ್ಟಡಗಳು, ರಸ್ತೆ ದುರಸ್ತಿ ಕಾಮಗಾರಿಗಳು ನನೆಗುದಿಗೆ ಬಿದ್ದಿದ್ದು, ಅಗತ್ಯ ಅನುದಾನವನ್ನೇ ಬಿಡುಗಡೆ ಮಾಡಿಲ್ಲ. ಹೀಗಿರುವಾಗ ಸಮಾವೇಶ ಮಾಡುವ ಮುನ್ನ ಸರ್ಕಾರ ಜಿಲ್ಲೆಗೆ ನೀಡಿರುವ ಕೊಡುಗೆ ಏನು ಎನ್ನುವುದನ್ನು ಮೊದಲು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು. ರಾಜ್ಯ ಸರ್ಕಾರ ಯಾವುದೇ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯ ಅನುದಾನವನ್ನೂ ಸಮರ್ಪಕವಾಗಿ ಬಿಡುಗಡೆ ಮಾಡುತ್ತಿಲ್ಲ. ಈ ವರ್ಷ ಕೇವಲ ಒಂದು ಕೋಟಿ ರು. ನೀಡಿದ್ದಾರೆ. ಅದು ಸಹ ಅಸಮರ್ಪಕವಾಗಿದೆ. ಆಯಾ ಕ್ಷೇತ್ರದಲ್ಲಿ ಶಾಸಕರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಾಗದೇ ತೊಂದರೆ ಅನುಭಿಸುತ್ತಿದ್ದಾರೆ. ಇವರಲ್ಲಿ ಕಾಂಗ್ರೆಸ್ ಶಾಸಕರು ಸಹ ಹೊರತಾಗಿಲ್ಲ, ಸರ್ಕಾರ ಮೊದಲು ಜಿಲ್ಲೆಯ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಲಿ. ಈ ಕುರಿತು ಮುಂದಿನ ಚಳಿಗಾಲದ ಅಧಿವೇಶನದಲ್ಲಿಯೂ ಸದನದಲ್ಲಿ ಪ್ರಸ್ತಾಪಿಸಲಾಗುವುದು ಎಂದರು.ಜೆಡಿಎಸ್ ತೊರೆಯಲ್ಲ: ಕಾಂಗ್ರೆಸ್ ಪಕ್ಷ ಜನಕಲ್ಯಾಣ ಸಮಾವೇಶ ಎಂದು ಹೆಸರಿಟ್ಟಿದೆ. ಆದರೆ ಜನರ ಕಲ್ಯಾಣಕ್ಕಾಗಿ ಯಾವುದೇ ಹಣವನ್ನು ಬಿಡುಗಡೆ ಮಾಡುತ್ತಿಲ್ಲ. ಕೇವಲ ತಮ್ಮ ಪಕ್ಷದ ಪ್ರಚಾರಕ್ಕೋಸ್ಕರ ಈ ಸಮಾವೇಶವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಪಕ್ಷದ ಪ್ರಚಾರಕ್ಕಾಗಿ ಈ ಸಮಾವೇಶವನ್ನು ಮಾಡಲಾಗುತ್ತಿದೆ. ಇದರಲ್ಲಿ ಜಿಲ್ಲಾಡಳಿತ ಹಾಗೂ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ದೂರಿದ ಅವರು, ಇತ್ತೀಚೆಗೆ ನಡೆದ ಮೂರು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ. ಆದರೆ ಸರ್ಕಾರ ಆಡಳಿತದಲ್ಲಿ ಇರುವಾಗ ಆಯಾ ಪಕ್ಷಗಳು ಗೆಲ್ಲುವುದು ಸಾಮಾನ್ಯ ಜನರ ಆದೇಶಕ್ಕೆ ಎಲ್ಲರೂ ತಲೆಬಾಗಲೇಬೇಕು. ಮೂರು ಚುನಾವಣೆಗಳಲ್ಲಿ ಗೆದ್ದ ಮಾತ್ರಕ್ಕೆ ರಾಜ್ಯದ ಜನ ತಮ್ಮ ಪರ ಇದ್ದಾರೆ ಎಂದು ಹೇಳಿಕೊಳ್ಳುವುದು ತರವಲ್ಲ. ಜೆಡಿಎಸ್ ನ ಯಾವುದೇ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಶಾಸಕ ಸ್ವರೂಪ್, ನಾನಾಗಲಿ, ಸಮೃದ್ಧಿ ಮಂಜುನಾಥ್ ಆಗಲಿ, ಶರಣ ಗೌಡ ಕುಂದಾಪುರ ಆಗಲಿ ನಾವೆಲ್ಲರೂ ಯುವ ಶಾಸಕರು ಸ್ನೇಹಿತರು ಆಗಿದ್ದೇವೆ. ನಾವು ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷವನ್ನು ತೊರೆಯುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಜಿಲ್ಲಾ ವಕ್ತಾರ ಹೊಂಗೆರೆ ರಘು, ನಗರಸಭೆ ಮಾಜಿ ಸದಸ್ಯ ಶ್ರೇಯಸ್ ಇತರರು ಉಪಸ್ಥಿತರಿದ್ದರು.