ಸಾಮಾಜಿಕ ನ್ಯಾಯ ಒದಗಿಸುವ ಸಾಧನ ಸಂವಿಧಾನ

| Published : Nov 27 2024, 01:02 AM IST

ಸಾರಾಂಶ

ವಿಶ್ವದ ಶ್ರೇಷ್ಠ ಸಂವಿಧಾನವಾದ ಭಾರತದ ಸಂವಿಧಾನವು ಅಂಗೀಕರಿಸಿ ಇಂದಿಗೆ ೭೫ ವರ್ಷ ಪೂರ್ಣಗೊಂಡಿದೆ ಮತ್ತು ಭಾರತ ಸಂವಿಧಾನದ ೭೫ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಸಂವಿಧಾನಿಕ ಮೌಲ್ಯಗಳ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸಲು ರಾಜ್ಯ ಸರ್ಕಾರವು ರಾಜ್ಯಾದ್ಯಂತ ಅಭಿಯಾನ ಪ್ರಾರಂಭಿಸುತ್ತಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆದೇಶದ ಸಂವಿಧಾನವು ಪ್ರತಿಯೊಬ್ಬ ನಾಗರಿಕನ ಹಕ್ಕುಗಳನ್ನು ಕಾಪಾಡುವ ಮತ್ತು ಸಾಮಾಜಿಕ ನ್ಯಾಯ ಒದಗಿಸುವ ಸಮರ್ಥ ಸಾಧನವಾಗಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.ಪಟ್ಟಣದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಮಾತನಾಡಿ, ದೇಶದ ಪ್ರತಿಯೊಬ್ಬ ಪ್ರಜೆಗೂ ರಾಜಕೀಯ, ಸಾಮಾಜಿಕ, ಆರ್ಥಿಕ ಸಮಾನತೆಯನ್ನು ದೊರಕಿಸಿಕೊಟ್ಟು, ಸಹೋದರತ್ವ ಮತ್ತು ಸ್ವತಂತ್ರವಾಗಿ ಬದುಕಲು ಸಹಕಾರಿಯಾಗಿದೆ ಎಂದರು.

ವಿಶ್ವದ ಶ್ರೇಷ್ಠ ಸಂವಿಧಾನ

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವಾದ ರಾಷ್ಟ್ರ ಭಾರತವು ವಿವಿಧತೆಯಲ್ಲಿ ಏಕತೆ ಸಾಧಿಸಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಮಾರ್ಗದರ್ಶಿಯಾಗಿದೆ. ವಿಶ್ವದ ಶ್ರೇಷ್ಠ ಸಂವಿಧಾನವಾದ ಭಾರತದ ಸಂವಿಧಾನವು ಅಂಗೀಕರಿಸಿ ಇಂದಿಗೆ ೭೫ ವರ್ಷ ಪೂರ್ಣಗೊಂಡಿದೆ ಮತ್ತು ಭಾರತ ಸಂವಿಧಾನದ ೭೫ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಸಂವಿಧಾನಿಕ ಮೌಲ್ಯಗಳ ಬಗ್ಗೆ ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರಿಗೂ ಅರಿವು ಮೂಡಿಸಲು ಉದ್ದೇಶದಿಂದ ನಮ್ಮ ಸರ್ಕಾರವು ರಾಜ್ಯಾದ್ಯಂತ ಅಭಿಯಾನ ಪ್ರಾರಂಭಿಸಲಾಗುತ್ತಿದೆ ಎಂದರು.

ಸಂವಿಧಾನ ದಿನವಾದ ನ.೨೬ರಿಂದ ಆರಂಭವಾಗಲಿರುವ ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ಸಾಂವಿಧಾನಿಕ ಸಾಕ್ಷರತೆಯ ಬಗ್ಗೆ ಅರಿವು ಮೂಡಿಸಲಾಗುವುದಲ್ಲದೆ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ನ್ಯಾಯದ ತತ್ವಗಳ ಬಗ್ಗೆ ತಿಳಿಸಲಾಗುತ್ತದೆ. ಸ್ವಾಭಿಮಾನದ ಬದುಕು:

ಭಾರತದ ಸಂವಿಧಾನಕ್ಕೆ ಹೊರ ದೇಶಗಳ ಮೆಚ್ಚುಗೆ ವ್ಯಕ್ತಪಡಿಸಿವೆ. ಸಂವಿಧಾನ ಅಡಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಸ್ವಾಭಿಮಾನದಿಂದ ಬದುಕಲು ಅವಕಾಶ ಕಲ್ಪಿಸಲಾಗಿದೆ ಇದರ ಪ್ರತಿಫಲದಿಂದಾಗಿ ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ, ಇಂತಹ ಸಂವಿಧಾನದ ಮೂಲ ಮೌಲ್ಯಗಳೊಂದಿಗೆ ಸಂಪರ್ಕ ಸಾಧಿಸಲು ನಾಗರೀಕರನ್ನು ಪ್ರೇರೇಪಿಸಲು ಹಾಗೂ ಸಮುದಾಯದ ಘಟನೆಗಳ ಮೂಲಕ ಸಂವಿಧಾನ ಸಾಮಾನ್ಯ ಜನರ ಜೀವನದ ಹತ್ತಿರ ತೆಗೆದುಕೊಂಡು ಹೋಗಲು ಪ್ರಯತ್ನಿಸಲಾಗುತ್ತದೆ ಎಂದು ತಿಳಿಸಿದರು.ಪುರಸಭೆ ಅಧ್ಯಕ್ಷ ಗೋವಿಂದ ಬಿ.ಎಂ, ತಹಸೀಲ್ದಾರ ವೆಂಕಟೇಶಪ್ಪ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ರವಿಕುಮಾರ್,ಪುರಸಭೆಯ ಮುಖ್ಯಾಧಿಕಾರಿ ಸತ್ಯನಾರಾಯಣ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಅಂಜಲಿದೇವಿ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಮುನಿರಾಜ, ಹಿರಿಯ ಸಹಾಯಕ ನಿರ್ದೇಶಕ ಶಿವಾರೆಡ್ಡಿ, ಲೋಕೋಪಯೋಗಿ ಇಂಜಿನಿಯರ್ ರವಿ, ಆರಕ್ಷಕ ನಿರೀಕ್ಷಕ ದಯಾನಂದ.ಆರ್, ಶಂಷುದ್ದೀನ್ ಬಾಬು, ಗುಣಶೀಲನ್ ಇದ್ದರು.