ಸಂವಿಧಾನದ ಆಶಯದಂತೆ ನಡೆದರೆ ನೆಮ್ಮದಿ ಸಾಧ್ಯ

| Published : Nov 27 2024, 01:02 AM IST

ಸಾರಾಂಶ

ಶಿವಮೊಗ್ಗ: ಸಮಾನತೆ, ಸೌಹಾರ್ದತೆ, ಭ್ರಾತೃತ್ವ, ಐಕ್ಯತೆ, ಭಾವೈಕ್ಯತೆ, ಸಮಗ್ರತೆಯಿಂದ ಭಾರತೀಯರೆಲ್ಲರೂ ಇರಬೇಕೆಂಬ ಆಶಯ ಹೊತ್ತ ನಮ್ಮ ಸಂವಿಧಾನದ ಪೀಠಿಕೆಯನ್ನು ನಾವೆಲ್ಲ ಪಾಲಿಸಿದರೆ ಸಂತೋಷ ಮತ್ತು ನೆಮ್ಮದಿಯಿಂದ ಇರಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಹೇಳಿದರು.

ಶಿವಮೊಗ್ಗ: ಸಮಾನತೆ, ಸೌಹಾರ್ದತೆ, ಭ್ರಾತೃತ್ವ, ಐಕ್ಯತೆ, ಭಾವೈಕ್ಯತೆ, ಸಮಗ್ರತೆಯಿಂದ ಭಾರತೀಯರೆಲ್ಲರೂ ಇರಬೇಕೆಂಬ ಆಶಯ ಹೊತ್ತ ನಮ್ಮ ಸಂವಿಧಾನದ ಪೀಠಿಕೆಯನ್ನು ನಾವೆಲ್ಲ ಪಾಲಿಸಿದರೆ ಸಂತೋಷ ಮತ್ತು ನೆಮ್ಮದಿಯಿಂದ ಇರಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಹೇಳಿದರು.

ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಾನಗರಪಾಲಿಕೆ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಂವಿಧಾನ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು ಸ್ವಾತಂತ್ರ್ಯ ನಂತರ ನಮ್ಮ ನೆಲದ ಸಂವಿಧಾನ ರಚನೆಗಾಗಿ ಡಾ.ರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಅತ್ಯಂತ ಮುಂದಾಲೋಚನೆ ಹೊಂದಿದ್ದ ಮಾನವತಾವಾದಿ ಡಾ.ಅಂಬೇಡ್ಕರ್‌ರವರಿಗೆ ಸಂವಿಧಾನ ರಚಿಸುವಂತಹ ಗುರುತರವಾದ ಜವಾಬ್ದಾರಿ ನೀಡಲಾಯಿತು. ಎಲ್ಲರೂ ಒಂದಾಗಿರಬೇಕು, ವಿದ್ಯಾವಂತರಾಗಬೇಕು ಹಾಗೂ ಸಂಘಟಿತರಾಗಿರಬೇಕು ಎಂಬುದು ಅಂಬೇಡ್ಕರ್‌ರವರ ಮೂಲ ಸಂದೇಶವಾಗಿತ್ತು ಎಂದು ತಿಳಿಸಿದರು.

ಸಮಾನತೆ, ಶಿಕ್ಷಣ ಮತ್ತು ಸಂಘಟನೆ ಈ ಮೂರು ಅಂಶಗಳು ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಮೂಲ ಧ್ಯೇಯಗಳಾಗಿದ್ದವು. ಅವರು ಮಹಿಳೆಯರ ಶಿಕ್ಷಣದ ಮಹತ್ವವನ್ನು ಎತ್ತಿ ಹಿಡಿದಿದ್ದರು. ಸಮಾನತೆ ಮತ್ತು ಶಿಕ್ಷಣದಿಂದ ಮಾತ್ರ ಉನ್ನತವಾಗಿ ಬದಕಲು ಸಾಧ್ಯವೆಂದು ಹೇಳುತ್ತಿದ್ದರು. ಸಂಘಟನೆಯ ಶಕ್ತಿಯನ್ನು ಒತ್ತಿ ಹೇಳಿದ್ದರು ಎಂದರು.ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಸಂವಿಧಾನ ನಮ್ಮ ದೇಶದ ಶಕ್ತಿ. ನಮ್ಮ ಸಂವಿಧಾನ ಜಗತ್ತು ನಮ್ಮೆಡೆ ನೋಡುವಂತೆ ಮಾಡಿದ್ದು, ದೇಶ ವಿಶ್ವಗುರು ಆಗಿ ಹೊರಹೊಮ್ಮುತ್ತಿದೆ. ನಮ್ಮದು ಅತ್ಯಂತ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಎಂದು ಹೇಳಿದರು.

ಸಂವಿಧಾನ ಅಭಿವೃದ್ಧಿಗೆ ಪೂರಕವಾಗಿದೆ. ಎಲ್ಲರೂ ಇದನ್ನು ಓದಿ, ತಿಳಿದು ಅದರಂತೆ ನಡೆಯಬೇಕು. ದೇಶದ ಏಳ್ಗೆಗೆ ಅವಿರತ ಶ್ರಮಿಸಿದ ಅಂಬೇಡ್ಕರ್‌ರವರನ್ನು ಸ್ಮರಿಸಿ ಪಂಚತೀರ್ಥ ಯೋಜನೆ ಜಾರಿಗೊಳಿಸಿ ಗೌರವಿಸಲಾಗುತ್ತಿದೆ ಎಂದರು.ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ.ಜಿ ಮಾತನಾಡಿ, ಭಾವೈಕ್ಯತೆ, ಭ್ರಾತೃತ್ವ ಸಮಾನತೆಯಿಂದ ಬದುಕಬೇಕೆಂಬ ಆಶಯದಿಂದ ಅಂಬೇಡ್ಕರ್‌ರವರು ನಮಗೆ ಅತ್ಯುತ್ತಮವಾದ ಸಂವಿಧಾನ ನೀಡಿದ್ದಾರೆ. ವಿದ್ಯಾರ್ಥಿಗಳು ಈ ನೆಲದ ಸಂವಿಧಾನ ತಿಳಿದರೆ ಮಾತ್ರ ಭವ್ಯ ಸಮಾಜ ಕಟ್ಟಲು ಸಾಧ್ಯ ಎಂದು ಹೇಳಿದರು.ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಜಾತ್ಯಾತೀತವಾಗಿ ಸಮಾನತೆಯಿಂದ ಬದುಕಬೇಕೆಂಬ ಆಶಯದಿಂದ ಸಂವಿಧಾನ ರಚಿಸಲಾಗಿದೆ. ಆದರೆ ಇಂದಿಗೂ ಜಾತಿ, ದ್ವೇಷದ ವಿಷ ಬೀಜ ಬಿತ್ತಲಾಗುತ್ತಿದೆ. ಇದು ನಿಲ್ಲಬೇಕು. ಡಾ.ಅಂಬೇಡ್ಕರ್ ರಚಿಸಿರುವ ಸಂವಿಧಾನ ಓದಿ, ತಿಳಿದು ಅದರಂತೆ ಸೌಹಾರ್ಧದಿಂದ ಬದುಕಬೇಕು ಎಂದರು.

ಇದೇ ವೇಳೆ ಭಾರತ ಸಂವಿಧಾನ ಪೀಠಿಕೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಕಸ್ತೂರಬಾ ಪಿಯು ಕಾಲೇಜಿನ ಉಪನ್ಯಾಸಕರಾದ ಎಚ್.ಎಸ್.ರವಿಕುಮಾರ್ ಸಂವಿಧಾನದ ಅರಿವು ಮತ್ತು ಜಾಗೃತಿ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎನ್‌.ಸುರೇಶ್ ಉಪನ್ಯಾಸ ನೀಡಿದರು.

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿ.ಪಂ.ಸಿಇಒ ಎನ್.ಹೇಮಂತ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಪಾಲಿಕೆ ಆಯುಕ್ತರಾದ ಡಾ.ಕವಿತಾ ಯೋಗಪ್ಪನವರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಿ.ಮಲ್ಲೇಶಪ್ಪ ಮತ್ತಿತರರು ಇದ್ದರು.