ಬ್ರಹ್ಮಾವರ ಲಾಕಪ್‌ ಡೆತ್: ಸಿಐಡಿ ತನಿಖೆ ನಡೆಸುವಂತೆ ಕುಟುಂಬಸ್ಥರಿಂದ ದೂರು

| Published : Nov 27 2024, 01:02 AM IST

ಬ್ರಹ್ಮಾವರ ಲಾಕಪ್‌ ಡೆತ್: ಸಿಐಡಿ ತನಿಖೆ ನಡೆಸುವಂತೆ ಕುಟುಂಬಸ್ಥರಿಂದ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ಲಾಕಪ್‌ನಲ್ಲಿ ಮೃತಪಟ್ಟ ಕೇರಳ ಮೂಲದ ಕಾರ್ಮಿಕನ ಮನೆಯವರು ಪೊಲೀಸರು ಹೊಡೆದಿದ್ದರಿಂದ ಆತ ಮೃತಪಟ್ಟಿದ್ದಾನೆ ಎಂದು ಆರೋಪಿಸಿದ್ದು ಸಿಐಡಿ ತನಿಖೆ ನಡೆಸುವಂತೆ ಕೇರಳ ಸಿಎಂಗೆ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ನಡೆದ ಲಾಕ್‌ಅಪ್ ಡೆತ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಲಾಕಪ್‌ ನಲ್ಲಿ ಮೃತಪಟ್ಟ ಕೇರಳದ ಮೂಲದ ಕಾರ್ಮಿಕನ ಮನೆಯವರು, ಪೊಲೀಸರು ಹೊಡೆದಿದ್ದರಿಂದ ಆತ ಮೃತಪಟ್ಟಿದ್ದಾನೆ ಎಂದು ಆರೋಪಿಸಿದ್ದು, ಸಿಐಡಿ ತನಿಖೆ ನಡೆಸುವಂತೆ ಕೇರಳ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ನ. 9 ರಂದು ಕೇರಳದ ಬಿಜು ಮೋನ್ ಎಂಬಾತ ಬ್ರಹ್ಮಾವರ ಪೊಲೀಸ್ ಠಾಣೆಯ ಲಾಕ್‌ಅಪ್‌ನಲ್ಲಿ ಅಸಹಜ ರೀತಿಯಲ್ಲಿ ಮೃತಪಟ್ಟಿದ್ದ. ಚೇರ್ಕಾಡಿ ಗ್ರಾಮದ ಮನೆಯೊಂದಕ್ಕೆ ನುಗ್ಗಿ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಎಳೆತಂದು ಲಾಕ್‌ಅಪ್‌ಗೆ ಹಾಕಿದ್ದರು. ರಾತ್ರಿ ಆತ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು.

ನಂತರ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಆತನ ಮೃತದೇಹವನ್ನು ಮನೆಯವರಿಗೆ ಹಸ್ತಾಂತರಿಸಲಾಗಿತ್ತು. ಮೃತದೇಹವನ್ನು ಊರಿಗೆ ತೆರೆದುಕೊಂಡು ಹೋಗಿ ಪರೀಕ್ಷಿಸಿದಾಗ ಆತನ ಮೈ ಮೇಲೆ ಗಂಭೀರ ಗಾಯಗಳ ಗುರುತುಗಳು ಪತ್ತೆಯಾಗಿವೆ.

ಮೊಣಕಾಲಿನ ಕೆಳಗೆ ಲಾಠಿ ಏಟಿನ ರೀತಿಯ ಗಾಯದ ಗುರುತುಗಳಿದ್ದವು. ಪೊಲೀಸರು ಆತನಿಗೆ ಹೊಡೆದು ಹಿಂಸೆ ನೀಡಿದ್ದಾರೆ. ಇದರಿಂದ ಆತ ಮೃತಪಟ್ಟಿದ್ದಾನೆ. ಆದರೆ ಪೊಲೀಸರು ಅಸಹಜ ಸಾವು ಎಂದು ಬಿಂಬಿಸಲು ಪ್ರಯತ್ನ ಪಟ್ಟಿದ್ದಾರೆ ಎಂದು ಆರೋಪಿಸಿ ಮನೆಯವರು ಕೇರಳ ಮುಖ್ಯಮಂತ್ರಿ ಪಿಣರಾಯಿ ‍ವಿಜಯನ್‌ಗೆ ದೂರು ನೀಡಿದ್ದು, ಸಿಐಡಿ ತನಿಖೆ ಮಾಡುವಂತೆ ಒತ್ತಾಯಿಸಿದ್ದಾರೆ.