ದೇಶದ ಸಹಕಾರಿ ಚಳವಳಿಯ ಸಂದರ್ಭದಲ್ಲಿಯೇ ಹುಟ್ಟಿ ಇಂದು ಸದೃಢವಾಗಿ ಬೆಳೆದು ಸಮಾಜಕ್ಕೆ ಉತ್ತಮ ಸೇವೆಯನ್ನು ನೀಡುವಲ್ಲಿ ಶಿರಸಿ ಅರ್ಬನ್ ಬ್ಯಾಂಕ್ ಅಗ್ರಗಣ್ಯ ಸ್ಥಾನದಲ್ಲಿದೆ.

ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಚಿಂತಕ

ಕನ್ನಡಪ್ರಭ ವಾರ್ತೆ ಶಿರಸಿ

ಜಿಲ್ಲೆಯಲ್ಲಿ ಸಹಕಾರಿ ವ್ಯವಸ್ಥೆಯು ಬಲಿಷ್ಠವಾಗಿ ಬೆಳೆದುನಿಂತಿದೆ. ದೇಶದ ಸಹಕಾರಿ ಚಳವಳಿಯ ಸಂದರ್ಭದಲ್ಲಿಯೇ ಹುಟ್ಟಿ ಇಂದು ಸದೃಢವಾಗಿ ಬೆಳೆದು ಸಮಾಜಕ್ಕೆ ಉತ್ತಮ ಸೇವೆಯನ್ನು ನೀಡುವಲ್ಲಿ ಶಿರಸಿ ಅರ್ಬನ್ ಬ್ಯಾಂಕ್ ಅಗ್ರಗಣ್ಯ ಸ್ಥಾನದಲ್ಲಿದೆ ಎಂದು ಚಿಂತಕ ಪ್ರೊ. ಕೆ.ಎನ್. ಹೊಸ್ಮನಿ ಹೇಳಿದರು.ನಗರದ ನೆಮ್ಮದಿ ಕುಟೀರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಶಿರಸಿ ತಾಲೂಕಾ ಘಟಕದ ವತಿಯಿಂದ ಆಯೋಜಿಸಿದ್ದ ದಿ.ಶೇಷಗಿರಿರಾವ್ ನಾರಾಯಣರಾವ್ ಕೇಶವೈನ್ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ದೇಶದ ಸಹಕಾರಿ ಚಳುವಳಿಯೊಂದಿಗೆ ಶಿರಸಿ ಅರ್ಬನ್ ಬ್ಯಾಂಕ್ ಹುಟ್ಟಿ ಬಂದಿದ್ದು, 1905ರಲ್ಲಿ ಪ್ರಗತಿಪರ ಚಿಂತನೆಯುಳ್ಳ 12 ಸದಸ್ಯರು ದೂರದೃಷ್ಟಿಯಿಂದ ಶಿರಸಿ ಅರ್ಬನ್ ಬ್ಯಾಂಕ್ ಸ್ಥಾಪಿಸಿದ್ದಾರೆ. 59 ವರ್ಷಗಳು ಸಂಸ್ಥೆಯನ್ನು ನಡೆಸುವಲ್ಲಿ ಯಶಸ್ವಿಯಾದವರು ದಿ. ಶೇಷಗಿರಿ ನಾರಾಯಣರಾವ್ ಕೇಶವೈನ್ ಅವರು. ದೇಶದ 10 ಅರ್ಬನ್ ಬ್ಯಾಂಕ್ ಗಳಲ್ಲಿ ಶಿರಸಿ ಅರ್ಬನ್ ಬ್ಯಾಂಕ್ ಅಗ್ರಗಣ್ಯ ಸ್ಥಾನದಲ್ಲಿದೆ. ಕೇಶವೈನ್ ಅವರ ಸಲಹೆಗಳನ್ನು ಕೇಳಿಕೊಂಡು ಸಾಕಷ್ಟು ಸಹಕಾರಿ ಸಂಸ್ಥೆಗಳು ಬರುತ್ತಿದ್ದವು. ಸಹಕಾರಿ ತತ್ವದ ಸಂಪೂರ್ಣ ಅಧ್ಯಯನವನ್ನು ಅವರು ಮಾಡಿದ್ದರು. ಸಾಕಷ್ಟು ಅನುಭವಿಗಳಾಗಿದ್ದರು. ರಾಮಕೃಷ್ಣ ಹೆಗಡೆಯವರು ಸಹ ಕೇಶವೈನ್ ಅವರಿಂದ ಸಹಕಾರಿ ಕ್ಷೇತ್ರದ ಬಗ್ಗೆ ಸಲಹೆಗಳನ್ನು ಕೇಳಿದ್ದರು ಎಂಬುದು ಶ್ಲಾಘನೀಯ ಎಂದರು.

ಬ್ಯಾಂಕ್‌ಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳೂ ಗೌರವಗಳೂ ಸಂದಿದೆ. 51 ಸಾವಿರ ಸದಸ್ಯರನ್ನು ಹೊಂದಿದೆ. 44 ಕೋಟಿ ರೂ. ಶೇರು ಬಂಡವಾಳವನ್ನು ಬ್ಯಾಂಕ್ ಹೊಂದಿದೆ. 2019ರಿಂದ ಜಯದೇವ ನಿಲೇಕಣಿ ಅವರು ಬ್ಯಾಂಕ್ ನ ಅಧ್ಯಕ್ಷತೆಯನ್ನು ವಹಿಸಿಕೊಂಡು ಸಮರ್ಥವಾಗಿ ಮುನ್ನೆಡೆಸುತ್ತಿದ್ದಾರೆ. ಇಡೀ ದೇಶದಲ್ಲೇ ಉತ್ತಮ ಹೆಸರು ಗಳಿಸಿರುವ ಬ್ಯಾಂಕ್ ನಮ್ಮ ಶಿರಸಿ ಅರ್ಬನ್ ಬ್ಯಾಂಕ್ ಆಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಿರಸಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಜಯದೇವ ನಿಲೇಕಣಿ ಮಾತನಾಡಿ, ಶಿಸ್ತು, ಪ್ರಾಮಾಣಿಕತೆ, ನಿಷ್ಠೆ ಇವು ಸಂಸ್ಥೆ ಬೆಳೆಯಲು ಮೂಲ ಕಾರಣವಾಗಿರುತ್ತದೆ. ಕೇವಲ ಆರ್ಥಿಕವಾಗಿ ಮಾತ್ರವಲ್ಲದೇ ಸಾಮಾಜಿಕ ಕಳಕಳಿಯ ಬಗ್ಗೆಯೂ ನಾವು ಚಿಂತನೆ ನಡೆಸಬೇಕು ಎಂದರು.ಯಡಳ್ಳಿ ಸೊಸೈಟಿ ಅಧ್ಯಕ್ಷ ಜಿ.ಆರ್. ಹೆಗಡೆ ಬೆಳ್ಳೆಕೇರಿ ಮಾತನಾಡಿ, ಸಹಕಾರಿ ವ್ಯವಸ್ಥೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು. ಉತ್ತರ ಕನ್ನಡದ ವ್ಯವಹಾರಕ್ಕೆ ಸಹಕಾರಿ ಸಂಘಗಳೇ ಮೂಲ ಆಧಾರ. ಸಹಕಾರಿ ಸಂಘಗಳಲ್ಲಿ ಯುವಕರ ಕೊರತೆ ಕಾಣುತ್ತಿದೆ. ಯುವಕರು ಪಟ್ಟಣ ಸೇರಿದ್ದಾರೆ.‌ ಕೃಷಿ ಭೂಮಿ ಹಾಳಾಗುತ್ತಿದೆ. ಮುಂದಿನ ಜನಾಂಗಕ್ಕೆ ಸಹಕಾರಿ ತತ್ವವನ್ನು ಹಸ್ತಾಂತರಿಸುವುದು ಸವಾಲಾಗಿದೆ ಎಂದರು.ಕಸಾಪ ಶಿರಸಿ ಘಟಕದ ಅಧ್ಯಕ್ಷ ಜಿ.ಸುಬ್ರಾಯ ಭಟ್ ಬಕ್ಕಳ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಹಿರಿಯ ಸಾಮಾಜಿಕ ಕಾರ್ಯಕರ್ತ ರಾಚಪ್ಪ ಜೋಗಳೇಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ವಿಮಲಾ ಭಾಗ್ವತ್ ಪ್ರಾರ್ಥಿಸಿದರು. ಕೃಷ್ಣ ಪದಕಿ ಸ್ವಾಗತಿಸಿದರು. ವಾಸುದೇವ ಶಾನುಭಾಗ ನಿರೂಪಿಸಿದರು‌. ಕೆ.ಮಹೇಶ ವಂದಿಸಿದರು.