ಮಾಧ್ಯಮದ ಮುಂದೆ ಹೋದವರಿಗೆ ಮಠದ ಬಾಗಿಲು ಬಂದ್

| Published : Sep 03 2024, 01:36 AM IST

ಸಾರಾಂಶ

ಮಠದ ಘನತೆಯನ್ನು ಮಾಧ್ಯಮಗಳ ಮೂಲಕ ಬೀದಿಗೆ ತಂದ ಜನರಿಗೆ ಮಠದ ಬಾಗಿಲು ಬಂದ್‌ ಆಗಿದೆ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಸಿರಿಗೆರೆಮಠದ ಘನತೆಯನ್ನು ಮಾಧ್ಯಮಗಳ ಮೂಲಕ ಬೀದಿಗೆ ತಂದ ಜನರಿಗೆ ಮಠದ ಬಾಗಿಲು ಬಂದ್‌ ಆಗಿದೆ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.ಭರಮಸಾಗರ ಹೋಬಳಿ ವ್ಯಾಪ್ತಿಯ ಭಕ್ತರು ತಮಗೆ ನೈತಿಕ ಬೆಂಬಲ ಸೂಚಿಸಿ ಘೋಷಣಾ ಪತ್ರಗಳನ್ನು ನೀಡಿದ ಸಭೆಯಲ್ಲಿ ಮಾತನಾಡಿದ ಶ್ರೀಗಳು, ಈಗ ನಾಲ್ಕು ಗೋಡೆಗಳ ಮಧ್ಯೆ ಸಂಧಾನಕ್ಕೆ ಸಿದ್ಧರಾಗಿರುವವರು ಮಾಧ್ಯಮಗಳ ಮುಂದೆ ಹೋಗಿದ್ದೇಕೆ ಎಂದು ಪ್ರಶ್ನೆ ಮಾಡಿದರು.2000 ಕೋಟಿ ಬೆಲೆಯ ಆಸ್ತಿಯನ್ನು ನಾವು ನಮ್ಮ ಹೆಸರಿಗೆ ಮಾಡಿಕೊಂಡಿಲ್ಲ. ಮಠದ ಆಸ್ತಿಗಳು ಗುರುಶಾಂತ ಶ್ರೀ, ಕಾಶಿ ಗುರುಗಳು, ಮಲ್ಲಿಕಾರ್ಜುನ ಶ್ರೀಗಳ ಹೆಸರಿನಲ್ಲಿಯೂ ಇವೆ. ಈ ಯಾವ ಆಸ್ತಿಗಳನ್ನೂ ನಾವು ನಮ್ಮ ವೈಯುಕ್ತಿಕ ಖಾತೆಗೆ ವರ್ಗಾಯಿಸಿಕೊಂಡಿಲ್ಲ. ಇಂತಹ ಆಪಾದನೆ ಮಾಡುವ ಜನರು ಮಠದ ಭಕ್ತರ ಮುಂದೆ ಬಂದು ಸಾಬೀತುಪಡಿಸಲಿ ಎಂದು ಸವಾಲೆಸೆದರು.ಮಠದ ಟ್ರಸ್ಟ್‌ ಡೀಡ್‌ನಲ್ಲಿ ಆಸ್ತಿಯ ವಿಚಾರವಾಗಿ ಸ್ಪಷ್ಟವಾಗಿ ನಮೂದಾಗಿದೆ. ಮಠದ ಶ್ರೀಗಳು, ಚರಪಟ್ಟಾಧ್ಯಕ್ಷರು, ಶಾಖಾ ಮಠಗಳ ಆಸ್ತಿಗಳೆಲ್ಲವೂ ಮಠದ ಆಸ್ತಿಯೇ ಆಗಿರುತ್ತವೆ ಎಂಬುದನ್ನು ಹಲವು ಬಾರಿ ಹೇಳಿದ್ದರೂ ಕೆಲವರು ವಿನಾ ಕಾರಣ ತಮ್ಮ ಆರೋಪಗಳನ್ನು ಮುಂದುವರೆಸುತ್ತಲೇ ಇದ್ದಾರೆ ಎಂದರು.1823ರಲ್ಲಿ ಸಾಧು ಸದ್ಧರ್ಮ ಸಂಘದ ಬೈಲಾ ಜಾರಿಗೆ ಬಂದಿದೆ. 1977ರಲ್ಲಿ ಅದಕ್ಕೆ ಹಿರಿಯ ಗುರುಗಳು ಒಂದೆರಡು ತಿದ್ದುಪಡಿ ತಂದಿದ್ದಾರೆ. ನಮ್ಮ ಅಧಿಕಾರಾವಧಿಯಲ್ಲಿ ಒಂದೇ ಒಂದು ತಿದ್ದುಪಡಿಯೂ ಆಗಿಲ್ಲ. ಈ ಬೈಲಾದಲ್ಲಿ ಸ್ವಾಮೀಜಿಗಳು 60 ವರ್ಷಗಳಿಗೆ ನಿವೃತ್ತಿಯಾಗಬೇಕೆಂಬ ಯಾವುದೇ ನಿಬಂಧನೆ ಇಲ್ಲ ಎಂದರು.ಮಠದ ಹಿಂದಿನ ಕಾರ್ಯದರ್ಶಿಯ ಹೆಸರಿನಲ್ಲಿ ಉತ್ತಂಗಿ, ಮೈಸೂರು, ಸಿರಿಗೆರೆ, ಬೆನ್ನೂರು ಸರ್ಕಲ್ಲಿನಲ್ಲಿ ಆಸ್ತಿಗಳಿವೆ. ವಿರೋಧಿಸುವವರಿಗೆ ಮಠದ ಬಗ್ಗೆ ಕಾಳಜಿ ಇದ್ದರೆ ಆ ಆಸ್ತಿಗಳನ್ನು ಮಠಕ್ಕೆ ವರ್ಗಾಹಿಸಿಕೊಡುವಂತಹ ಕೆಲಸ ಮಾಡಲಿ ಎಂದರು. ರಾಷ್ಟ್ರೀಯ ಹೆದ್ದಾರಿಗೆ ಸ್ವಾಧೀನವಾದ ಜಮೀನಿನ ಪರಿಹಾರದ ಹಣ ಸುಮಾರು ₹40 ಲಕ್ಷ ಹಿಂದಿನ ಕಾರ್ಯದರ್ಶಿಯಿಂದ ಬರಬೇಕಾಗಿದೆ. ವಿನಾಕಾರಣ ದೂಷಿಸುವ ಜನರು ಈ ಆಸ್ತಿಗಳು ಮಠಕ್ಕೆ ಸೇರುವಂತೆ ಮಾಡಲಿ ಎಂದರು.ಮಠಕ್ಕೆ ತನ್ನದೇ ಆದ ಘನತೆ ಇರುವಂತೆ ಭಕ್ತರುಗೆ ಶ್ರದ್ದಾಭಕ್ತಿ ತೋರಿದ್ದಾರೆ. ನೀವು ಅವುಗಳನ್ನು ತುಚ್ಛೀಕರಿಸುವ ಕೆಲಸ ಮಾಡುತ್ತಿದ್ದೀರಿ. ಈ ಪ್ರವೃತ್ತಿಯನ್ನು ನಿಲ್ಲಿಸಿ. ಪ್ರವಾಹದ ವಿರುದ್ಧ ನಡೆದವರು ಯಾರೂ ಜಯಿಸಿಲ್ಲ. ನಿಮ್ಮ ನಡವಳಿಕೆಯನ್ನು ಸರಿಪಡಿಸಿಕೊಂಡು ವ್ಯಕ್ತಿತ್ವವನ್ನು ಬದಲಿಸಿಕೊಳ್ಳಿ. ನೀವು ಮಠ ಮತ್ತು ಶ್ರೀಗಳ ವಿರುದ್ಧ ಆಪಾದನೆ ಮಾಡುತ್ತಿದ್ದಂತೆಯೇ ಭಕ್ತರ ಸಂಘಟನೆ, ಭಕ್ತಿ, ನಿಷ್ಠೆಗಳೂ ಬಲಗೊಂಡಿವೆ ಎಂದು ಶ್ರೀಗಳು ತಿಳಿಸಿದರು.ಓಬವ್ವನಾಗತಿಹಳ್ಳಿ ಮಂಜುನಾಥ್‌, ಹಂಪನೂರು ಚಿದಾನಂದ್‌, ವಿಜಾಪುರದ ಬಸವರಾಜಪ್ಪ, ಜಿ.ಬಿ. ತೀರ್ಥಪ್ಪ ಮುಂತಾದವರು ಮಾತನಾಡಿದರು.ವೇದಿಕೆಯ ಮೇಲೆ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ನಿರಂಜನ್‌, ಕೋಗುಂಡೆ ಮಂಜುನಾಥ್‌, ಕೆರೆ ಸಮಿತಿ ಅಧ್ಯಕ್ಷ ಚೌಲಿಹಳ್ಳಿ ಶಶಿ ಪಾಟೀಲ್‌, ವಕೀಲ ಸೋಮಶೇಖರಪ್ಪ, ಗುಂಡಗತ್ತಿ ಮಂಜುನಾಥ್‌ ಮುಂತಾದವರು ಉಪಸ್ಥಿತರಿದ್ದರು.