ಈ ಆಧುನಿಕ ಯುಗದಲ್ಲಿ ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯ. ಅದೇ ವೇಳೆ ಆತ ಪರಂಪರೆಯ, ಸಂಸ್ಕೃತಿಯ ಮೌಲ್ಯಗಳನ್ನು ಹೊಂದುವುದೂ ಕೂಡ ಅಗತ್ಯ. ಈ ನಿಟ್ಟಿನಲ್ಲಿ ಹೆಗ್ಗೋಡಿನ ಚರಕ ಸಂಸ್ಥೆ ಹಲವು ದಶಕಗಳಿಂದ ಕೆಲಸ ಮಾಡುತ್ತಾ ಬಂದಿದೆ. ಇದನ್ನು ಪ್ರೋತ್ಸಾಹಿಸುವ ಕೆಲಸ ಸಮಾಜ- ಸರ್ಕಾರಗಳು ಮಾಡಬೇಕಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಭಾರತೀಯ ಸಂಸ್ಕೃತಿಯಲ್ಲಿ ಹಲವಾರು ಆಚರಣೆಗಳಿದ್ದು, ಅವುಗಳಲ್ಲಿ ಮೌಢ್ಯವೆಷ್ಟು? ವೈಚಾರಿಕತೆ ಎಷ್ಟು? ಎಂದು ಅವಲೋಕಿಸಿ ಆಚರಿಸುವುದರಿಂದ ಆರೋಗ್ಯ ಮತ್ತು ಸಂಸ್ಕೃತಿ ಎರಡನ್ನೂ ಕಾಪಾಡಿಕೊಳ್ಳಲು ಸಾಧ್ಯವಿದೆ ಎಂದು ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.ವಿಜಯನಗರದ ಜಗನ್ನಾಥ ಸೆಂಟರ್ ಫಾರ್ ಆರ್ಟ್ ಅಂಡ್ ಕಲ್ಚರ್ (ಜೆಸಿಎಸಿ) ನಲ್ಲಿ ಸಾಗರ ತಾಲೂಕಿನ ಹೆಗ್ಗೋಡು-ಭೀಮನಕೋಣೆಯ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘವು ಹಮ್ಮಿಕೊಂಡಿರುವ ಮೂರು ದಿನಗಳ ನೈಸರ್ಗಿಕ ಬಣ್ಣದ ಅಪ್ಪಟ ಹತ್ತಿ ಕೈಮಗ್ಗ ಉತ್ಪನ್ನಗಳ ಪ್ರದರ್ಶನ, ಮಾರಾಟ ಮತ್ತು ಕೊಡು-ಕೊಳ್ಳುವವರ ಸಮಾವೇಶಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ಈ ಆಧುನಿಕ ಯುಗದಲ್ಲಿ ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯ. ಅದೇ ವೇಳೆ ಆತ ಪರಂಪರೆಯ, ಸಂಸ್ಕೃತಿಯ ಮೌಲ್ಯಗಳನ್ನು ಹೊಂದುವುದೂ ಕೂಡ ಅಗತ್ಯ. ಈ ನಿಟ್ಟಿನಲ್ಲಿ ಹೆಗ್ಗೋಡಿನ ಚರಕ ಸಂಸ್ಥೆ ಹಲವು ದಶಕಗಳಿಂದ ಕೆಲಸ ಮಾಡುತ್ತಾ ಬಂದಿದೆ. ಇದನ್ನು ಪ್ರೋತ್ಸಾಹಿಸುವ ಕೆಲಸ ಸಮಾಜ- ಸರ್ಕಾರಗಳು ಮಾಡಬೇಕಿದೆ ಎಂದರು.ಮೈಸೂರು ಬುಕ್ ಕ್ಲಬ್ಸ್ ಚಾರಿಟಬಲ್ ಟ್ರಸ್ಟ್‌ನ ಸಂಸ್ಥಾಪಕಿ ಶುಭಾ ಸಂಜಯ್ ಅರಸ್ ಮಾತನಾಡಿ, ಚರಕ ಎಂದಾಕ್ಷಣ ಗಾಂಧೀಜಿ ನೆನಪಾಗುತ್ತಾರೆ. ಸ್ವಾತಂತ್ರ್ಯ ಚಳವಳಿ ಕಣ್ಮುಂದೆ ಬರುತ್ತದೆ. ಇದೇ ಚರಕ ಇವತ್ತು ಸುಸ್ಥಿರತೆಯ ಸಂಕೇತವಾಗಿ, ಕೌಶಲ್ಯದ ಪ್ರತೀಕವಾಗಿ ನೂರಾರು ಮಹಿಳೆಯರ ಬದುಕನ್ನು ರೂಪಿಸುತ್ತಿರುವುದು ಹೆಮ್ಮೆ ತಂದಿದೆ ಎಂದರು.
ಆರೋಗ್ಯ ಬಟ್ಟೆಗಳ ಅನಾವರಣ:ಚರಕ ಸಂಸ್ಥಾಪಕ, ರಂಗಕರ್ಮಿ ಪ್ರಸನ್ನ ಮಾತನಾಡಿ, ಚರಕ ಹಲವು ಬಗೆಯ ಆವಿಷ್ಕಾರದಲ್ಲಿ ತೊಡಗಿದ್ದು, ಆರೋಗ್ಯಕ್ಕೆ ಪೂರಕವಾದ ಆರಿಶಿಣ ಮತ್ತು ಬೇವಿನ ಬಣ್ಣದಲ್ಲಿ ಮಕ್ಕಳ ಒಳಬಟ್ಟೆ, ಮಠಾಧೀಶರು ತೊಡುವ ಖಾಷಾಯ ಬಟ್ಟೆಗಳನ್ನು ಅನಾವರಣಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕ ಬಿ.ಎಸ್. ಸೋಮಶೇಖರ್ ಇದ್ದರು.ಚರಕದ ಅಧ್ಯಕ್ಷೆ ಮಹಾಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಚರಕದ ಸಿಇಒ ಟೆರೆನ್ಸ್ ಪೀಟರ್, ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಕೃಷ್ಣ, ಮಧುರಾ ಇದ್ದರು. ವಿನ್ಯಾಸ ವಿಭಾಗದ ಮುಖ್ಯಸ್ಥೆ ಪದ್ಮಶ್ರೀ ನಿರೂಪಿಸಿದರು.
ಚರಕಕ್ಕೆ ರಿಬೇಟ್ ಸೌಲಭ್ಯಕ್ಕೆ ಪ್ರಸ್ತಾವನೆ:ಚರಕಕ್ಕೆ ಸರ್ಕಾರದ ರಿಬೇಟ್ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಸರ್ಕಾರಕ್ಕೆ ಶೀಘ್ರ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಬೆಂಗಳೂರು ದಕ್ಷಿಣ ವಲಯದ ಜಂಟಿ ನಿರ್ದೇಶಕ ಬಿ.ಆರ್. ಯೋಗೇಶ್ ಭರವಸೆ ನೀಡಿದರು.
ಚರಕಕ್ಕೆ ಇಲಾಖೆಯ ಸೌಲಭ್ಯ ಪಡೆಯಬೇಕಾದರೆ ಈಗಿರುವ ನಿಬಂಧನೆಗಳಿಗೆ ತಿದ್ದುಪಡಿ ತರಬೇಕಾಗಿದೆ. ಈ ನಿಟ್ಟಿನಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ತುರ್ತು ಗಮನ ಹರಿಸಲಿದೆ ಎಂದರು.ಬದನವಾಳದಲ್ಲಿ ಗ್ರಾಮೀಣ ಸಂಸ್ಕೃತಿ ಅರಳಲಿ:
ಬದನವಾಳದಲ್ಲಿ ಗುಡಿ ಕೈಗಾರಿಕೆ ಸಂಸ್ಕೃತಿಯೇ ಉಳಿಯಬೇಕು ಎಂದು ಸ್ವಾಮೀಜಿ ಪ್ರತಿಪಾದಿಸಿದರು.ಬದನವಾಳದಲ್ಲಿ ಗುಡಿ ಕೈಗಾರಿಕೆ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಪ್ರಸನ್ನ ಅವರ ನೇತೃತ್ವದಲ್ಲಿ ಕೈಗೊಂಡ ಸತ್ಯಾಗ್ರಹ ಕಾರಣದಿಂದ ಸರ್ಕಾರ ಈಚೆಗೆ ಅನುದಾನ ಬಿಡುಗಡೆ ಮಾಡಿದೆ. ಅದೇ ಉದ್ದೇಶಕ್ಕೆ ಹಣ ವೆಚ್ಚವಾಗಬೇಕು ಎಂದು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಗ್ರಹಿಸಿದರು.
ಈಗಾಗಲೇ ಈ ಕುರಿತಂತೆ ಸಚಿವ ಎಚ್.ಕೆ.ಪಾಟೀಲ, ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್.ಪಾಟೀಲ ಅವರೊಂದಿಗೆ ತಾವು ಚರ್ಚಿಸಿದ್ದು, ಈ ಕುರಿತಂತೆ ಶೀಘ್ರದಲ್ಲೇ ಸಮಾನಮನಸ್ಕರ ಸಮಾಲೋಚನಾ ಸಭೆ ನಡೆಸಲಾಗುವುದು ಎಂದರು.