ನಿಂಬೆ ಹಾಗೂ ನಿಂಬೆ ಜಾತಿಯ ಬೆಳೆಗಳಲ್ಲಿ ರೋಗ ನಿರೋಧಕ ಶಕ್ತಿಯೊಂದಿಗೆ ಬೆಳೆಯು ಆರೋಗ್ಯಕವಾಗಿ ಬೆಳೆದು ಹೆಚ್ಚಿನ ಇಳುವರಿ ನೀಡಬೇಕಾದರೆ ಬೆಳೆಗಳಿಗೆ ಸಮತೋಲನವಾದ ಲಘು ಪೋಷಕಾಂಶಗಳನ್ನು ಒದಗಿಸುವುದು ಅಗತ್ಯ.
ಬಿ.ಶೇಖರ್ ಗೋಪಿನಾಥಂ
ಕನ್ನಡಪ್ರಭ ವಾರ್ತೆ ಮೈಸೂರುನಿಂಬೆ ಹಾಗೂ ನಿಂಬೆ ಜಾತಿಯ ಬೆಳೆಗಳಲ್ಲಿ ರೋಗ ನಿರೋಧಕ ಶಕ್ತಿಯೊಂದಿಗೆ ಬೆಳೆಯು ಆರೋಗ್ಯಕವಾಗಿ ಬೆಳೆದು ಹೆಚ್ಚಿನ ಇಳುವರಿ ನೀಡಬೇಕಾದರೆ ಬೆಳೆಗಳಿಗೆ ಸಮತೋಲನವಾದ ಲಘು ಪೋಷಕಾಂಶಗಳನ್ನು ಒದಗಿಸುವುದು ಅಗತ್ಯ.
ಮಣ್ಣಿನಲ್ಲಿ ಸಾವಯವ ಅಂಶದ ಕೊರತೆ, ರಸಗೊಬ್ಬರಗಳ ಹೆಚ್ಚು ಬಳಕೆ, ಹೆಚ್ಚು ಇಳುವರಿ ನೀಡುವ ಬೆಳೆಗಳ ತಳಿಗಳು, ಹೈಬ್ರಿಡ್ ಹಾಗೂ ಅಂಗಾಂಶ ಕೃಷಿಯಿಂದ ಅಭಿವೃದ್ಧಿಗೊಳಿಸಿದ ಬೆಳೆಗಳನ್ನು ಬೆಳೆಯುವುದರಿಂದಾಗಿ ಮಣ್ಣಿಗೆ ಲಘು ಪೋಷಕಾಂಶಗಳ ಅವಶ್ಯಕತೆ ಹೆಚ್ಚಾಗುತ್ತಿದೆ.ಹಾಗೆಯೇ ಕ್ಷೀಣಿಸುತ್ತಿರುವ ಮಣ್ಣಿನ ಗುಣಮಟ್ಟದಿಂದಾಗಿ ಲಘು ಪೋಷಕಾಂಶಗಳನ್ನು ಮಣ್ಣಿಗೆ ನೀಡಿದರೂ ಬೆಳೆಗಳಿಗೆ ಅವು ಲಭ್ಯವಾಗುವುದು ನಿಧಾನವಾಗುತ್ತಿದೆ. ಹೀಗಾಗಿ, ಗುಣಮಟ್ಟದ ಬೆಳೆ ಹಾಗೂ ಹೆಚ್ಚಿನ ಇಳುವರಿಗಾಗಿ ಸಮಗ್ರ ಪೋಷಕಾಂಶಗಳ ನಿರ್ವಹಣೆಗಾಗಿ ನಿಂಬೆ ಹಾಗೂ ನಿಂಬೆ ಜಾತಿಯ ಬೆಳೆಯ ಎಲೆಗಳಿಗೆ ಸಿಂಪಡಿಸಬಹುದಾದ ಅರ್ಕಾ ಸಿಟ್ರಸ್ ಸ್ಪೆಷಲ್ ಅತ್ಯಂತ ಉಪಯುಕ್ತವಾಗಿದೆ.
ಬಳಕೆಯ ವಿಧಾನ:75 ಗ್ರಾಂ ಸಿಟ್ರಸ್ ಸ್ಪೆಷಲ್+1 ಶ್ಯಾಂಪೂ ಸ್ಯಾಚೆಟ್ + 2 ನಿಂಬೆ ಹಣ್ಣಿನ ರಸವನ್ನು 15 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು. ಹೂ ಬಿಡುವ ಮೊದಲು ಹಾಗೂ ಕಾಯಿ ಕಚ್ಚಿದ ನಂತರ ಪ್ರತಿ ತಿಂಗಳಿಗೊಮ್ಮೆ ಕೊಯ್ಲು ಮಾಡುವ ಒಂದು ತಿಂಗಳಿನ ಮೊದಲಿನವರೆಗೂ ಸಿಂಪರಣೆ ಮಾಡಬೇಕು.
ಈ ಸಿಂಪರಣೆಯನ್ನು ಬೆಳಗ್ಗೆ ಸೂರ್ಯ ಪ್ರಖರವಾಗುವ ಮೊದಲು ಎಲೆಗಳ ಕೆಳ ಮತ್ತು ಮೇಲ್ಭಾಗ ಹಾಗೂ ಕಾಯಿಗಳಿಗೆ ಸಿಂಪಡಿಸಿದಲ್ಲಿ ಹೆಚ್ಚು ಲಾಭದಾಯಕ. ಅರ್ಕಾ ಸಿಟ್ರಸ್ ಸ್ಪೆಷಲ್ ಅನ್ನು ಇತರೆ ಕೀಟ, ಶಿಲೀಂಧ್ರ, ಬ್ಯಾಕ್ಟೀರಿಯಾ ನಾಶಕ ಹಾಗೂ ಇತ್ಯಾದಿಯೊಂದಿಗೆ ಮಿಶ್ರ ಮಾಡಿ ಸಿಂಪಡಿಸಬಾರದು.ಅರ್ಕಾ ಸಿಟ್ರಸ್ ಸ್ಪೆಷಲ್ ಸಿಂಪರಣೆಯಿಂದ ಲಘು ಪೋಷಕಾಂಶದ ಕೊರತೆ ಬಹು ಬೇಗನೆ ನೀಗುವುದು, ಕಡಿಮೆ ರಸಗೊಬ್ಬರದ ಬಳಕೆ, ಹಣ್ಣುಗಳ ಶೀಘ್ರ ಬೆಳವಣಿಗೆ, ಹೆಚ್ಚಿನ ಗೊಂಚಲು ಹಾಗೂ ಆಕರ್ಷಕ ಬಣ್ಣ ಪಡೆಯಬಹುದು ಎಂದು ಮೈಸೂರು ತಾಲೂಕು ನಾಗನಹಳ್ಳಿಯ ವಿಸ್ತರಣಾ ಶಿಕ್ಷಣಾ ಘಟಕ, ಸಾವಯವ ಕೃಷಿ ಸಂಶೋಧನಾ ಕೆಂದ್ರದ ತೋಟಗಾರಿಕೆ ಸಹಾಯಕ ಪ್ರಾಧ್ಯಾಪಕ ಡಾ. ಶಿವಕುಮಾರ್ ತಿಳಿಸಿದ್ದಾರೆ.
ರೈತರು ಹೆಚ್ಚಿನ ಮಾಹಿತಿಗಾಗಿ ಮೊ. 96328 59590 ಸಂಪರ್ಕಿಸಬಹುದು.