ರಾಮನಗರ: ವಿದ್ಯಾರ್ಥಿಗಳಲ್ಲಿ ಶಿಸ್ತು, ಸೇವಾ ಮನೋಭಾವ, ನಾಯಕತ್ವದ ಗುಣಗಲ ಬೆಳೆವಣಿಗೆಗೆ ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿ. ಪ್ರತಿ ವಿದ್ಯಾರ್ಥಿಯೂ ಶಿಬಿರದ ಅನುಭವ ಪಡೆದರೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನ ಆಡಳಿತಾಧಿಕಾರಿ ಪ್ರೊ. ಕೆ.ಆರ್.ಏಜಾಜ್ ಅಹಮದ್ ಕಿವಿಮಾತು ಹೇಳಿದರು.

ತಾಲೂಕಿನ ಕೂಟಗಲ್ ಹೋಬಳಿ ಹೊಂಬೇಗೌಡನದೊಡ್ಡಿ ಸರ್ಕಾರಿ ಶಾಲೆಯಲ್ಲಿ ಗೌಸಿಯಾ ಎಂಜಿನಿಯರಿಂಗ್ ಕಾಲೇಜು ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರಕ್ಕೆ ಚಾಲನೆ ನೀಡಿದ ಅವರು, ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಬದ್ಧತೆ ಮೂಡಿಸಲು ಹಾಗೂ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕಾಗಿ ಎನ್‌ಎಸ್‌ಎಸ್‌ ಶಿಬಿರ ನಡೆಸಲಾಗುತ್ತಿದೆ ಎಂದರು.

ವಿದ್ಯಾರ್ಥಿಗಳಿಗೆ ಶಿಕ್ಷಣ ಹೇರಿಕೆ ಆಗಬಾರದು, ಪಠ್ಯ ಶಿಕ್ಷಣ ಜತೆ ಸಮುದಾಯದ ಪರಿಚಯ, ಸ್ವಚ್ಛತೆ ಅರಿವು, ನಮ್ಮಲ್ಲಿನ ಸಂಸ್ಕೃತಿ ಪ್ರದರ್ಶನಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ಸಹ ಭೋಜನ, ಸಮಗ್ರತೆ ಪರಿಕಲ್ಪನೆ ಹೀಗೆ ಹಲವು ಚಿಂತನೆಗಳಡಿ ಶಿಬಿರ ನಡೆಯುತ್ತದೆ. ಇದನ್ನು ಅರ್ಥ ಮಾಡಿಕೊಂಡು ವಿದ್ಯಾರ್ಥಿಗಳು ಎಲ್ಲ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.

ಸಮಾಜ ಮುಖಿಯಾಗಲು ಪ್ರೇರಣೆ :

ಪ್ರಾಂಶುಪಾಲ ಡಾ.ಎನ್.ಎಸ್.ಕುಮಾರ್ ಮಾತನಾಡಿ, ಎನ್ನೆಸ್ಸೆಸ್‌ ಶಿಬಿರ ಅನುಭವ ಆಧಾರಿತ ಶಿಕ್ಷಣ ನೀಡುತ್ತದೆ. ಗ್ರಾಮೀಣ ಬದುಕು, ಸಂಸ್ಕೃತಿಯ ಪರಿಚಯ ಆಗಲಿದೆ. ಶಿಬಿರಾರ್ಥಿಗಳ ವ್ಯಕ್ತಿತ್ವ ಬೆಳವಣಿಗೆ ಹೊಂದಲಿದೆ. ಎನ್ನೆಸ್ಸೆಸ್‌ ಶಿಬಿರಾರ್ಥಿಗಳು ಭವಿಷ್ಯದಲ್ಲಿ ಸಮಾಜ ಮುಖಿ ಕೆಲಸ ಮಾಡಲು ಪ್ರೇರಣೆ ಸಿಗಲಿದೆ ಎಂದರು.


ಕಲಿಕೆ ವಿದ್ಯಾರ್ಥಿ, ಶಿಕ್ಷಕರ ನಡುವಿನ ಕೊಂಡಿ ಆಗಿರದೆ ಸಮುದಾಯದ ನಡುವೆಯೂ ರಚನಾತ್ಮಕ ಸಂಬಂಧ ಏರ್ಪಡಬೇಕೆಂಬ ಆಶಯದೊಂದಿಗೆ ಶಿಬಿರಗಳು ನಡೆಸಲಾಗುತ್ತದೆ. ಗ್ರಾಮದ ಸ್ವಚ್ಛತೆ ಜತೆ ಗ್ರಾಮೀಣರಲ್ಲಿ ಆರೋಗ್ಯ ಅರಿವು, ಮೌಢ್ಯತೆ ಹೋಗಲಾಡಿಸುವುದು ಹೀಗೆ ಹಲವು ಮಾರ್ಗದಲ್ಲಿ ಯುವ ಜನತೆ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸಾಮಾಜಿಕ ಹೊಣೆಗಾರಿಕೆ ಕಲಿಸುತ್ತದೆ:

ಎನ್ನೆಸ್ಸೆಸ್‌ ಅಧಿಕಾರಿ ಡಾ.ಸೈಫುಲ್ಲಾ ಖಾನ್ ಮಾತನಾಡಿ, ಸದೃಢ ರಾಷ್ಟ್ರ ನಿರ್ಮಾಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪಾತ್ರ ಮಹತ್ವದ್ದಾಗಿದೆ. ಇದು ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಸಮಾನತೆ, ಭಾವೈಕ್ಯತೆ ಬೆಳೆಸುತ್ತದೆ. ಸೇವಾ ಮನೋಭಾವನೆ, ಸಾಮಾಜಿಕ ಹೊಣೆಗಾರಿಕೆ, ಶಿಸ್ತು, ಸಂಯಮ, ಸಮಯ ಪ್ರಜ್ಞೆಯನ್ನೂ ಕಲಿಸಿಕೊಡುತ್ತದೆ ಎಂದರು.

ಹೊಂಬೇಗೌಡನದೊಡ್ಡಿ ಗ್ರಾಮದಲ್ಲಿ ನಡೆಯುವ 7 ದಿನಗಳ ಶಿಬಿರದಲ್ಲಿ ಜು.23ರಂದು ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಜು.24ರಂದು ತಂಬಾಕು - ಡ್ರಗ್ಸ್ ಕುರಿತು ಅರಿವು, ಜು.25ರಂದು ಯೋಗಾ ಮತ್ತು ಕ್ರೀಡಾ ಕಾರ್ಯಕ್ರಮ, ಜು.26ರಂದು ಪರಿಸರ ಜಾಗೃತಿ, ಜು.27ರಂದು ವಿಜ್ಞಾನ ವಸ್ತು ಪ್ರದರ್ಶನ, ಜು.28ರಂದು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ.

ಪ್ರಾಧ್ಯಾಪಕರಾದ ಡಾ.ಅಪ್ಸರ್ ಪಾಷಾ, ಡಾ.ಟಿ.ವೆಂಕಟೇಶ್, ಡಿಪ್ಲೋಮಾ ವಿಭಾಗದ ಮುಖ್ಯಸ್ಥೆ ಲತಾಮಣಿ, ಯೋಗ ತರಬೇತುದಾರ ಸತೀಶ್, ಶ್ರೀ ವಿನಾಯಕ ಪ್ರೌಢಶಾಲೆ ಮುಖ್ಯಶಿಕ್ಷಕ ಶಿವಲಿಂಗಯ್ಯ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಜಯರಾಮು ಮತ್ತಿತರರು ಉಪಸ್ಥಿತರಿದ್ದರು.

22ಕೆಆರ್ ಎಂಎನ್ 1.ಜೆಪಿಜಿ

ರಾಮನಗರ ತಾಲೂಕಿನ ಕೂಟಗಲ್ ಹೋಬಳಿ ಹೊಂಬೇಗೌಡನದೊಡ್ಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಗೌಸಿಯಾ ಎಂಜಿನಿಯರಿಂಗ್ ಕಾಲೇಜು ಆಯೋಜಿಸಿರುವ 7 ದಿನಗಳ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದಲ್ಲಿ ಅತಿಥಿಗಳು ಪಾಲ್ಗೊಂಡಿರುವುದು.