Girija Ramesh is the new president of Kembhavi Municipality.

-ಪ್ರಿಯಾ ರಾಮನಗೌಡ ವಿರುದ್ಧ ಆಡಳಿತ ಪಕ್ಷದ ಸದಸ್ಯರ ಅವಿಶ್ವಾಸ ನಿರ್ಣಯದಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನ

-----

ಕನ್ನಡಪ್ರಭ ವಾರ್ತೆ ಕೆಂಭಾವಿ

ಪುರಸಭೆಯಲ್ಲಿ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ನೂತನ ಅಧ್ಯಕ್ಷೆಯಾಗಿ ನಿರೀಕ್ಷೆಯಂತೆ ವಾರ್ಡ ನಂ.೧ರ ಗಿರಿಜಾ ರಮೇಶ ಕೊಡಗಾನೂರ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದರು.

ಈ ಹಿಂದೆ ಅಧ್ಯಕ್ಷೆಯಾಗಿದ್ದ ಪ್ರಿಯಾ ರಾಮನಗೌಡ ಪೊಲೀಸ್‌ ಪಾಟೀಲ ಅವರ ವಿರುದ್ಧ ಆಡಳಿತ ಪಕ್ಷದ ಸದಸ್ಯರೆ ಮಂಡಿಸಿದ್ದ ಅವಿಶ್ವಾಸ ನಿರ್ಣಯದಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು. ಮುಂಜಾನೆ ೧೦ ಗಂಟೆಯಿಂದ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿ ಮಧ್ಯಾಹ್ನ ೧೨ ಗಂಟೆಗೆ ಚುನಾವಣೆ ಪ್ರಕ್ರಿಯೆ ಸಂಪೂರ್ಣಗೊಂಡಿತು.

೨೩ ಸದಸ್ಯ ಬಲದ ಪುರಸಭೆಯಲ್ಲಿ ೧೯ ಕಾಂಗ್ರೆಸ್‌ ಸದಸ್ಯರಿದ್ದರೆ ೪ ಜನ ಸದಸ್ಯರು ಬಿಜೆಪಿ ಪಕ್ಷದವರಿದ್ದು ಬುಧವಾರ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಒಟ್ಟು ೧೮ ಜನ ಸದಸ್ಯರು ಹಾಜರಿದ್ದರು. ಅಧ್ಯಕ್ಷ ಸ್ಥಾನಕ್ಕೆ ಒಂದೆ ಒಂದು ನಾಮಪತ್ರ ಸಲ್ಲಿಸಿದ್ದರಿಂದ ಗಿರಿಜಾ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿಯೂ ಆದ ಉಪ ವಿಭಾಗಾಧಿಕಾರಿ ಶ್ರೀಧರ ಗೊಟೂರ ತಿಳಿಸಿದರು.

ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಗಿರಿಜಾ ಅವರನ್ನು ಚುನಾವಣಾಧಿಕಾರಿ ಶ್ರೀಧರ ಗೊಟೂರ ಅವರು ಪುಸ್ತಕ, ಹೂಗುಚ್ಚ ನೀಡಿ ಅಭಿನಂದಿಸಿದರು.

ಉಪಾಧ್ಯಕ್ಷೆ ಲಕ್ಷ್ಮಿಬಾಯಿ ಕಂಬಾರ, ತಹಸೀಲ್ದಾರ ಎಸ್. ಎ. ಸರಕಾವಸ್, ಮುಖ್ಯಾಧಿಕಾರಿ ಪ್ರಕಾಶ ಬಾಗಲಿ ಇದ್ದರು. ಪಿಎಸ್‌ಐ ಅಮೋಜ ಕಾಂಬಳೆ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಸಂಭ್ರಮಾಚರಣೆ-ನೂತನ ಅಧ್ಯಕ್ಷೆಯಾಗಿ ಗಿರಿಜಾ ರಮೇಶ ಕೊಡಗಾನೂರ ಅವರು ಅವಿರೋಧವಾಗಿ ಆಯ್ಕೆಯಾಗುತ್ತಿದ್ದಂತೆ ಇತ್ತ ಹೊರಗೆ ಅಪಾರ ಸಂಖ್ಯೆ ಕಾಂಗ್ರೆಸ್‌ ಕಾರ್ಯಕರ್ತರು ನೂತನ ಅಧ್ಯಕ್ಷರಿಗೆ ಬೃಹತ್ ಹೂಮಾಲೆ ಸನ್ಮಾನಿಸಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮ ಆಚರಿಸಿದರು.

ಜಿಪಂ ಮಾಜಿ ಅದ್ಯಕ್ಷ ಸಿದ್ಧನಗೌಡ ಪೊಲೀಸ್ ಪಾಟೀಲ, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಬಸನಗೌಡ ಹೊಸಮನಿ ಯಾಳಗಿ, ಡಿಸಿಸಿ ಬ್ಯಾಂಕ್ ನಿದೇರ್ಶಕ ಬಸವರಾಜ ಚಿಂಚೊಳಿ, ಬಾಪುಗೌಡ ಪಾಟೀಲ, ಕಾಂಗ್ರೆಸ್‌ ಜಿಲ್ಲಾ ಉಪಾಧ್ಯಕ್ಷ ಮಹಿಪಾಲರೆಡ್ಡಿ ಡಿಗ್ಗಾವಿ, ರಮೇಶ ಕೊಡಗಾನೂರ, ಖಾಜಾಪಟೇಲ ಕಾಚೂರ, ಸಾಹೇಬಲಾಲ ಆಂದೇಲಿ, ಶಿವಪ್ಪ ಕಂಬಾರ ಇದ್ದರು.

ಫೋಟೊ

ಕೆಂಭಾವಿ ಪುರಸಭೆಗೆ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದ ಗಿರಿಜಾ ರಮೇಶ ಕೊಡಗಾನೂರ ಅವರಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೃಹತ್ ಹೂಮಾಲೆ ಅಭಿನಂದಿಸಿದರು. ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಕಂಬಾರ, ಸಿದ್ಧನಗೌಡ ಪೊಲೀಸ್ ಪಾಟೀಲ, ಬಸನಗೌಡ ಯಾಳಗಿ, ಬಾಪುಗೌಡ ಪಾಟೀಲ ಇದ್ದರು.