ಇಲ್ಲಿಯ ಸುಪ್ರಸಿದ್ಧ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರೆ ಜ. ೨೩ರಿಂದ ೩೧ರ ವರೆಗೆ ಒಂಬತ್ತು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಭಟ್ಕಳ
ಇಲ್ಲಿಯ ಸುಪ್ರಸಿದ್ಧ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರೆ ಜ. ೨೩ರಿಂದ ೩೧ರ ವರೆಗೆ ಒಂಬತ್ತು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ.ಸೋಡಿಗದ್ದೆಯ ಮಹಾಸತಿ ಜಾತ್ರೆ ತನ್ನದೇ ಆದ ಮಹತ್ವ ಹೊಂದಿದೆ. ಸೋಡಿಗದ್ದೆ ಮಹಾಸತಿಗೆ ಭಟ್ಕಳದ ಭಕ್ತರಷ್ಟೇ ಅಲ್ಲದೇ ನೆರೆಯ ಉಡುಪಿ, ಶಿವಮೊಗ್ಗ ಜಿಲ್ಲೆಯ ಭಕ್ತರೂ ಶ್ರದ್ಧಾಭಕ್ತಿಯಿಂದ ನಡೆದುಕೊಳ್ಳುತ್ತಿರುವುದು ವಿಶೇಷ. ಜಾತ್ರೆಯ ಸಂದರ್ಭದಲ್ಲಿ ಮಹಾಸತಿಗೆ ಹೂವಿನ ಪೂಜೆ, ಗೊಂಬೆ ಹರಕೆ, ಕೆಂಡಸೇವೆ, ತುಲಾಭಾರ ಸೇವೆ ಮುಂತಾದವುಗಳು ನಡೆಯಲಿವೆ. ಜಾತ್ರೆಯ ಆರಂಭ ದಿನದಂದು (ಜ. ೨೩) ಹಾಲಹಬ್ಬ ನಡೆಯಲಿದೆ. ಜ. ೨೪ರಂದು ನಡೆಯುವ ಕೆಂಡಸೇವೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡು ತಮ್ಮ ಹರಕೆ ತೀರಿಸುತ್ತಾರೆ. ಜ. ೨೫, ೨೬, ೨೭ರಂದು ತುಲಾಭಾರ ಸೇವೆ ನಡೆಯಲಿದೆ. ಜಾತ್ರೆ ಆರಂಭದ ದಿನದಿಂದ ಜ. ೩೧ರ ವರೆಗೂ ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ತಮ್ಮ ಸಂಕಷ್ಟದ ಕಾಲದಲ್ಲಿ ಹೇಳಿಕೊಂಡ ಹರಕೆಯನ್ನು ಭಕ್ತರು ಜಾತ್ರೆ ಸಂದರ್ಭದಲ್ಲಿ ದೇವಿಗೆ ಸಮರ್ಪಿಸುವುದು ಇಲ್ಲಿನ ವಾಡಿಕೆ. ಬೈಂದೂರು, ಕುಂದಾಪುರ ಮತ್ತಿತರ ಪ್ರದೇಶಗಳ ಕೆಲವು ಭಕ್ತರು ಇಲ್ಲಿಗೆ ಹರಕೆಯಂತೆ ಎತ್ತಿನಗಾಡಿಗಳಲ್ಲಿ ಕುಟುಂಬ ಸಮೇತ ಬಂದು ಮಹಾಸತಿಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸುತ್ತಾರೆ. ಸೋಡಿಗದ್ದೆ ಮಹಾಸತಿ ಅಮ್ಮ ಶಕ್ತಿ ದೇವತೆಯಾಗಿದ್ದಾಳೆ ಎನ್ನುವ ನಂಬಿಕೆ ಭಕ್ತರದ್ದಾಗಿದೆ. ಹೀಗಾಗಿಯೇ ಒಂಬತ್ತು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಭಕ್ತಿಪೂರ್ವಕವಾಗಿ ಪಾಲ್ಗೊಂಡು ಪೂಜೆ ಸಲ್ಲಿಸುತ್ತಾರೆ. ದೇವಸ್ಥಾನದಲ್ಲಿ ಭಕ್ತರಿಗೆ ಸುಸೂತ್ರ ಪೂಜೆ-ಪುನಸ್ಕಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಜಾತ್ರಾ ಪ್ರಯುಕ್ತ ಯಕ್ಷಗಾನ, ವಿವಿಧ ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮಗಳೂ ಜರುಗಲಿವೆ. ಕಂದಾಯ ಇಲಾಖೆಯ ಸಿಬ್ಬಂದಿ, ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಊರ ಗ್ರಾಮಸ್ಥರು ಸಿದ್ಧತೆಯಲ್ಲಿ ತೊಡಗಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ದೇವಸ್ಥಾನದ ಆಡಳಿತಾಧಿಕಾರಿಯೂ ಆಗಿರುವ ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಹಾಗೂ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವಿದಾಸ ಮೊಗೇರ ಮತ್ತು ಪದಾಧಿಕಾರಿಗಳು ಕೋರಿದ್ದಾರೆ.