ರಸ್ತೆ ಅಪಘಾತಗಳಿಂದ ದೇಶದಲ್ಲಿ ಪ್ರತಿ ನಿಮಿಷಕ್ಕೆ ಒಂದು ಸಾವು ಸಂಭವಿಸುತ್ತಿವೆ

ಹೊಸಪೇಟೆ: ಶಾಲಾ ಮಕ್ಕಳನ್ನು ಮನೆಯಿಂದ ಶಾಲೆಗೆ ಕರೆದುಕೊಂಡು ಹೋಗಿ ಮರಳಿ ಮನೆಗೆ ಕರೆ ತರುವ ಗುರುತರ ಜವಾಬ್ದಾರಿ ಶಾಲಾ ವಾಹನ ಚಾಲಕರದ್ದು ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಸಿಜೆಎಂ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಸುಬ್ರಮಣ್ಯ ಎನ್. ಹೇಳಿದರು.ಸ್ಥಳೀಯ ಪುನೀತ್ ರಾಜ್ ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಜಿಲ್ಲಾಡಳಿತ, ಜಿಪಂ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಜಂಟಿ ಸಹಯೋಗದಲ್ಲಿ ಶಾಲಾ ವಾಹನ ಚಾಲಕರಿಗೆ ರಸ್ತೆ ಸುರಕ್ಷತೆ ಕುರಿತು ಆಯೋಜಿಸಲಾಗಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಸ್ತೆ ಅಪಘಾತಗಳಿಂದ ದೇಶದಲ್ಲಿ ಪ್ರತಿ ನಿಮಿಷಕ್ಕೆ ಒಂದು ಸಾವು ಸಂಭವಿಸುತ್ತಿವೆ. ಇದರಿಂದ ಅವರನ್ನು ನಂಬಿದ ಕುಟುಂಬಗಳು ಬೀದಿಗೆ ಬರುತ್ತಿವೆ ಎಂದರು.

ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ವಾಹನ ಚಾಲಕರಿಗೆ ಸಮಾಜದಲ್ಲಿ ಗುರುತರವಾದ ಜವಾಬ್ದಾರಿ ಇದೆ. ಮಕ್ಕಳ ಪಾಲಕರು ಹಾಗೂ ಪೋಷಕರು ನಿಮ್ಮನ್ನೇ ನಂಬಿ ನಿಮ್ಮ ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಿರುತ್ತಾರೆ. ಅದಕ್ಕಾಗಿ ಶಾಲಾ ವಾಹನಗಳ ಚಾಲಕರಿಗೆ ಸಂಚಾರ ನಿಯಮಗಳ ಅರಿವಿರಬೇಕು. ಅಪಘಾತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮಕ್ಕಳನ್ನು ಸುರಕ್ಷಿತವಾಗಿ ಶಾಲೆಯಿಂದ ಮನೆಗೆ ತಲುಪಿಸುತ್ತೇವೆ ಎನ್ನುವ ಗುರಿ ಇರಬೇಕು. ವೇಗಕ್ಕೆ ಮಿತಿ ಇರಲಿ. ವಾಹನಗಳು ನಿಮ್ಮ ಮಾತು ಕೇಳಬೇಕೇ ವಿನಃ, ನೀವು ವಾಹನಗಳ ಮಾತು ಕೇಳುವಂತಾಗಬಾರದು ಎಂದರು.

ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಪ್ರಶಾಂತ್ ನಾಗಲಾಪುರ ಮಾತನಾಡಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ. ದಾಮೋದರ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗರಾಜ ಹವಾಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರ್ ಹೊರಪೇಟೆ, ಸಂಚಾರ ಠಾಣೆ ಪಿಐ ಡಿ.ಹುಲುಗಪ್ಪ ಮಾತನಾಡಿದರು.

ಹಿರಿಯ ಮೋಟಾರು ವಾಹನ ನಿರೀಕ್ಷ ಪ್ರದೀಪ್ ಹಡಗಲಿ, ವಕೀಲರಾದ ಕೆ.ರಾಮಪ್ಪ, ಸ್ಮೀತಾ ಭರಾಡೆ, ಈ.ಪುಷ್ಪಲತಾ ಸೇರಿದಂತೆ ಪೊಲೀಸ್, ಪ್ರಾದೇಶಿಕ ಸಾರಿಗೆ ಇಲಾಖೆ, ಶಿಕ್ಷಣ ಇಲಾಖೆ, ಕಾನೂನು ಇಲಾಖೆ ಅಧಿಕಾರಿಗಳು ಇದ್ದರು.

ಹೊಸಪೇಟೆಯ ಪುನೀತ್ ರಾಜ್ ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ನ್ಯಾಯಾಧೀಶ ಸುಬ್ರಮಣ್ಯ ಎನ್. ಮಾತನಾಡಿದರು.