ಕಲಿಕೆಗೆ ಮೂಲ ಅಡಿಪಾಯ ಮನೆಯಿಂದಲೇ ಆರಂಭ: ಕವಿತಾ

| Published : Jul 27 2025, 12:01 AM IST

ಕಲಿಕೆಗೆ ಮೂಲ ಅಡಿಪಾಯ ಮನೆಯಿಂದಲೇ ಆರಂಭ: ಕವಿತಾ
Share this Article
  • FB
  • TW
  • Linkdin
  • Email

ಸಾರಾಂಶ

ಪೋಷಕರ ಸಭೆಯ ಉದ್ದೇಶವು ಹಲವಾರು ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಸಮಯ ಹಾಗೂ ಸಂಪನ್ಮೂಲಗಳನ್ನು ವಿನಿಯೋಗಿಸುವಲ್ಲಿ ಸವಾಲುಗಳನ್ನು ಎದುರಿಸುತ್ತಾರೆ.

ಗದಗ: ಮುಗ್ಧ ಮಗುವಿನ ಕಲಿಕೆಗೆ ಮೂಲ ಅಡಿಪಾಯವು ಮನೆಯಿಂದಲೇ ಪ್ರಾರಂಭಗೊಳ್ಳುತ್ತದೆ. ಮಕ್ಕಳ ಬೆಳವಣಿಗೆಗೆ ಪ್ರೋತ್ಸಾಹ ಹಾಗೂ ಉತ್ತಮ ಮಾರ್ಗದರ್ಶನ ನೀಡುವುದು ಹಾಗೂ ಅನುಕೂಲಕರವಾದ ಕಲಿಕಾ ವಾತಾವರಣ ನಿರ್ಮಿಸುವಲ್ಲಿ ಪಾಲಕ ಹಾಗೂ ಪೋಷಕರು ನಿರ್ಣಾಯಕ ಪಾತ್ರ ವಹಿಸುತ್ತಾರೆ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಹೇಳಿದರು.

ನಗರದ ಸರ್ಕಾರಿ ಪ್ರಾಥಮಿಕ ಶಾಲೆ ಗಂಗಿಮಡಿಯಲ್ಲಿ ಜರುಗಿದ ಬನ್ನಿ ಮನೆಗಳಲ್ಲಿ ಮಕ್ಕಳ ಕಲಿಕಾ ವಾತಾವರಣ ನಿರ್ಮಾಣ ಮಾಡೋಣ, ಸಲಹಾತ್ಮಕ ಚಟುವಟಿಕೆಗಳ ಪೋಷಕರ ಸಭೆ-1 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪೋಷಕರ ಸಭೆಯ ಉದ್ದೇಶವು ಹಲವಾರು ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಸಮಯ ಹಾಗೂ ಸಂಪನ್ಮೂಲಗಳನ್ನು ವಿನಿಯೋಗಿಸುವಲ್ಲಿ ಸವಾಲುಗಳನ್ನು ಎದುರಿಸುತ್ತಾರೆ. ಅದಕ್ಕಾಗಿ ಪೋಷಕರ ಸಬಲೀಕರಣ ಉಪಕ್ರಮವೇ ಸಭೆಯ ಉದ್ದೇಶವಾಗಿದ್ದು, ತಮ್ಮ ಮಗುವಿನ ಕಲಿಕೆಯ ಪ್ರಕ್ರಿಯೆಯಲ್ಲಿ ಪೋಷಕರು ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಮಾಡುವ ಉದ್ದೇಶವಿದೆ ಎಂದರು.

ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ 4 ಪೋಷಕರ ಸಭೆಯನ್ನು ಮಾಡಬೇಕಿದ್ದು, ರಾಜ್ಯಾದಂತ ಏಕಕಾಲದಲ್ಲಿ ಇಂದು ಮೊದಲ ಸಭೆ ಜರುಗಿದ್ದು, ಮುಖ್ಯವಾಗಿ ಎಸ್‌ಡಿಎಂಸಿ ಸದಸ್ಯರು ತಮ್ಮ ಮನೆಗಳಲ್ಲಿ ಮಕ್ಕಳಿಗೆ ಪೂರಕವಾದ ಕಲಿಕಾ ವಾತಾವರಣವನ್ನು ನಿರ್ಮಾಣ ಮಾಡಿ ಕಲಿಕೆಯು ಯಶಸ್ವಿಯಾಗುವಂತೆ ಮಾಡಬೇಕು ಇದರಂತೆ ಎಲ್ಲ ಪಾಲಕರು ಸಹಿತ ಕ್ರಮ ಕೈಗೊಂಡಲ್ಲಿ ಶೈಕ್ಷಣಿಕ ಅಭಿವೃದ್ಧಿ ಯಶಸ್ವಿಗೊಳ್ಳುವುದು ಎಂದರು.

ಶಾಲಾ ಮುಖ್ಯೋಪಾಧ್ಯಾಯಿನಿ ರತ್ನಾ ಸಂಕಣ್ಣವರ ಮಾತನಾಡಿ, ಶಾಲೆಯು ಸಮುದಾಯದ ಪ್ರಮುಖ ಅಂಗವಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಪಾಲಕರ ಅಭಿಪ್ರಾಯ, ಸಲಹೆ- ಸೂಚನೆಗಳಿಗೆ ಮುಕ್ತ ಅವಕಾಶವಿದ್ದು, ಮಕ್ಕಳ ಕಲಿಯನ್ನೇ ಗುರಿಯಾಗಿಸಿಕೊಂಡು ಆಗಾಗ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಚಿಂತನೆಗೆ ಶ್ರಮಿಸಬೇಕು ಎಂದರು.

ಪಾಲಕರಿಗೆ ವಿವಿಧ ಚಟುವಟಿಕೆಗಳನ್ನು ಮನೋರಂಜನಾತ್ಮಕವಾಗಿ ಆಯೋಜಿಸಲಾಗಿತ್ತು. ಶಾಲಾ ಭೇಟಿ, ಉತ್ತಮ ಪರಿಸರ ನಿರ್ಮಾಣ, ಶೈಕ್ಷಣಿಕ ಚಿಂತನೆಗಳಿಗೆ ಪಾಲಕರ ಸಹಕಾರ ಮುಂತಾದ ವಿಷಯಗಳ ಕುರಿತು ಚರ್ಚಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಮಂಜುಳಾ ವಡ್ಡಟ್ಟಿ ಮಾತನಾಡಿದರು.

ಮುಕ್ತುಂಸಾಬ ನಾಗನೂರ, ಅಂಜು ಸೋಳಂಕಿ, ಯಲ್ಲಪ್ಪಗೌಡ ಪಾಟೀಲ, ಪ್ರೇಮಾ ಮಣ್ಣವಡ್ಡರ, ರಜೀಯಾ ಯಾದಗಿರಿ, ರೇಶ್ಮಾ ಕಲೇಬಾವಿ, ಸಂಧ್ಯಾ ಪವಾರ, ರಜೀಯಾ ಈಟಿ, ಲಕ್ಷ್ಮೀ ಪಲ್ಲೇದ, ಸಲ್ಮಾ ಗುಡೂರ, ರೇಶ್ಮಾ ರಸಾಳಕರ, ಲಕ್ಷೀ ಪಟ್ಟೇದ, ಗೀತಾ ಕಟಗಿ, ನಿರ್ಮಲಾ ಹುಬ್ಬಳ್ಳಿ ಹಾಗೂ ಎಸ್‌ಡಿಎಂಸಿ ಸದಸ್ಯರು ಇದ್ದರು.

ಪಲ್ಲವಿ ಅಂಗಡಿ ಹಾಗೂ ಫಾತೀಮಾ ಹುಬ್ಬಳ್ಳಿ ಪ್ರಾರ್ಥಿಸಿದರು. ಎಸ್.ಜಿ. ಗಿರಿತಮ್ಮಣ್ಣವರ ಸ್ವಾಗತಿಸಿದರು. ಡಿ.ಎಸ್. ಮೀಶೆಣ್ಣವರ ನಿರೂಪಿಸಿದರು. ಜಿ.ಎಸ್. ಬೆಳಹಾರ ಸಭೆಯ ನಡಾವಳಿ ತಿಳಿಸಿದರು. ಆರ್.ಬಿ. ಹಾದಿಮನಿ ವಂದಿಸಿದರು.