ಸಾರಾಂಶ
- ವೀರಶೈವ ಲಿಂಗಾಯತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಶಿಕ್ಷಣದಲ್ಲಿ ಅತಿ ಹೆಚ್ಚು ಅಂಕಗಳ ಗಳಿಸುವುದೇ ಮುಖ್ಯ ಮಾನದಂಡ ಆಗದೇ, ಮಕ್ಕಳಲ್ಲಿ ಉತ್ತಮ ಆತ್ಮವಿಶ್ವಾಸ, ಆತ್ಮಸ್ಥೈರ್ಯ, ನಾಯಕತ್ವ ಗುಣ, ಸಮಾಜಮುಖಿ ಸೇವಾ ಮನೋಧರ್ಮ ಮೂಡಿಸುವುದೇ ಶಿಕ್ಷಣದ ಗುರಿಯಾಗಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಹೇಳಿದರು.ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ವೀರಶೈವ ಲಿಂಗಾಯತ ನೌಕರರ ಪತ್ತಿನ ಸಹಕಾರ ಸಂಘದಿಂದ 2023- 2024ನೇ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಶೇರುದಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಧನಾತ್ಮಕ ಚಿಂತನೆ, ಬದ್ಧತೆಯಿಂದ ವಿದ್ಯಾರ್ಥಿಗಳು ಸಾಗಿದಾಗ ಜೀವನದ ಗುರಿ ಸಾಧಿಸಲು ಸಾಧ್ಯ. ಜೀವನದಲ್ಲಿ ಯಶಸ್ವಿಯಾಗಿ ಗುರಿ ಸಾಧಿಸಿದಾಗ ಸಮಾಜದಲ್ಲಿ ಉನ್ನತ ಸ್ಥಾನಮಾನ ದೊರೆಯುತ್ತದೆ. ಸಮಾಜದಿಂದ ಪಡೆದಿರುವುದನ್ನು ಸಮಾಜಕ್ಕೆ ವಾಪಸ್ ನೀಡುವಂತಾಗಬೇಕು. ನಾವು ಗ್ರಾಮೀಣರು, ಆರ್ಥಿಕವಾಗಿ ಹಿಂದುಳಿದವರೆಂಬ ಭಾವನೆ ಕೆಲವರಲ್ಲಿರುತ್ತದೆ. ಆದರೆ, ಭಾರತ ರತ್ನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸೇರಿದಂತೆ ಅನೇಕ ಮಹನೀಯರ ಬಾಲ್ಯದಲ್ಲೇ ಕಡುಬಡತನ ಕುಟುಂಬದಲ್ಲಿ ಬೆಳೆದಿದ್ದರು. ಭವಿಷ್ಯದಲ್ಲಿ ದೇಶಕ್ಕೇ ಮಾದರಿಯಾದರು ಎಂದು ತಿಳಿಸಿದರು.ಬಾಲ್ಯದ ಕಡುಕಷ್ಟ, ಸವಾಲುಗಳನ್ನೆಲ್ಲಾ ಮೆಟ್ಟಿ ನಿಂತ ಡಾ.ಕಲಾಂ ಸೇರಿದಂತೆ ಅನೇಕ ಮಹನೀಯರು ಶ್ರಮವಹಿಸಿ ದುಡಿದು, ತಾವು ಅಂದುಕೊಂಡಿದ್ದ ಗುರಿ ಮುಟ್ಟಿ, ಸಾಧಕರಾಗಿದ್ದಾರೆ. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದು ಪ್ರತಿಭಾ ಪುರಸ್ಕಾರ ಪಡೆದವರಿಗೆ ಇಂತಹ ಪ್ರೋತ್ಸಾಹ ಮತ್ತಷ್ಟು ಪ್ರೇರಣೆ ನೀಡುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಹೆಚ್ಚು ಸಾಧನೆ ಮಾಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರದ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದರು.
ಸಂಘದ ಕಾರ್ಯಾಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಜಿಲ್ಲಾಧ್ಯಕ್ಷ ಬಿ.ಪಾಲಾಕ್ಷಿ ಮಾತನಾಡಿ, ಪ್ರತಿಭಾವಂತರು ಸಮಾಜಮುಖಿ ಆಗಿರಬೇಕು. ಆಗ ಸಮಾಜದ ಆರೋಗ್ಯ ಕಾಪಾಡಲು ಸಾಧ್ಯ. ವಿದ್ಯಾರ್ಥಿಗಳು ಈಗ ಬ್ರಹ್ಮಚರ್ಯ ಸ್ಥಾನದಲ್ಲಿದ್ದಾರೆ. ಶಿಸ್ತು, ಬದ್ಧತೆ, ಗುರಿ ಅತಿ ಮುಖ್ಯವಾಗಿದೆ. ಅವುಗಳ ಆಧಾರದಲ್ಲಿ ಜೀವನದ ಗುರಿ ಮುಟ್ಟಬೇಕು. ಉನ್ನತ ಸಾಧನೆ ಮಾಡಿದವರು ಸಮಾಜಮುಖಿ ಕಾರ್ಯದಲ್ಲಿ ತೊಡಗಬೇಕು ಎಂದರು.ಸಂಘದ ಅಧ್ಯಕ್ಷ ಲೋಕಣ್ಣ ಮಾಗೋಡ್ರ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೀರೇಶ ಎಸ್. ಒಡೇನಪುರ, ಕೆ.ಶಿವಶಂಕರ, ರೇವಣಸಿದ್ದಪ್ಪ ಅಂಗಡಿ, ಸಿದ್ದೇಶ, ಡಿಡಿಪಿಐ ಜಿ. ಕೊಟ್ರೇಶ್, ರೇವಣಸಿದ್ದನಗೌಡ, ಶಿವಕುಮಾರ್, ಚಂದ್ರಪ್ಪ ಇತರರು ಇದ್ದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಬಿ.ಜಿ. ಸಿದ್ದಲಿಂಗಮ್ಮ ಉಪನ್ಯಾಸ ನೀಡಿದರು. ಇದೇ ವೇಳೆ ಶೇರುದಾರರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಪ್ರೋತ್ಸಾಹಿಸಲಾಯಿತು.- - -
ಬಾಕ್ಸ್ ಮೊಬೈಲ್‌ನಿಂದ ಉಜ್ವಲ ಭವಿಷ್ಯ ಹಾಳಾಗದಿರಲಿ ಇಂದಿನ ಆಧುನಿಕ ಯುಗದಲ್ಲಿ ಯಾವುದೇ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಲಭ್ಯವಾಗುತ್ತಿದೆ. ಮೊಬೈಲ್ ಮೂಲಕ ನಿಮ್ಮ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಿ. ಬೇಡವಾದ ಎಲ್ಲದಕ್ಕೂ ಮೊಬೈಲ್ ಬಳಸುತ್ತ ಅಮೂಲ್ಯ ಸಮಯ, ಭವಿಷ್ಯ ಹಾಳು ಮಾಡಿಕೊಳ್ಳಬೇಡಿ. ಪಾಲಕರು ತಮ್ಮ ಮಕ್ಕಳಿಗೆ ಶಾಲಾ-ಕಾಲೇಜಿಗೆ ಕಳಿಸುವ ಜೊತೆಗೆ ಸದಾ ಗಮನ ಹರಿಸಬೇಕು. ಒಳ್ಳೆಯ ಹಾದಿಯಲ್ಲಿ ಸಾಗುವಂತೆ ಮಕ್ಕಳಿಗೆ ನಿರಂತರ ಜಾಗೃತಿ ಮೂಡಿಸುವ ಮೂಲಕ ಸಾಧನೆ ಮಾಡಲು ಪ್ರೇರೇಪಿಸಬೇಕು ಎಂದು ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಸಲಹೆ ನೀಡಿದರು.- - - -16ಕೆಡಿವಿಜಿ1:
ದಾವಣಗೆರೆಯಲ್ಲಿ ಭಾನುವಾರ ವೀರಶೈವ ಲಿಂಗಾಯತ ನೌಕರರ ಪತ್ತಿನ ಸಹಕಾರ ಸಂಘದಿಂದ ಏರ್ಪಡಿಸಿದ್ದ 2023- 2024ನೇ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಷೇರುದಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭವನ್ನು ಎಸ್‌ಪಿ ಉಮಾ ಪ್ರಶಾಂತ ಉದ್ಘಾಟಿಸಿದರು.