ದೇವಸ್ಥಾನ ಜೀರ್ಣೋದ್ಧಾರಕ್ಕೆ ಧನಸಹಾಯ

| Published : Jun 17 2024, 01:39 AM IST

ಸಾರಾಂಶ

ಐತಿಹಾಸಿಕ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡುವುದು ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯ ಸಂಕಲ್ಪವಾಗಿದೆ

ಹಗರಿಬೊಮ್ಮನಹಳ್ಳಿ: ಐತಿಹಾಸಿಕ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡುವುದು ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯ ಸಂಕಲ್ಪವಾಗಿದೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಹೇಳಿದರು.ತಾಲೂಕಿನ ನೆಲ್ಕುದ್ರಿ ಗ್ರಾಮದ ಕಲ್ಲೇಶ್ವರ ದೇವಸ್ಥಾನ ಅಭಿವೃದ್ಧಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ₹೧.೫೦ ಲಕ್ಷ ಚೆಕ್ ವಿತರಿಸಿ ಅವರು ಮಾತನಾಡಿದರು.

ಧಾರ್ಮಿಕ ಶಕ್ತಿಯಿಂದ ಜ್ಞಾನ ವೃದ್ಧಿಸುತ್ತದೆ. ಭಾರತೀಯ ಸಂಸ್ಕೃತಿ ಪರಂಪರಾಗತವಾಗಿ ಆಚರಣೆಗಳು, ಸಂಪ್ರದಾಯಗಳಿಂದ ಉಳಿದುಬಂದಿದೆ. ಕಾಯಕದ ಜೊತೆಗೆ ಮಾನಸಿಕ ನೆಮ್ಮದಿ ಹೊಂದಲು ದೇವಸ್ಥಾನಗಳು ಬೇಕು. ಅತ್ಯಂತ ಶ್ರದ್ಧೆಯಿಂದ ಮಾಡುವ ಪೂಜೆಗಳು ಏಕಾಗ್ರತೆ ಹೆಚ್ಚಿಸುತ್ತವೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಟಿ.ಆರ್. ಮಂಜುಳಾ ಮಾತನಾಡಿ, ಈಗಾಗಲೇ ತಾಲೂಕಿನ ಬಹುತೇಕ ದೇವಸ್ಥಾನಗಳ ಅಭಿವೃದ್ಧಿಗೆ ಯೋಜನೆಯಿಂದ ಹಣ ನೀಡಲಾಗಿದೆ. ಯೋಜನೆಯು ಶಿಕ್ಷಣ, ಶ್ರದ್ಧಾಕೇಂದ್ರಗಳ ಸ್ವಚ್ಛತೆ, ಮಹಿಳೆಯರ ಆರ್ಥಿಕ ಸಬಲೀಕರಣ, ಮದ್ಯವರ್ಜನ ಶಿಬಿರ ಸೇರಿ ವಿವಿಧ ಸಮಾಜಮುಖಿ ಕೆಲಸಗಳ ಮೂಲಕ ರಾಜ್ಯಾದ್ಯಂತ ವಿಶೇಷ ಛಾಪು ಮೂಡಿಸಿದೆ ಎಂದರು.

ಇದೇ ವೇಳೆ ತಾಲೂಕಿನ ವಟ್ಟಮ್ಮನಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ₹೨ಲಕ್ಷ, ಬ್ಯಾಲಾಳು ಬಸವೇಶ್ವರ ದೇವಸ್ಥಾನದ ಅಭಿವೃದ್ಧಿಗೆ ₹೧.೫ ಲಕ್ಷ ಚೆಕ್ ವಿತರಿಸಿದರು.

ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಸೋಮಶೇಖರ, ಮೇಲ್ವಿಚಾರಕರಾದ ರಶ್ಮಿ, ರವೀಂದ್ರ, ಜನಜಾಗೃತಿ ಸಮಿತಿ ಸದಸ್ಯ ಹೊನ್ನೂರಪ್ಪ, ಸಮಿತಿಯ ಅಧ್ಯಕ್ಷ ಕುಮಾರ, ಸೇವಾ ಪ್ರತಿನಿಧಿ ಯಮನಪ್ಪ ವಾಲೇಕಾರ್, ವೀರೇಶ್, ಒಕ್ಕೂಟದ ಅಧ್ಯಕ್ಷ ಕೊಟ್ರೇಶ, ಕೆವಿಎಂ ಬಾಲಚಂದ್ರಯ್ಯ, ಕೆ.ಮಂಜುನಾಥ, ಐ.ಎಂ. ಕೊಟ್ರೇಶ, ದೊಡ್ಡಯ್ಯ, ಜಿ.ರಾಮಪ್ಪ, ಎ.ಕೊಟ್ರೇಶ, ಬಿ.ಕೆಂಚಪ್ಪ, ಎಚ್.ಮಂಜುನಾಥ, ಕೆ.ಮಹೇಶ್ ಇದ್ದರು.