ಸಾರಾಂಶ
- ಜ.22 ಹಾಗೂ 23 ರಂದು ಚಿಕ್ಕಮಗಳೂರು ನಗರ ಪ್ರದಕ್ಷಣೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಳೆದ ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ನುಡಿದಂತೆ ನಡೆದ ಸರ್ಕಾರ ಎಂಬ ಹಗ್ಗಳಿಕೆಗೆ ಪಾತ್ರವಾಗಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು. ಸೋಮವಾರ ನಗರದ 26ನೇ ವಾರ್ಡಿನಲ್ಲಿ 119.80 ಲಕ್ಷ ರು. ವೆಚ್ಚದಲ್ಲಿ ಕೈಗೊಳ್ಳಲಾದ ವಿವಿಧ ಅಭಿವೃದ್ಧಿ ಕಾಮಗಾರಿ ಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಸಂಕ್ರಾಂತಿ ದಿನದಂದು ನಗರದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಮುಂದಿನ ದಿನಗಳಲ್ಲಿ ನಗರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲಿಯೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.ನಗರೋತ್ಥಾನದಲ್ಲಿ 18 ಕೋಟಿ ರು. ವೆಚ್ಚದ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿದ್ದರೂ ಹಣ ಮಂಜೂರಾಗಿಲ್ಲ ಎಂಬ ಕಾರಣಕ್ಕೆ ಗುತ್ತಿಗೆದಾರರು ಕಾಮಗಾರಿ ಪ್ರಾರಂಭಿಸಿಲ್ಲ ಎಂದು ವಿಷಾಧಿಸಿದರು. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ನಗರೋತ್ಥಾನದಿಂದ ಕೈಗೊಳ್ಳುವ ಈ ಕಾಮಗಾರಿ ಪ್ರಾರಂಭವಾದ ಬಳಿಕ ಅಮೃತ್ ಯೋಜನೆ ಮತ್ತು ಒಳ ಚರಂಡಿ ಕಾಮಗಾರಿ ನಡೆದ ಸಂದರ್ಭದಲ್ಲಿ ರಸ್ತೆಗಳನ್ನು ಅಗೆದು ಹಾನಿ ಮಾಡಿದ್ದು, ಈ ಎಲ್ಲಾ ಪ್ರಮುಖ ರಸ್ತೆಗಳನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ ಎಂದರು. ಜ. 22 ಹಾಗೂ 23 ರಂದು ನಗರದ ವಾರ್ಡ್‌ಗಳನ್ನು ಪ್ರದಕ್ಷಣೆ ಹಾಕಲು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದೇ ಸಂದರ್ಭದಲ್ಲಿ ಜನಸಂಪರ್ಕ ಸಭೆ ನಡೆಸುವ ಮೂಲಕ ಜನಸ್ನೇಹಿ ಆಡಳಿತ ಮತ್ತು ಜನಪರ ಸೇವೆಗಳಿಗೆ ಬದ್ಧವಾಗಿ ರುವುದಾಗಿ ಭರವಸೆ ನೀಡಿದರು. 5 ಗ್ಯಾರಂಟಿಗಳ ಪೈಕಿ ಕೊನೆ ಗ್ಯಾರಂಟಿಯಾದ ಯುವನಿಧಿ ಯೋಜನೆಯನ್ನು ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜ.12 ರಂದು ಮುಖ್ಯಮಂತ್ರಿಗಳು ಶಿವಮೊಗ್ಗದಲ್ಲಿ ಚಾಲನೆ ನೀಡಿದರು. ಅದೇ ದಿನ ಕಡೂರು ವಿಧಾನಸಭಾ ಕ್ಷೇತ್ರದ ಯುವಕ ಪ್ರತಾಪ್ ಎಂಬುವವರಿಗೆ ಇದರ ಸೌಲಭ್ಯ ನೀಡಿದ್ದೇವೆಂದು ಹೇಳಿದರು. ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ, ನಗರದ ಎಲ್ಲಾ ವಾರ್ಡ್‌ಗಳಲ್ಲಿಯೂ ಅಧಿಕಾರಕ್ಕೆ ಬಂದ 22 ತಿಂಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದ್ದು, ತಮ್ಮದೇ ಆದ ವಾರ್ಡ್ ನಂಬರ್ 26 ಇದರಿಂದ ಹೊರತಾಗಿತ್ತು. ಕಾರಣ, ಅಧ್ಯಕ್ಷರು ತಮ್ಮ ವಾರ್ಡ್ ಅಭಿವೃದ್ಧಿಗೆ ನಗರಸಭೆ ಹಣ ವ್ಯಯ ಮಾಡುತ್ತಾರೆಂಬ ರಾಜಕೀಯ ಆರೋಪ ಮಾಡುತ್ತಿದ್ದರು. ಇದಕ್ಕೆ ಉತ್ತರವಾಗಿ ಇಂದು ಗುದ್ದಲಿ ಪೂಜೆ ಮಾಡುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ವಾರ್ಡ್ ನಿವಾಸಿ ಏಕಾಂತ್‌ರಾಮು, ರಾಕೇಶ್ ಹಾಗೂ ನಗರಸಭೆ ಅಧಿಕಾರಿಗಳು ಇದ್ದರು.15 ಕೆಸಿಕೆಎಂ 1ಚಿಕ್ಕಮಗಳೂರಿನ 26ನೇ ವಾರ್ಡ್‌ನಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಚ್.ಡಿ. ತಮ್ಮಯ್ಯ ಸೋಮವಾರ ಚಾಲನೆ ನೀಡಿದರು. ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಇದ್ದರು.