ಸಾರಾಂಶ
ಸಂಕ್ರಮಣ ದಿನದಂದು ಭಕ್ತರು ಬುತ್ತಿ ಕಟ್ಟಿಕೊಂಡು ಬಂದು ಅಮ್ಮನವರ ದರ್ಶನ ಪಡೆದ ನಂತರ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಕುಳಿತು ತಾವು ತಂದ ಬುತ್ತಿಯನ್ನು ಸೇವಿಸಿ ತಮ್ಮ ಊರುಗಳತ್ತ ಮುಖಮಾಡಿದರು.
ಮುನಿರಾಬಾದ್/ಕೊಪ್ಪಳ: ತಾಲೂಕಿನ ಹುಲಿಗೆಮ್ಮ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಅಪಾರ ಭಕ್ತರು ದರ್ಶನ ಪಡೆದರು.
ಬೆಳಗ್ಗೆಯಿಂದ ದೇವಸ್ಥಾನಕ್ಕೆ ಸುಮಾರು 25 ಸಾವಿರಕ್ಕೂ ಅಧಿಕ ಭಕ್ತರು ತಂಡೋಪತಂಡವಾಗಿ ಆಗಮಿಸಿದರು. ರಾಜ್ಯ, ಅನ್ಯ ರಾಜ್ಯದಿಂದ ಭಕ್ತರು ಹುಲಿಗಿಗೆ ಸಾಕಷ್ಟು ಸಂಖ್ಯೆಯಲ್ಲಿ ಹರಿದು ಬಂದರು.ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ತೆಲಂಗಾಣದಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಬೆಳಗ್ಗೆಯೇ ದೇವಸ್ಥಾನ ಆವರಣ ಹಾಗೂ ದೇವಸ್ಥಾನದ ರಾಜಬೀದಿ ಭಕ್ತರಿಂದ ತುಂಬಿತ್ತು. ಸಂಕ್ರಮಣ ದಿನದಂದು ಭಕ್ತರು ಬುತ್ತಿ ಕಟ್ಟಿಕೊಂಡು ಬಂದು ಅಮ್ಮನವರ ದರ್ಶನ ಪಡೆದ ನಂತರ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಕುಳಿತು ತಾವು ತಂದ ಬುತ್ತಿಯನ್ನು ಸೇವಿಸಿ ತಮ್ಮ ಊರುಗಳತ್ತ ಮುಖಮಾಡಿದರು.
ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆ ಜಾರಿಯಾದ ಹಿನ್ನೆಲೆಯಲ್ಲಿ ಮಹಿಳಾ ಭಕ್ತರು ದೇವಿದರ್ಶನಕ್ಕೆ ಹೆಚ್ಚಾಗಿ ಆಗಮಿಸಿದ್ದರು. ಕೊಪ್ಪಳ, ಗಂಗಾವತಿ, ಹೊಸಪೇಟೆ ಮಾರ್ಗವಾಗಿ ಅಪಾರ ಸಂಖ್ಯೆಯಲ್ಲಿ ಭಕ್ತರು ಹುಲಿಗಿಗೆ ಆಗಮಿಸಿ ಹುಲಿಗೆಮ್ಮ ದರ್ಶನ ಪಡೆದರು. ಉರಿಬಿಸಿಲು ಲೆಕ್ಕಿಸದೇ ಹಲವು ತಾಸು ಭಕ್ತರು ಸರತಿಯಲ್ಲಿ ನಿಂತಿದ್ದರು. ದೇವಿಗೆ ಕಾಯಿ-ಕರ್ಪೂರ ಅರ್ಪಿಸಿ ಭಕ್ತಿ ಸಮರ್ಪಿಸಿದರು. ಸಂಜೆಯಾದರೂ ಸಹ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇತ್ತು.ಸಂಕ್ರಮಣ ಪ್ರಯುಕ್ತ ದೇವಸ್ಥಾನದ ಮುಂಭಾಗ ಬೃಹದಾಕಾರ ರಂಗೋಲಿ ಹಾಕಲಾಗಿತ್ತು. ದೇವಸ್ಥಾನ, ಸುತ್ತಮುತ್ತಲಿನ ಪ್ರದೇಶದಲ್ಲಿ ತಳಿರು-ತೋರಣಗಳಿಂದ ಶೃಂಗರಿಸಲಾಗಿತ್ತು.ನದಿಗೆ ನೀರು ಬಿಡದ ಅಧಿಕಾರಿಗಳು: ತುಂಗಭದ್ರಾ ನದಿಯಲ್ಲಿ ಕಡಿಮೆ ನೀರಿದೆ. ಸಂಕ್ರಮಣ ದಿನದಂದು ಆಗಮಿಸುವ ಭಕ್ತರಿಗೆ ನದಿ ಸ್ನಾನ ಮಾಡಲು ಜಲಾಶಯದಿಂದ ನದಿಗೆ ನೀರನ್ನು ಹರಿಸುವಂತೆ ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿ ಅರವಿಂದ್ ಸುತ್ತು ಗುಂಡಿ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಜಲಾಶಯದಲ್ಲಿ ನೀರಿನ ಶೇಖರಣೆ ಪ್ರಮಾಣ ತೀರಾ ಕಡಿಮೆ ಇದ್ದು ಇದನ್ನು ಕುಡಿಯುವ ನೀರಿಗಾಗಿ ಮಾತ್ರ ಬಳಸಲು ಉದ್ದೇಶಿಸಲಾಗಿದೆ. ಹಾಗಾಗಿ ನದಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ನೀರಾವರಿ ಇಲಾಖೆಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.ರೈಲ್ವೆ ಗೇಟಲ್ಲಿ ಮುಂದುವರಿದ ಸಮಸ್ಯೆ: ಹುಲಿಗಿ ಗ್ರಾಮದಲ್ಲಿ ಪ್ರತಿ ಅರ್ಧಗಂಟೆಗೊಮ್ಮೆ ರೈಲ್ವೆ ಗೇಟ್ ಹಾಕುತ್ತಿದ್ದ ಹಿನ್ನೆಲೆಯಲ್ಲಿ ದೇವಿ ದರ್ಶನಕ್ಕೆ ದೂರದ ಊರುಗಳಿಂದ ಆಗಮಿಸುತ್ತಿದ್ದ ಭಕ್ತರಿಗೆ ಭಾರಿ ಸಂಕಷ್ಟ ಎದುರಾಯಿತು. ಭಕ್ತರ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಪರದಾಡಿದರು.