ಸರ್ವ ಜನಾಂಗವು ತಮ್ಮದೇ ಆದ ಜವಾಬ್ದಾರಿಯೊಂದಿಗೆ ಜಾತ್ಯತೀತವಾಗಿ ಹಿಂದಿನಿಂದಲೂ ಆಚರಿಸಿಕೊಂಡು ಬರುತ್ತಿರುವ ಸಿಡಿಹಬ್ಬದ ಹಿನ್ನೆಲೆಯಲ್ಲಿ ಈಗಾಗಲೇ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಹಬ್ಬದ ಸಿದ್ಧತೆಗಳನ್ನು ಪೂರ್ಣಗೊಳಿಸಿ ವಿಜೃಂಬಣೆ ಹಾಗೂ ಶಾಂತಿಯುತವಾಗಿ ಆಚರಿಸಲು ಇಲಾಖೆಗಳ ಸಹಕಾರದಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಅಣಿಗೊಳಿಸಿದ್ದಾರೆ.
ಸಿ.ಸಿದ್ದರಾಜು ಮಾದಹಳ್ಳಿ
ಕನ್ನಡಪ್ರಭ ವಾರ್ತೆ ಮಳವಳ್ಳಿಇತಿಹಾಸ ಪ್ರಸಿದ್ದ ಪಟ್ಟಲದಮ್ಮ ಸಿಡಿಹಬ್ಬವನ್ನು ಜ.30 ಮತ್ತು 31ರಂದು ವಿಜೃಂಬಣೆಯಿಂದ ಆಚರಿಸಲು ತಾಲೂಕು ಆಡಳಿತ, ಪುರಸಭೆ ಹಾಗೂ ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಸರ್ವ ಜನಾಂಗವು ತಮ್ಮದೇ ಆದ ಜವಾಬ್ದಾರಿಯೊಂದಿಗೆ ಜಾತ್ಯತೀತವಾಗಿ ಹಿಂದಿನಿಂದಲೂ ಆಚರಿಸಿಕೊಂಡು ಬರುತ್ತಿರುವ ಸಿಡಿಹಬ್ಬದ ಹಿನ್ನೆಲೆಯಲ್ಲಿ ಈಗಾಗಲೇ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಹಬ್ಬದ ಸಿದ್ಧತೆಗಳನ್ನು ಪೂರ್ಣಗೊಳಿಸಿ ವಿಜೃಂಬಣೆ ಹಾಗೂ ಶಾಂತಿಯುತವಾಗಿ ಆಚರಿಸಲು ಇಲಾಖೆಗಳ ಸಹಕಾರದಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಅಣಿಗೊಳಿಸಿದ್ದಾರೆ.ಘಟ್ಟ ಮೆರವಣಿಗೆ:
ಹಬ್ಬದ ಪ್ರಮುಖ ಆಕರ್ಷಣೆಯಾದ ಘಟ್ಟ ಮೆರವಣಿಗೆಯಲ್ಲಿ ಸಮಯ ನಿಗಧಿಪಡಿಸಲಾಗಿದೆ. ಪೇಟೆ ಒಕ್ಕಲಕೇರಿ ಬೀದಿ ರಾತ್ರಿ 8 ರಿಂದ 10, ಸಿದ್ಧಾರ್ಥನಗರ ಘಟ್ಟ 10 ರಿಂದ 12, ಕೀರ್ತಿನಗರ 12ರಿಂದ 1, ಗಂಗಮತ ಬೀದಿ 1 ರಿಂದ 3, ಅಶೋಕ್‌ನಗರ ಚಿಕ್ಕಪಾಲು 3 ರಿಂದ 4.15, ಅಶೋಕ್‌ನಗರ ದೊಡ್ಡಪಾಲು 4.15ರಿಂದ 5.15, ಬಸವಲಿಂಗಪ್ಪ ನಗರ 5.15ರಿಂದ 6 ಗಂಟೆಯೊಳಗೆ ಎಲ್ಲಾ ಘಟ್ಟಗಳ ಮೆರವಣಿಗೆ ನಡೆಯಲಿದೆ.ಇತಿಹಾಸ ಹೊಂದಿರುವ ಅಕ್ಕತಂಗಿಯರು:
ಪಟ್ಟಣದಲ್ಲಿ ನೆಲೆಸಿರುವ ಪಟ್ಟಲದಮ್ಮ ಹಾಗೂ ದಂಡಿನ ಮಾರಮ್ಮ ಅಕ್ಕತಂಗಿಯರಾಗಿದ್ದು. ಇತಿಹಾಸದ ಪ್ರಕಾರ 300 ವರ್ಷಗಳ ಹಿಂದೆ ಶ್ರೀರಂಗಪಟ್ಣಣದಿಂದ ಮಳವಳ್ಳಿಗೆ ಅಡಿಕೆ ವ್ಯಾಪಾರಕ್ಕೆ ಬರುತ್ತಿದ್ದ ಮಂಚಟಪ್ಪನವರ ಎತ್ತಿನ ಗಾಡಿಯಲ್ಲಿ ಇಬ್ಬರು ಅಕ್ಕ-ತಂಗಿಯರು ಬಂದು ಮಳವಳ್ಳಿ ಗ್ರಾಮದಲ್ಲಿ ನೆಲೆಸಿದ್ದರು ಎಂಬ ನಂಬಿಕೆ.ಮಳವಳ್ಳಿ ಗ್ರಾಮಕ್ಕೆ ನೆರೆಹೊರೆ ಪಾಳೇಗಾರರ ಹಾವಳಿಯಿಂದ ಜನರ ನೆಮ್ಮದಿ ಹಾಳಾಗಿದ್ದಾಗ ಇಲ್ಲಿನ ನಿವಾಸಿಗಳು ಪಟ್ಟಲದಮ್ಮ ದೇವತೆಗೆ ಮೋರೆ ಹೋಗಿ ತಮ್ಮನ್ನು ಕಾಪಾಡುವಂತೆ ಮೊರೆ ಇಟ್ಟಿದ್ದಂತೆ. ಅವತಾರ ತಾಳಿದ ದೇವಿಗೆ ಪಾಳೇಗಾರರನ್ನು ಸದೆ ಬಡಿದು ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಮಾಡಿದ ಹಿನ್ನೆಲೆಯಲ್ಲಿ ಗ್ರಾಮವನ್ನು ರಕ್ಷಿಸುತ್ತಿರುವ ಇಬ್ಬರು ದೇವತೆಗಳಿಗೆ ಜಾತ್ರೆ, ಕೊಂಡ, ಮೆರವಣಿಗೆ ಮುಂತಾದ ವಿಶೇಷ ಪೂಜೆಗಳನ್ನು ಜಾತಿ-ಮತ ಬೇಧವಿಲ್ಲದೆ ಸಾಮೂಹಿಕವಾಗಿ ಪ್ರತಿ ವರ್ಷವು ನಡೆದುಕೊಂಡು ಬರುತ್ತಿದೆ.
ಮಂಚಟಪ್ಪನವರ ಕನಸಿಗೆ ಬಂದು ತಮಗೆ ಗುಡಿ ಕಟ್ಟಿ ಪೂಜಿಸುವಂತೆ ಹೇಳಿದರಂತೆ ನಂತರ ದೇವಸ್ಥಾನ ನಿರ್ಮಾಣಗೊಂಡಿದೆ. ಅಂದಿನಿಂದ ಇಲ್ಲಿಯವರೆವಿಗೂ ಈ ದೇವರಿಗೆ ಮಂಚಟಪ್ಪನವರ ಕುಟುಂಬದಿಂದಲೇ ಹಬ್ಬದಲ್ಲಿ ಪ್ರಥಮ ಪೂಜೆ ಸಲ್ಲಿಸಿಕೊಂಡು ಇಂದಿಗೂ ಬರಲಾಗುತ್ತಿದೆ.ಸಿಡಿರಣ್ಣ ತಯಾರಿ:
ಊರನ್ನು ರಕ್ಷಿಸಲು ಈ ದೇವತೆಗಳು ಸಿಡಿರಣ್ಣನಿಗೆ ತಮ್ಮ ದೈವ ಶಕ್ತಿಯನ್ನು ನೀಡಿದ್ದರು ಎಂಬ ಪ್ರತೀತಿ ಇದೆ. ಅದರಂತೆ ಈ ಹಬ್ಬವನ್ನು ಸಿಡಿ ಹಬ್ಬವೆಂದು ಆಚರಣೆ ಮಾಡುತ್ತ ಬರಲಾಗುತ್ತಿದೆ. ಸಿಡಿರಣ್ಣವನ್ನು ಸುಮಾರು 46 ಅಡಿ ಉದ್ದವಿರುವ ಒಂದೇ ತಾವಸದ ಮರದಿಂದ ತಯಾರಿಸಲಾಗುತ್ತದೆ. ಹಿಂದಿನ ಕಾಲದಲ್ಲಿ ಹರಕೆ ಹೊತ್ತವರು ಸಿಡಿರಣ್ಣಕ್ಕೆ ವ್ಯಕ್ತಿಯ ಬೆನ್ನಿಗೆ ಹಗ್ಗವನ್ನುಕಟ್ಟಿ ಸಿಡಿ ಕಂಬಕ್ಕೆ ನೇತು ಹಾಕಿ ಸಿಡಿ ಹಾರಿಸುತ್ತಿದ್ದರು. ನಂತರದ ವರ್ಷಗಳಲ್ಲಿ ಮಾನವ ಪ್ರತಿಮೆಯನ್ನು ಮಾಡಿ ಸಿಡಿ ಮರಕ್ಕೆ ಕಟ್ಟಿ ಸಿಡಿ ಹಾರಿಸುವುದು ಸಂಭ್ರಮ ಸಡಗರದ ಭಾಗವಾಗಿದೆ.ಸಿಡಿ ಬಂಡಿಯನ್ನು ವಿವಿಧ ರೀತಿಯ ಹೂಗಳು ಹಾಗೂ ಬಣ್ಣ ಬಣ್ಣದ ಬಲೂನ್‌ಗಳಿಂದ ಅಲಂಕಾರಗೊಳಿಸಿ ಜ.30ರ ಮಧ್ಯ ರಾತ್ರಿ 12 ಗಂಟೆಗೆ ಕೋಟೆ ಬೀದಿ ನಾಡಗೌಡರ ಮನೆ ಮುಂಭಾಗದಿಂದ ಮೆರವಣಿಗೆ ಹೊರಡುತ್ತದೆ. ಸಾರಂಗ ಪಾಣಿ ಬೀದಿ , ಕೋಟೆ ಬೀದಿ , ಮೈಸೂರು ರಸ್ತೆ ಮುಖಾಂತರ ಪೇಟೆ ಬೀದಿ , ಗಂಗಾಮತ ಬೀದಿ ಸುತ್ತಿ ಅನಂತರಾಮ್ ಸರ್ಕಲ್ ಗೆ ಬಂದು ಸುಲ್ತಾನ್ ರಸ್ತೆಯಲ್ಲಿ ಇರುವ ಪಟ್ಟಲದಮ್ಮ ದೇವಾಲಯಕ್ಕೆ ಸಾಗುತ್ತದೆ. ಭಕ್ತರು ಹಣ್ಣು ಜವನ ಎಸೆದು ಧನ್ಯತೆ ಮೆರೆಯುತ್ತಾರೆ. ತೆಂಗಿನ ಈಡುಗಾಯಿ ಹೊಡೆದು ಹರಕೆ ತೀರಿಸುತ್ತಾರೆ. ಸಿಡಿ ದೇವಸ್ಥಾನದ ಆವರಣದಲ್ಲಿ ಮೂರು ಸುತ್ತು ಸುತ್ತಿ ಸಿಡಿಯನ್ನು ಅಂತಿಮಗೊಳಿಸಲಾಗುತ್ತದೆ.
ಜ.31ರಂದು ರಂದು ನಡೆಯಲ್ಲಿರುವ ಕೊಂಡೋತ್ಸವದಲ್ಲಿ ಅರ್ಚಕ ರಘು ಮೊದಲು ಹಾಯುವರು ನಂತರ ಹರಕೆವೊತ್ತ ನೂರಾರು ಭಕ್ತರು ಕೊಂಡ ಹಾಯಲಿದ್ದಾರೆ.ಪೊಲೀಸ್ ಬಂದೋಬಸ್ತ್:
ಸಿಡಿ ಹಬ್ಬಕ್ಕೆ ಸಾವಿರಾರು ಭಕ್ತರು ವಿವಿಧ ಜಿಲ್ಲೆಗಳಿಂದ ಆಗಮಿಸುವ ಹಿನ್ನೆಲೆಯಲ್ಲಿ ಡಿವೈಎಸ್‌ಪಿ ಯಶ್ವಂತ್ ಕುಮಾರ್ ಹಾಗೂ ಸರ್ಕಲ್ ಇನ್ಸ್ಪೇಕ್ಟರ್ ಶ್ರೀಧರ್ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ದೇವರ ದರ್ಶಕ್ಕೆ ಯಾವುದೇ ತೊಂದರೆಯಾಗದಂತೆ ಪೊಲೀಸ್ ಇಲಾಖೆಯಿಂದ ಆಗತ್ಯಕ್ರಮ ಕೈಗೊಳ್ಳಲಾಗಿದೆ.