ಕೆ.ಆರ್.ಪೇಟೆ:

ಪಟ್ಟಣದ ಟಿ.ಬಿ.ವೃತ್ತದ ಬಳಿ ಕರ್ನಾಟಕ ರಕ್ಷಣಾ ವೇದಿಕೆಯಿಂದ 71ನೇ ಕನ್ನಡ ರಾಜ್ಯೋತ್ಸವವನ್ನು ಕನ್ನಡಾಭಿಮಾನಿಗಳ ಸಮ್ಮುಖದಲ್ಲಿ ಆಚರಿಸಲಾಯಿತು.

ಶಾಸಕ ಎಚ್.ಟಿ.ಮಂಜು ಹಾಗೂ ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಅವರು ಜಂಟಿಯಾಗಿ ಕನ್ನಡ ಧ್ವಜಾರೋಹಣ ನೆರವೇರಿಸಿದರು. ನೆರೆದಿದ್ದ ಕನ್ನಡಾಭಿಮಾನಿಗಳು ಕನ್ನಡ ನಾಡು, ನುಡಿಯ ಜಯಘೋಷಗಳನ್ನು ಮೊಳಗಿಸಿದರು.

ಶಾಸಕ ಎಚ್.ಟಿ.ಮಂಜು ಮಾತನಾಡಿ, ಕನ್ನಡ ನೆಲ, ಜಲ ಹಾಗೂ ಭಾಷಗೆ ಕಂಟಕ ಎದುರಾದಾಗ ಮೊದಲು ಹೋರಾಟಕ್ಕೆ ಧುಮುಕುವ ಸಂಘಟನೆ ಕರ್ನಾಟಕ ರಕ್ಷಣಾ ವೇದಿಕೆಯಾಗಿದೆ. ಭಾಷ, ನೆಲ, ಜಲದ ವಿಚಾರದಲ್ಲಿ ನಾವೆಲ್ಲರೂ ಧರ್ಮ ಮತ್ತು ಜಾತಿ ಭೇದ ಮರೆತು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.

ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಕನ್ನಡ ಭಾಷಗೆ ಸಾವಿರಾರು ವರ್ಷಗಳ ಶ್ರೀಮಂತ ಇತಿಹಾಸವಿದೆ. ಕನ್ನಡ ಭಾಷೆ ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಪರಿಚಯಿಸುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ ಎಂದರು.


ಮಂಡ್ಯ ಜಿಲ್ಲಾ ಕರವೇ ಅಧ್ಯಕ್ಷ ಡಿ.ಎಸ್.ವೇಣು ಮಾತನಾಡಿ, ಬೆಳಗಾವಿ ಗಡಿ ಭಾಗದಲ್ಲಿ ಕನ್ನಡ ರಾಜ್ಯೋತ್ಸವವನ್ನು ಕಪ್ಪು ದಿನವನ್ನಾಗಿ ಆಚರಿಸುವ ಮೂಲಕ ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಾಗುತ್ತಿದೆ. ಕನ್ನಡ ಭಾಷಗೆ ಸೂಕ್ತ ಗೌರವ ಸಿಗಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕರವೇ ಉಪಾಧ್ಯಕ್ಷ ಸಾಸಲು ಗುರುಮೂರ್ತಿ, ತಾಲೂಕು ಅಧ್ಯಕ್ಷ ಅಗ್ರಹಾರ ಬಾಚಹಳ್ಳಿ ಶ್ರೀನಿವಾಸ್, ಘಟಕದ ಅಧ್ಯಕ್ಷ ಚೇತನ್, ಸಂಘಟನಾ ಕಾರ್ಯದರ್ಶಿ ಸ್ವಾಮಿಗೌಡ, ಉಪಾಧ್ಯಕ್ಷ ಗೋಪಿಗೌಡ, ಕಸಬಾ ಅಧ್ಯಕ್ಷ ಕೊಮ್ಮೆನಹಳ್ಳಿ ಅನಿಲ್ ಗೌಡ, ನಗರ ಅಧ್ಯಕ್ಷ ಮದನ್, ಯುವ ಘಟಕದ ಅಧ್ಯಕ್ಷ ಆನಂದ್, ಉಪಾಧ್ಯಕ್ಷ ಶಿವಪ್ರಶಾಂತ್ ಸೇರಿದಂತೆ ರವಿ, ಅಜಯ್, ಜೈರ್, ಹರ್ಷ, ಹರೀಶ್ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ಕನ್ನಡಾಭಿಮಾನಿಗಳು ಮತ್ತು ಯುವಕರು ಉಪಸ್ಥಿತರಿದ್ದರು.

ಕನ್ನಡ ಧ್ವಜಗಳನ್ನು ಹಿಡಿದು ಕನ್ನಡ ಗೀತೆಗಳನ್ನು ಹಾಡಿದ ಕನ್ನಡಾಭಿಮಾನಿಗಳು ನಾಡು-ನುಡಿಯ ಘೋಷಣೆಗಳೊಂದಿಗೆ ಸಂಭ್ರಮಿಸಿದರು.